ಬೆಂಗಳೂರು: ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆ ಮೇಲೆ ನಿನ್ನೆ ರಾತ್ರಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇನ್ಸ್‌ಪೆಕ್ಟರ್ ರಾಜಶೇಖರ್, PSI ರುಮಾನ್ ಪಾಷಾ ಮತ್ತು ಖಾಸಗಿ ವ್ಯಕ್ತಿ ಇಮ್ರಾನ್ ಬಾಬು (32) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್‌ಪಿ ವಂಶಿಕೃಷ್ಣ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಕಳೆದುಹೋದ ಆಭರಣ ಮತ್ತು ನಗದು ರಿಕವರಿ ಸಂಬಂಧ ದೂರುದಾರ ಮಂಜುನಾಥ್ ಎನ್‌ಸಿಆರ್ (ನಾನ್-ಕಾಗ್ನಿಜಬಲ್ ರಿಪೋರ್ಟ್) ದಾಖಲಿಸಿದ್ದರು. ಈ ಪ್ರಕರಣದ ತನಿಖೆಯನ್ನು ಮುಂದುವರಿಸಲು ಮತ್ತು ಆಭರಣವನ್ನು ಹುಡುಕಿ ಕೊಡಲು ಇನ್ಸ್‌ಪೆಕ್ಟರ್ ರಾಜಶೇಖರ್ ಮತ್ತು PSI ರುಮಾನ್ ಪಾಷಾ ₹2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಜುನಾಥ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಖಾಸಗಿ ವ್ಯಕ್ತಿಯ ಮೂಲಕ ಲಂಚ ಸ್ವೀಕಾರ
ಇನ್ಸ್‌ಪೆಕ್ಟರ್ ರಾಜಶೇಖರ್ ತನ್ನ ಡ್ರೈವರ್ ಆಗಿ ನೇಮಿಸಿಕೊಂಡಿದ್ದ ಖಾಸಗಿ ವ್ಯಕ್ತಿ ಇಮ್ರಾನ್ ಬಾಬು ಮೂಲಕ ₹1 ಲಕ್ಷ ಮುಂಗಡ ಹಣವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೂವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಲೋಕಾಯುಕ್ತದಿಂದ ವಿಚಾರಣೆ
ಸದ್ಯ ಇನ್ಸ್‌ಪೆಕ್ಟರ್ ರಾಜಶೇಖರ್, PSI ರುಮಾನ್ ಪಾಷಾ ಮತ್ತು ಇಮ್ರಾನ್ ಬಾಬು ಅವರನ್ನು ಬಂಧಿಸಲಾಗಿದ್ದು, ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.