ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ, ಸತತ 12ನೇ ಭಾಷಣವನ್ನು ಮಾಡಿ, ದೇಶದ ಇತಿಹಾಸದಲ್ಲಿ ಸುದೀರ್ಘವಾದ 103 ನಿಮಿಷಗಳ ಭಾಷಣದ ದಾಖಲೆಯನ್ನು ಬರೆದಿದ್ದಾರೆ. ಬೆಳಿಗ್ಗೆ 7:34ಕ್ಕೆ ಆರಂಭವಾದ ಈ ಭಾಷಣ ಬೆಳಿಗ್ಗೆ 9:17ಕ್ಕೆ ಮುಕ್ತಾಯಗೊಂಡಿತು, ಕಳೆದ ವರ್ಷದ 98 ನಿಮಿಷಗಳ ದಾಖಲೆಯನ್ನು ಮುರಿಯಿತು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಆಸಕ್ತಿಯ ವಿಷಯಗಳಾದ ಆರ್ಥಿಕ ಸಾಮರ್ಥ್ಯ, ರಾಷ್ಟ್ರೀಯ ಭದ್ರತೆ, ಯುವಜನತೆಗೆ ಉದ್ಯೋಗ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಒಳಗೊಂಡಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಈ ಭಾಷಣವು ‘ವಿಕಸಿತ ಭಾರತ’ದ ಕನಸನ್ನು ಜನರಿಗೆ ಮನವರಿಕೆ ಮಾಡಿತು. ಜೊತೆಗೆ ಸ್ವಚ್ಛ ಭಾರತ ಮತ್ತು ಏಕಕಾಲಿಕ ಚುನಾವಣೆಯಂತಹ ಸುಧಾರಣೆಗಳ ಕುರಿತು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯಿಂದ ಸ್ವಾತಂತ್ರ್ಯ ದಿನದ ಭಾಷಣಗಳ ಇತಿಹಾಸದಲ್ಲಿ ದಾಖಲೆಯನ್ನು ಸೃಷ್ಟಿಸಿದ್ದಾರೆ. 2014ರಲ್ಲಿ 65 ನಿಮಿಷಗಳ ಮೊದಲ ಭಾಷಣದಿಂದ ಆರಂಭಿಸಿ, 2015ರಲ್ಲಿ 88 ನಿಮಿಷಗಳೊಂದಿಗೆ ನೆಹರೂ ದಾಖಲೆಯನ್ನು ಮುರಿದರು. 2016ರಲ್ಲಿ 96 ನಿಮಿಷಗಳು, 2017ರಲ್ಲಿ ಅತ್ಯಂತ ಕಡಿಮೆ ಅವಧಿಯ 56 ನಿಮಿಷಗಳು, 2018ರಲ್ಲಿ 83 ನಿಮಿಷಗಳು, 2019ರಲ್ಲಿ 92 ನಿಮಿಷಗಳು, 2020ರಲ್ಲಿ 90 ನಿಮಿಷಗಳು, 2021ರಲ್ಲಿ 88 ನಿಮಿಷಗಳು, 2022ರಲ್ಲಿ 74 ನಿಮಿಷಗಳು, 2023ರಲ್ಲಿ 90 ನಿಮಿಷಗಳು, 2024ರಲ್ಲಿ 98 ನಿಮಿಷಗಳು, ಮತ್ತು 2025ರಲ್ಲಿ 103 ನಿಮಿಷಗಳ ಸುದೀರ್ಘ ಭಾಷಣದೊಂದಿಗೆ ಹೊಸ ದಾಖಲೆಯನ್ನು ಬರೆದಿದ್ದಾರೆ.ಪ್ರಧಾನಿ ಮೋದಿ ತಮ್ಮ ಭಾಷಣದ ಸಮಯವು ಉದ್ದವಾಗಿದೆ ಎಂಬ ಜನರ ಟೀಕೆಯನ್ನು ಗಮನಿಸಿದ್ದು, ದೇಶದ ಭವಿಷ್ಯಕ್ಕಾಗಿ ಎಲ್ಲ ವಿಷಯಗಳನ್ನು ಒಳಗೊಂಡು ಮಾತನಾಡುವುದು ಅಗತ್ಯ ಎಂದು ತಿಳಿಸಿದರು.
ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿ
ಕೆಂಪುಕೋಟೆಯಿಂದ ಸತತ 12 ಭಾಷಣಗಳನ್ನು ಮಾಡುವ ಮೂಲಕ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 11 ಸತತ ಭಾಷಣಗಳ ದಾಖಲೆಯನ್ನು ಮುರಿದಿದ್ದಾರೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು 17 ಸತತ ಭಾಷಣಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ, ಆದರೆ ಮೋದಿ ಈಗ ಎರಡನೇ ಸ್ಥಾನದಲ್ಲಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 10 ಸತತ ಭಾಷಣಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಭಾಷಣದ ವಿಶೇಷತೆಗಳು
ಮೋದಿಯವರ ಈ 103 ನಿಮಿಷಗಳ ಭಾಷಣವು ಕೇವಲ ಸಮಯದ ದಾಖಲೆಯಷ್ಟೇ ಅಲ್ಲ, ದೇಶದ ಭವಿಷ್ಯದ ದಿಕ್ಕನ್ನು ಸೂಚಿಸುವ ಒಂದು ರೂಪರೇಷೆಯಾಗಿತ್ತು. ಅವರು ತಮ್ಮ ಸಾಂಪ್ರದಾಯಿಕ ಕೇಸರಿ ಪೇಟ, ಬಿಳಿ ಕುರ್ತಾ, ಮತ್ತು ತ್ರಿವರ್ಣ ಸ್ಟೋಲ್‌ನೊಂದಿಗೆ ಕೆಂಪುಕೋಟೆಯ ರಾಂಪ್‌ನಲ್ಲಿ ಕಾಣಿಸಿಕೊಂಡರು. “ವಿಕಸಿತ ಭಾರತ”ದ ಕನಸನ್ನು ಈಡೇರಿಸಲು ದೇಶವಾಸಿಗಳಿಗೆ ಕರೆ ನೀಡಿದ ಅವರು, ಸ್ವಾತಂತ್ರ್ಯ ಸೇನಾನಿಗಳ ಕನಸುಗಳನ್ನು ಸಾಕಾರಗೊಳಿಸುವ ಸಂಕಲ್ಪವನ್ನು ಮಾಡಿದರು.