ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಐದು ದೇಶಗಳ ಎಂಟು ದಿನಗಳ ಪ್ರವಾಸವನ್ನು ಮುಗಿಸಿ ಇಂದು (ಗುರುವಾರ) ಬೆಳಿಗ್ಗೆ ನವದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಮರಳಿದ್ದಾರೆ. ಈ ಪ್ರವಾಸದಲ್ಲಿ ಅವರು ಘಾನಾ, ಟ್ರಿನಿಡಾಡ್ ಮತ್ತು ಟೊಬೆಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಗಳಿಗೆ ಭೇಟಿ ನೀಡಿದ್ದರು. ಪ್ರವಾಸದ ಉದ್ದೇಶವು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದು ಮತ್ತು ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಭಾರತದ ಸ್ಥಾನವನ್ನು ಗಟ್ಟಿಗೊಳಿಸುವುದು.
ಪ್ರಧಾನಿ ಮೋದಿ ತಮ್ಮ ಪ್ರವಾಸವನ್ನು ಘಾನಾದಿಂದ ಆರಂಭಿಸಿದರು, ಅಲ್ಲಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ನೀಡಿ ಗೌರವಿಸಲಾಯಿತು. ನಂತರ ಅವರು ಕೆರಿಬಿಯನ್ ದೇಶವಾದ ಟ್ರಿನಿಡಾಡ್ ಮತ್ತು ಟೊಬೆಗೊಗೆ ಭೇಟಿ ನೀಡಿದರು. ಅಲ್ಲಿ ಟೊಬೆಗೊ ಅಧ್ಯಕ್ಷೆ ಕ್ರಿಸ್ಟೀನ್ ಕಂಗಲೂ ಅವರು ಪ್ರಧಾನಿ ಮೋದಿಯವರಿಗೆ ದೇಶದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ‘ದಿ ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬೆಗೊ’ ಪ್ರದಾನ ಮಾಡಿದರು.
ಪ್ರವಾಸದ ಮೂರನೇ ಹಂತದಲ್ಲಿ, ಪ್ರಧಾನಿ ಮೋದಿ ಅರ್ಜೆಂಟೀನಾಗೆ ತೆರಳಿದ್ದರು. ಇದರ ನಂತರ ಅವರು ಬ್ರೆಜಿಲ್‌ಗೆ ಭೇಟಿ ನೀಡಿ, ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದರು ಮತ್ತು ಬ್ರೆಸಿಲಿಯಾ ರಾಜ್ಯದಲ್ಲಿ ಅಧಿಕೃತ ಭೇಟಿಗಳನ್ನು ನಡೆಸಿದರು. ಕೊನೆಯ ಹಂತದಲ್ಲಿ, ಅವರು ನಮೀಬಿಯಾಕ್ಕೆ ತೆರಳಿದ್ದು, ಅಲ್ಲಿ ‘ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್’ ಎಂಬ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು.
ಈ ಐದು ದೇಶಗಳ ಭೇಟಿಯು ಭಾರತದ ವಿದೇಶಾಂಗ ನೀತಿಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ಭೇಟಿಗಳ ಮೂಲಕ ಪ್ರಧಾನಿ ಮೋದಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಜೊತೆಗೆ ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಪ್ರತಿನಿಧಿಸಿದ್ದಾರೆ.