ವಿದ್ಯುತ್, ನೀರು, ಗ್ಯಾಸ್, ಕ್ರೆಡಿಟ್ ಕಾರ್ಡ್ ಸೇರಿದಂತೆ ವಿವಿಧ ಬಿಲ್‌ಗಳನ್ನು ಪಾವತಿಸಲು ಒಂದೊಂದು ಆ್ಯಪ್ ಬಳಸಬೇಕಾದ ಬಳಕೆದಾರರಿಗೆ ಇದೀಗ ಗುಡ್‌ನ್ಯೂಸ್ ಸಿಕ್ಕಿದೆ. ಮೆಟಾ ಮಾಲೀಕತ್ವದ WhatsApp ಭಾರತದಲ್ಲಿ ಹೊಸ Bill Payments ಫೀಚರ್ ಅನ್ನು ಪರಿಚಯಿಸಿದೆ. ಈ ಸೇವೆಯ ಮೂಲಕ ಬಳಕೆದಾರರು ಬೇರೆ ಆ್ಯಪ್‌ಗಳಿಗೆ ತೆರಳದೆ ನೇರವಾಗಿ WhatsAppನಲ್ಲೇ ವಿವಿಧ ಯುಟಿಲಿಟಿ ಬಿಲ್‌ಗಳನ್ನು ಹುಡುಕಲು, ನಿರ್ವಹಿಸಲು ಮತ್ತು ಪಾವತಿಸಲು ಸಾಧ್ಯವಾಗಲಿದೆ.
ಈ ಹೊಸ ಸೇವೆ Bharat Connect (BBPS) ನೆಟ್‌ವರ್ಕ್‌ನಿಂದ ಚಾಲಿತವಾಗಿದ್ದು, 30ಕ್ಕೂ ಹೆಚ್ಚು ಬಿಲ್ ಪಾವತಿ ವಿಭಾಗಗಳಲ್ಲಿ 22,722 ಬಿಲ್ಲರ್‌ಗಳಿಗೆ ಬಳಕೆದಾರರಿಗೆ ಪ್ರವೇಶ ಕಲ್ಪಿಸುತ್ತದೆ. ಇದರಿಂದ ದಿನನಿತ್ಯದ ಬಿಲ್ ಪಾವತಿ ಪ್ರಕ್ರಿಯೆ ಮತ್ತಷ್ಟು ಸರಳವಾಗಲಿದೆ.
Meta India MD ಅರುಣ್ ಶ್ರೀನಿವಾಸ್ ಹೇಳಿದ್ದೇನು?
ಈ ಹೊಸ ಫೀಚರ್ ಕುರಿತು ಮಾತನಾಡಿರುವ Meta India Managing Director ಹಾಗೂ Country Head ಅರುಣ್ ಶ್ರೀನಿವಾಸ್, WhatsApp ಈಗಾಗಲೇ ಲಕ್ಷಾಂತರ ಭಾರತೀಯರಿಗೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸುವುದರಿಂದ ಹಿಡಿದು ವ್ಯವಹಾರ, ನಾಗರಿಕ ಸೇವೆಗಳು, ಮೆಟ್ರೋ ಟಿಕೆಟ್ ಹಾಗೂ ಇನ್ಶೂರೆನ್ಸ್‌ವರೆಗೆ ಹಲವು ಸೇವೆಗಳನ್ನು ಒಂದೇ ಸ್ಥಳದಲ್ಲಿ ಬಳಸುವ ಅವಕಾಶ ನೀಡುತ್ತಿದೆ ಎಂದು ಹೇಳಿದ್ದಾರೆ.
Bill Payments ಸೇವೆಯ ಮೂಲಕ ಇದೇ ಸರಳತೆಯನ್ನು ಪ್ರತಿಯೊಂದು ಮನೆಯ ದಿನನಿತ್ಯದ ಅಗತ್ಯಗಳಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯಾವೆಲ್ಲ ಬಿಲ್‌ಗಳನ್ನು ಪಾವತಿಸಬಹುದು?
ಹೊಸ ಫೀಚರ್‌ನಲ್ಲಿ ಎಲೆಕ್ಟ್ರಿಸಿಟಿ, ಗ್ಯಾಸ್, ವಾಟರ್, FASTag, ಇನ್ಶೂರೆನ್ಸ್, ಕ್ರೆಡಿಟ್ ಕಾರ್ಡ್ ಬಿಲ್ ಹಾಗೂ ಲೋನ್ ರೀಪೇಮೆಂಟ್ ಸೇರಿದಂತೆ ಹಲವು ವಿಭಾಗಗಳು ಲಭ್ಯವಿರಲಿವೆ. ಬಳಕೆದಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬಿಲ್ ಕೆಟಗರಿ ಹಾಗೂ ಬಿಲ್ಲರ್ ಆಯ್ಕೆ ಮಾಡಿಕೊಂಡು ಅಕೌಂಟ್ ವಿವರಗಳನ್ನು ನಮೂದಿಸಬಹುದು.
ಬಿಲ್ ಮೊತ್ತವನ್ನು ಪರಿಶೀಲಿಸಿದ ಬಳಿಕ UPI, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಪೂರ್ಣಗೊಳಿಸಬಹುದು.
ಒಂದೇ ಬಿಲ್ಲರ್‌ನ ಹಲವು ಖಾತೆ ನಿರ್ವಹಣೆ
ಈ ಸೇವೆಯ ಮತ್ತೊಂದು ವಿಶೇಷತೆ ಎಂದರೆ ಒಂದೇ ಬಿಲ್ಲರ್‌ನ ಅಡಿಯಲ್ಲಿ ಹಲವು ಖಾತೆಗಳನ್ನು ನಿರ್ವಹಿಸುವ ಅವಕಾಶ. ಅಂದರೆ ಮನೆ, ಕಚೇರಿ ಅಥವಾ ಕುಟುಂಬದ ಸದಸ್ಯರ ಬಿಲ್‌ಗಳನ್ನು ಒಂದೇ ಸ್ಥಳದಲ್ಲಿ ನಿರ್ವಹಿಸಬಹುದು.
ಈ ಹಿಂದೆ ಪಾವತಿ ಮಾಡಿರುವ ಬಿಲ್ಲರ್‌ಗಳನ್ನು Payments Home ವಿಭಾಗದಿಂದ ಒನ್-ಟ್ಯಾಪ್ ಮೂಲಕ ಪ್ರವೇಶಿಸಬಹುದು. ಆಗಾಗ್ಗೆ ಬಳಸುವ ಬಿಲ್ ವಿಭಾಗಗಳು ಕೂಡ ಹೋಮ್ ಸ್ಕ್ರೀನ್‌ನಲ್ಲಿ ಸುಲಭವಾಗಿ ಕಾಣಿಸಿಕೊಳ್ಳಲಿವೆ.
6 ಹಂತಗಳಲ್ಲಿ ಬಿಲ್ ಪಾವತಿ
WhatsAppನಲ್ಲಿ ಬಿಲ್ ಪಾವತಿಸುವ ಪ್ರಕ್ರಿಯೆ ಕೂಡ ಸರಳವಾಗಿದೆ.
- WhatsApp ತೆರೆಯಿರಿ ಮತ್ತು ಹೋಮ್ ಸ್ಕ್ರೀನ್‌ನಲ್ಲಿರುವ ₹ ಐಕಾನ್ ಮೇಲೆ ಟ್ಯಾಪ್ ಮಾಡಿ.
- ಬಿಲ್ ಕೆಟಗರಿ ಹಾಗೂ ಬಿಲ್ಲರ್ ಆಯ್ಕೆ ಮಾಡಿ.
- ಅಗತ್ಯವಿರುವ ಅಕೌಂಟ್ ವಿವರಗಳನ್ನು ನಮೂದಿಸಿ.
- ಬಿಲ್ ಮೊತ್ತವನ್ನು ಪರಿಶೀಲಿಸಿ.
- UPI, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ವಿಧಾನ ಆಯ್ಕೆ ಮಾಡಿ.
- ಪೇಮೆಂಟ್ ದೃಢೀಕರಿಸಿ.
ಈ ಫೀಚರ್ ಭಾರತದಲ್ಲಿ ಹಂತ ಹಂತವಾಗಿ ರೋಲ್‌ಔಟ್ ಆಗುತ್ತಿದ್ದು, Android ಮತ್ತು iOS ಬಳಕೆದಾರರಿಗೆ ಮುಂಬರುವ ವಾರಗಳಲ್ಲಿ ಲಭ್ಯವಾಗಲಿದೆ. ಮೊಬೈಲ್ ರೀಚಾರ್ಜ್, ಮೆಟ್ರೋ ಟಿಕೆಟ್ ಬುಕಿಂಗ್ ಹಾಗೂ ನಾಗರಿಕ ಸೇವೆಗಳ ಬಳಿಕ WhatsApp ತನ್ನ ಡಿಜಿಟಲ್ ಸೇವೆಗಳ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತಿದೆ.
