ಜರ್ಮನಿಯ ಐಷಾರಾಮಿ ಕಾರು ತಯಾರಕ ಬಿಎಂಡಬ್ಲ್ಯು ಭಾರತದಲ್ಲಿ ತನ್ನ ಹೊಸ i5 Long Wheelbase (LWB) ಎಲೆಕ್ಟ್ರಿಕ್ ಸೆಡಾನ್ ಅನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್‌ಶೋರೂಂ ಬೆಲೆಯನ್ನು ರೂ. 79.60 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ವಿಶೇಷವೆಂದರೆ, ಭಾರತದಲ್ಲೇ ಸ್ಥಳೀಯವಾಗಿ ಉತ್ಪಾದನೆಯಾಗುತ್ತಿರುವ ಬಿಎಂಡಬ್ಲ್ಯುನ ಮೊದಲ ಎಲೆಕ್ಟ್ರಿಕ್ ಸೆಡಾನ್ ಇದಾಗಿದೆ. ಚೆನ್ನೈನಲ್ಲಿರುವ BMW ಗ್ರೂಪ್‌ನ ಉತ್ಪಾದನಾ ಘಟಕದಲ್ಲಿ i5 LWB ತಯಾರಾಗಲಿದೆ.
ಕಾರಿನ ವಿತರಣೆ ಈಗಾಗಲೇ ಆರಂಭವಾಗಿದ್ದು, BMW ಡೀಲರ್‌ಶಿಪ್‌ಗಳು ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಬುಕಿಂಗ್‌ಗಳು ಲಭ್ಯವಿವೆ. i5 LWB ಅನ್ನು eDrive35L M Sport ಎಂಬ ಒಂದೇ ರೂಪಾಂತರದಲ್ಲಿ ಪರಿಚಯಿಸಲಾಗಿದೆ.
99 ಕಾರುಗಳ First Edition
BMW i5 LWB ಜೊತೆಗೆ ಸೀಮಿತ ಸಂಖ್ಯೆಯ First Edition ಮಾದರಿಯನ್ನೂ ರೂ. 79.60 ಲಕ್ಷ ಬೆಲೆಗೆ ಪರಿಚಯಿಸಲಾಗಿದೆ. ಈ ವಿಶೇಷ ಆವೃತ್ತಿಯ ಕೇವಲ 99 ಯೂನಿಟ್‌ಗಳನ್ನು ತಯಾರಿಸಲಾಗಿದ್ದು, ಅಧಿಕೃತ ಬಿಡುಗಡೆಗೂ ಮುನ್ನವೇ ಎಲ್ಲಾ ಕಾರುಗಳು ಮಾರಾಟವಾಗಿವೆ ಎಂದು ಕಂಪನಿ ತಿಳಿಸಿದೆ.
First Editionನಲ್ಲಿ ವಿಶೇಷ ಸಿಲ್ವರ್ ಬ್ರಾನ್ಜ್ ಅಕ್ಸೆಂಟ್‌ಗಳು, ಫೈನ್‌ವುಡ್ ಟ್ರಿಮ್, ವಿಶೇಷ ಬ್ಯಾಡ್ಜಿಂಗ್ ಮತ್ತು ಹಿಂಬದಿ ಪ್ರಯಾಣಿಕರಿಗಾಗಿ ಟ್ಯಾಬ್ಲೆಟ್ ಹಾಗೂ ಟ್ಯಾಬ್ಲೆಟ್ ಹೋಲ್ಡರ್ ಒಳಗೊಂಡ ಮನರಂಜನಾ ಪ್ಯಾಕೇಜ್ ನೀಡಲಾಗಿದೆ.
ಉದ್ದವಾದ ವ್ಹೀಲ್‌ಬೇಸ್, ವಿಶಾಲ ಕ್ಯಾಬಿನ್
i5 LWB 5,175 ಮಿ.ಮೀ. ಉದ್ದ, 2,156 ಮಿ.ಮೀ. ಅಗಲ ಮತ್ತು 1,520 ಮಿ.ಮೀ. ಎತ್ತರ ಹೊಂದಿದೆ. ಇದರ ವ್ಹೀಲ್‌ಬೇಸ್ 3,105 ಮಿ.ಮೀ. ಆಗಿದೆ. ಉದ್ದವಾದ ವ್ಹೀಲ್‌ಬೇಸ್‌ನಿಂದಾಗಿ ಹಿಂಬದಿ ಪ್ರಯಾಣಿಕರಿಗೆ ಹೆಚ್ಚಿನ ಲೆಗ್‌ರೂಮ್ ಮತ್ತು ಆರಾಮದಾಯಕ ಆಸನ ವ್ಯವಸ್ಥೆ ದೊರೆಯಲಿದೆ.
ಹೊರಭಾಗದಲ್ಲಿ ಪ್ರಕಾಶಮಾನವಾದ ಕಿಡ್ನಿ ಗ್ರಿಲ್, ಅಡಾಪ್ಟಿವ್ LED ಹೆಡ್‌ಲೈಟ್‌ಗಳು, L ಆಕಾರದ LED ಟೇಲ್‌ಲೈಟ್‌ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು 20 ಇಂಚಿನ M ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ.
ಐಷಾರಾಮಿ ಫೀಚರ್‌ಗಳಿಂದ ಕೂಡಿದ ಕ್ಯಾಬಿನ್
ಕಾರಿನ ಒಳಭಾಗದಲ್ಲಿ 12.3 ಇಂಚಿನ ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ ಮತ್ತು 14.9 ಇಂಚಿನ ಕಂಟ್ರೋಲ್ ಡಿಸ್‌ಪ್ಲೇ ಒಳಗೊಂಡ BMW ಕರ್ವ್ಡ್ ಡಿಸ್‌ಪ್ಲೇ ಇದೆ. ಮುಂಭಾಗದ ವೆಂಟಿಲೇಟೆಡ್ ಸೀಟುಗಳು, ನಾಲ್ಕು-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು Sky Lounge ಪನೋರಮಿಕ್ ಗ್ಲಾಸ್ ರೂಫ್ ಪ್ರಮುಖ ವೈಶಿಷ್ಟ್ಯಗಳಾಗಿವೆ.
ಸಂಗೀತ ಪ್ರಿಯರಿಗಾಗಿ Bowers & Wilkins ಸರೌಂಡ್ ಸೌಂಡ್ ಸಿಸ್ಟಮ್ ನೀಡಲಾಗಿದೆ. ಇದರ ಜೊತೆಗೆ BMW Interaction Bar, CraftedClarity ಕ್ರಿಸ್ಟಲ್ ಗ್ಲಾಸ್ ಅಂಶಗಳು ಹಾಗೂ ಎಲೆಕ್ಟ್ರಿಕ್ ಕಂಫರ್ಟ್ ಸೀಟುಗಳೂ ಇವೆ.
669 ಕಿ.ಮೀ.ವರೆಗೆ ರೇಂಜ್
BMW i5 eDrive35Lನಲ್ಲಿ 81.6kWh ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ 268hp ಶಕ್ತಿ ಮತ್ತು 410Nm ಟಾರ್ಕ್ ಉತ್ಪಾದಿಸುತ್ತದೆ. ಹಿಂಬದಿ ಚಕ್ರಗಳಿಗೆ ಶಕ್ತಿ ಪೂರೈಸುವ ಈ ಕಾರು ಕೇವಲ 6.7 ಸೆಕೆಂಡ್‌ಗಳಲ್ಲಿ 0-100 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 195 ಕಿ.ಮೀ.
MIDC ಪರೀಕ್ಷಾ ಮಾನದಂಡದ ಪ್ರಕಾರ, ಸಂಪೂರ್ಣ ಚಾರ್ಜ್‌ನಲ್ಲಿ 669 ಕಿ.ಮೀ.ವರೆಗೆ ರೇಂಜ್ ನೀಡುತ್ತದೆ ಎಂದು BMW ಹೇಳಿದೆ.
33 ನಿಮಿಷದಲ್ಲಿ 10-80% ಚಾರ್ಜ್
i5 LWB 160kW DC ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಇದರ ಮೂಲಕ ಬ್ಯಾಟರಿಯನ್ನು ಶೇ.10ರಿಂದ ಶೇ.80ರವರೆಗೆ ಸುಮಾರು 33 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು. ಕಾರಿನೊಂದಿಗೆ 11kW BMW ವಾಲ್‌ಬಾಕ್ಸ್ ಚಾರ್ಜರ್ ಕೂಡ ನೀಡಲಾಗುತ್ತದೆ.
ಸುರಕ್ಷತೆಗೆ ಹೆಚ್ಚಿನ ಒತ್ತು
ಭಾರತೀಯ ರಸ್ತೆ ಪರಿಸ್ಥಿತಿಗಳಿಗೆ ಅನುಗುಣವಾಗಿ i5 LWBನ ಸಸ್ಪೆನ್ಷನ್ ಅನ್ನು ಹೊಂದಿಸಲಾಗಿದೆ. ಅಡಾಪ್ಟಿವ್ ರಿಯರ್-ಆಕ್ಸಲ್ ಏರ್ ಸಸ್ಪೆನ್ಷನ್ ಮತ್ತು ವರ್ಧಿತ ಗ್ರೌಂಡ್ ಕ್ಲಿಯರೆನ್ಸ್ ಕೂಡ ಲಭ್ಯವಿದೆ.
ಸುರಕ್ಷತಾ ವಿಭಾಗದಲ್ಲಿ ಎಂಟು ಏರ್‌ಬ್ಯಾಗ್‌ಗಳು, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಪಾರ್ಕಿಂಗ್ ಅಸಿಸ್ಟೆಂಟ್ ಪ್ರೊಫೆಷನಲ್, ರಿವರ್ಸ್ ಅಸಿಸ್ಟೆಂಟ್, ಲೇನ್ ಚೇಂಜ್ ವಾರ್ನಿಂಗ್, ಕ್ರಾಸ್ ಟ್ರಾಫಿಕ್ ವಾರ್ನಿಂಗ್, ಫ್ರಂಟ್ ಮತ್ತು ರಿಯರ್ ಕೊಲಿಷನ್ ವಾರ್ನಿಂಗ್ ಹಾಗೂ ಆಕ್ಟಿವ್ ಪೆಡೆಸ್ಟ್ರಿಯನ್ ಪ್ರೊಟೆಕ್ಷನ್ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ.
BMW i5 LWBನಲ್ಲಿ BMW Operating System 8.5, BMW Intelligent Personal Assistant, BMW Maps, Remote Software Upgrade, MyBMW ಅಪ್ಲಿಕೇಶನ್, Digital Key Plus, ವೈರ್‌ಲೆಸ್ Apple CarPlay ಮತ್ತು Android Auto ಕೂಡ ಲಭ್ಯವಿವೆ.
BMW ಎರಡು ವರ್ಷಗಳ ಅನಿಯಮಿತ ಕಿಲೋಮೀಟರ್ ವಾಹನ ವಾರಂಟಿ ನೀಡುತ್ತಿದ್ದು, ಹೈ-ವೋಲ್ಟೇಜ್ ಬ್ಯಾಟರಿಗೆ ಎಂಟು ವರ್ಷ ಅಥವಾ 1.60 ಲಕ್ಷ ಕಿ.ಮೀ.ವರೆಗೆ ವಾರಂಟಿ ನೀಡಲಾಗಿದೆ. 24×7 ರಸ್ತೆಬದಿಯ ನೆರವು ಕೂಡ ಎರಡು ವರ್ಷಗಳವರೆಗೆ ಲಭ್ಯವಿದೆ.
