ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರಿಗೆ ಕಾರು ಕಂಪನಿಗಳು ಮತ್ತೊಂದು ಶಾಕ್ ನೀಡಿವೆ. ಕಚ್ಚಾ ವಸ್ತುಗಳ ಬೆಲೆ ಹಾಗೂ ಸರಕು ಸಾಗಣೆ ವೆಚ್ಚದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಿವೆ. ಹುಂಡೈ, ಟಾಟಾ ಮೋಟಾರ್ಸ್, ಎಂಜಿ ಸೇರಿದಂತೆ ಹಲವು ಕಂಪನಿಗಳ ವಾಹನಗಳ ಬೆಲೆ ಪರಿಷ್ಕರಣೆಯಾಗಿದ್ದು, ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಹೊರೆ ಬೀಳಲಿದೆ.
ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಮಾರುತಿ ಸುಜುಕಿ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಹುಂಡೈ ಮೋಟಾರ್ ಇಂಡಿಯಾ ಕೂಡ ತನ್ನ ವಿವಿಧ ಮಾದರಿಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಘೋಷಿಸಿದೆ. ಕಂಪನಿಯ ಕಾರುಗಳ ಬೆಲೆಯಲ್ಲಿ ಶೇ.1ರಷ್ಟು ಹೆಚ್ಚಳವಾಗಲಿದೆ ಎಂದು ತಿಳಿಸಲಾಗಿದೆ.
ಹುಂಡೈ ಕಂಪನಿಯ ಬೆಲೆ ಏರಿಕೆಯ ಪರಿಣಾಮ ಅದರ ಹಲವು ಜನಪ್ರಿಯ ಮಾದರಿಗಳ ಮೇಲೆ ಬೀಳಲಿದೆ. ಕ್ರೆಟಾ, ವೆನ್ಯೂ, ವರ್ಣಾ, ಅಲ್ಕಾಜರ್, ಎಕ್ಸ್‌ಟರ್, ಐ20 ಹಾಗೂ ಗ್ರಾಂಡ್ ಐ10 ನಿಯೋಸ್ ಸೇರಿದಂತೆ ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಎಸ್‌ಯುವಿ ಮಾದರಿಗಳ ಬೆಲೆ ಹೆಚ್ಚಾಗಲಿದೆ. ಮಾದರಿ ಹಾಗೂ ವೇರಿಯೆಂಟ್‌ಗೆ ಅನುಗುಣವಾಗಿ ಸುಮಾರು ₹15,000ರಿಂದ ₹70,000ವರೆಗೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಟಾಟಾ ಕಾರುಗಳಿಗೂ ದರ ಏರಿಕೆ
ಇತ್ತ ಟಾಟಾ ಮೋಟಾರ್ಸ್ ಕೂಡ ತನ್ನ ಪ್ಯಾಸೆಂಜರ್ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ. ಕಂಪನಿಯ ಜನಪ್ರಿಯ ನೆಕ್ಸಾನ್, ಪಂಚ್, ಹ್ಯಾರಿಯರ್, ಕರ್ವ್ ಇವಿ ಹಾಗೂ ಟಿಯಾಗೋ ಸೇರಿದಂತೆ ಹಲವು ಮಾದರಿಗಳ ಬೆಲೆ ಏರಿಕೆಯಾಗಲಿದೆ. ಗರಿಷ್ಠ ₹25,000ವರೆಗೆ ದರ ಹೆಚ್ಚಳವಾಗಲಿದೆ ಎಂದು ತಿಳಿಸಲಾಗಿದೆ.
ಎಂಜಿ ಮೋಟಾರ್ ಕಂಪನಿಯ ವಾಹನಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಶೋರೂಮ್ ಮೂಲಗಳ ಪ್ರಕಾರ, ಎಂಜಿ ಕಾರುಗಳ ಮಾದರಿಗಳಿಗೆ ಅನುಗುಣವಾಗಿ ಸುಮಾರು ₹40,000ರಿಂದ ₹50,000ವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ.
ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಸಂಘರ್ಷಗಳು ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಇದರ ಜೊತೆಗೆ ಸರಕು ಸಾಗಣೆ ಮತ್ತು ಇತರ ನಿರ್ವಹಣಾ ವೆಚ್ಚಗಳೂ ಏರಿಕೆಯಾಗಿರುವುದರಿಂದ ಕಾರುಗಳ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಕಂಪನಿಗಳ ಮಾರಾಟ ಪ್ರತಿನಿಧಿಗಳು ತಿಳಿಸಿದ್ದಾರೆ.
ಒಂದೆಡೆ ಕಾರುಗಳ ಬೆಲೆ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಹೊಸ ಕಾರು ಖರೀದಿಸಲು ಮುಂದಾಗಿದ್ದ ಗ್ರಾಹಕರಿಗೆ ಇದು ನಿರಾಸೆ ಮೂಡಿಸಿದೆ. ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿರುವುದರಿಂದ ಕೆಲವರು ತಮ್ಮ ಕಾರು ಖರೀದಿ ಯೋಜನೆಯನ್ನು ಮುಂದೂಡುವ ಅಥವಾ ಸದ್ಯಕ್ಕೆ ಕೈಬಿಡುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಾಹನ ತಯಾರಿಕಾ ಕಂಪನಿಗಳು ದರ ಪರಿಷ್ಕರಣೆ ಮಾಡಲಿವೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.
