ಆದಾಯ ತೆರಿಗೆ ಇಲಾಖೆಯು ತೆರಿಗೆ ಪಾವತಿದಾರರಿಗೆ ಮತ್ತು ಸಾಮಾನ್ಯ ಜನರಿಗೆ ದೊಡ್ಡ ಮಟ್ಟದ ಸಮಾಧಾನ ನೀಡುವ ನಿಟ್ಟಿನಲ್ಲಿ ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿದೆ. ಹೊಸ ಆದಾಯ ತೆರಿಗೆ ಕಾಯ್ದೆ 2025ರ ಅಡಿಯಲ್ಲಿ ಪ್ರಸ್ತಾವಿಸಲಾಗಿರುವ ಈ ನಿಯಮಗಳು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿವೆ. ಬ್ಯಾಂಕ್ ವಹಿವಾಟಿನಿಂದ ಹಿಡಿದು ಆಸ್ತಿ ಖರೀದಿಯವರೆಗೆ ಹಲವು ಕ್ಷೇತ್ರಗಳಲ್ಲಿ ಈಗಿರುವ ಮಿತಿಗಳನ್ನು ಹೆಚ್ಚಿಸಲಾಗಿದ್ದು, ಇದರಿಂದ ಸಾಮಾನ್ಯ ಜನರ ಮೇಲಿನ ದಾಖಲೆಗಳ ಒತ್ತಡ ಕಡಿಮೆಯಾಗಲಿದೆ.
1. ಬ್ಯಾಂಕ್ ವಹಿವಾಟು: ವಾರ್ಷಿಕ ಮಿತಿ ಜಾರಿ ಈ ಹಿಂದೆ ನೀವು ಒಂದೇ ದಿನದಲ್ಲಿ 50 ಸಾವಿರ ರೂಪಾಯಿಗಿಂತ ಹೆಚ್ಚು ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿದರೆ ಅಥವಾ ಹಿಂಪಡೆದರೆ ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿತ್ತು. ಆದರೆ ಹೊಸ ನಿಯಮದ ಪ್ರಕಾರ, ಈ ದೈನಂದಿನ ಮಿತಿಯನ್ನು ತೆಗೆದುಹಾಕಲಾಗುತ್ತಿದೆ. ಬದಲಾಗಿ, ವಾರ್ಷಿಕ 10 ಲಕ್ಷ ರೂಪಾಯಿ ಮೊತ್ತದ ಮಿತಿ ಹೇರಲಾಗಿದೆ. ಅಂದರೆ, ಒಂದು ಹಣಕಾಸು ವರ್ಷದಲ್ಲಿ ಒಟ್ಟು ಹತ್ತು ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುವವರಿಗೆ ಮಾತ್ರ ಪ್ಯಾನ್ ಕಾರ್ಡ್ ಅಗತ್ಯವಿರುತ್ತದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ಇದು ದೊಡ್ಡ ವರದಾನವಾಗಲಿದೆ.
2. ವಾಹನ ಖರೀದಿ: 5 ಲಕ್ಷದವರೆಗೆ ವಿನಾಯಿತಿ ಮೋಟಾರು ವಾಹನ ಖರೀದಿಸುವಾಗ ಈಗಿರುವ ಕಿರಿಕಿರಿ ಇನ್ನು ಮುಂದೆ ಇರುವುದಿಲ್ಲ. ಈವರೆಗೆ ಯಾವುದೇ ಮೌಲ್ಯದ ಕಾರು ಅಥವಾ ದ್ವಿಚಕ್ರ ವಾಹನ ಖರೀದಿಸಿದರೂ ಪ್ಯಾನ್ ಕಾರ್ಡ್ ನೀಡಬೇಕಿತ್ತು. ಆದರೆ 2026ರಿಂದ 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಾಹನ ಖರೀದಿಗೆ ಮಾತ್ರ ಪ್ಯಾನ್ ಕಡ್ಡಾಯವಾಗಲಿದೆ. ಇದರಿಂದ ಬಜೆಟ್ ಕಾರುಗಳು ಮತ್ತು ಸಾಮಾನ್ಯ ದ್ವಿಚಕ್ರ ವಾಹನ ಖರೀದಿಸುವ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ.
3. ಆಸ್ತಿ ವ್ಯವಹಾರ: ಮಿತಿ ದುಪ್ಪಟ್ಟು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಭೂಮಿ ಅಥವಾ ಮನೆ ಖರೀದಿಯ ಸಮಯದಲ್ಲಿ ಪ್ಯಾನ್ ಕಾರ್ಡ್ ನೀಡಬೇಕಾದ ಮಿತಿಯನ್ನು 10 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಅಂದರೆ 20 ಲಕ್ಷದೊಳಗಿನ ಆಸ್ತಿ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಿರುವುದಿಲ್ಲ. ಸಣ್ಣ ನಿವೇಶನ ಅಥವಾ ಮನೆ ಕೊಳ್ಳುವವರಿಗೆ ಪ್ರಕ್ರಿಯೆಗಳು ಈಗ ಸುಲಭವಾಗಲಿವೆ.
ಹೋಟೆಲ್ ಮತ್ತು ಸಮಾರಂಭಗಳ ಬಿಲ್ ಮದುವೆ ಅಥವಾ ಯಾವುದೇ ದೊಡ್ಡ ಸಮಾರಂಭಗಳನ್ನು ಆಯೋಜಿಸುವಾಗ ಹೋಟೆಲ್ ಅಥವಾ ಕನ್ವೆನ್ಷನ್ ಸೆಂಟರ್‌ಗಳಿಗೆ ಪಾವತಿಸುವ ಮೊತ್ತಕ್ಕೆ ಸಂಬಂಧಿಸಿದಂತೆ ಮಿತಿಯನ್ನು ಹೆಚ್ಚಿಸಲಾಗಿದೆ. ಹಿಂದೆ 50 ಸಾವಿರ ರೂಪಾಯಿ ದಾಟಿದರೆ ಪ್ಯಾನ್ ಬೇಕಿತ್ತು, ಈಗ ಈ ಮೊತ್ತವನ್ನು 1 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.
ವಿಮೆ ಮತ್ತು ಇತರ ಬದಲಾವಣೆಗಳು ಜೀವ ವಿಮಾ ಪಾಲಿಸಿಗಳಿಗೆ ಸಂಬಂಧಿಸಿದಂತೆ, ವರ್ಷಕ್ಕೆ 50 ಸಾವಿರ ರೂ. ಪ್ರೀಮಿಯಂ ಮಿತಿಯನ್ನು ತೆಗೆದುಹಾಕಿ, ಹೊಸ ಪಾಲಿಸಿ ಅಥವಾ ವಿಮಾ ಕಂಪನಿಯೊಂದಿಗೆ ಸಂಬಂಧ ಆರಂಭಿಸುವಾಗಲೇ ಪ್ಯಾನ್ ಕಡ್ಡಾಯಗೊಳಿಸಲಾಗಿದೆ. ಇದು ಆರಂಭಿಕ ಹಂತದಲ್ಲಿ ಪಾರದರ್ಶಕತೆ ತರಲು ಸಹಕಾರಿಯಾಗಲಿದೆ.
ಸಾಮಾನ್ಯರಿಗೆ ಆಗುವ ಲಾಭಗಳೇನು ?
ಈ ಹೊಸ ಬದಲಾವಣೆಗಳಿಂದಾಗಿ ಸಣ್ಣಪುಟ್ಟ ಆರ್ಥಿಕ ವ್ಯವಹಾರ ನಡೆಸುವ ಸಾಮಾನ್ಯ ಜನರ ಮೇಲೆ ತೆರಿಗೆ ಇಲಾಖೆಯ ಅನಗತ್ಯ ದಾಖಲೆಗಳ ಹೊರೆ ಕಡಿಮೆಯಾಗಲಿದೆ. ಈ ಬದಲಾವಣೆಗಳು ಆರ್ಥಿಕ ವ್ಯವಸ್ಥೆಯನ್ನು ಮತ್ತಷ್ಟು ಸರಳ ಮತ್ತು ಪಾರದರ್ಶಕಗೊಳಿಸುತ್ತವೆ. ದೊಡ್ಡ ಮಟ್ಟದ ವ್ಯವಹಾರಗಳನ್ನು ಮಾತ್ರ ಇಲಾಖೆ ಸೂಕ್ಷ್ಮವಾಗಿ ಗಮನಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
