ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಕಟವರ್ತಿ, ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರೊಂದಿಗೆ ನರೇಂದ್ರ ಮೋದಿ ಇಂದು ಶುಕ್ರವಾರ ದೂರವಾಣಿಯಲ್ಲಿ ಮಾತನಾಡಿದ್ದಾರೆ. ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಸಹಭಾಗಿತ್ವ ಹಾಗೂ ಹೊಂದಾಣಿಕೆಯನ್ನು ಮತ್ತಷ್ಟು ಬಲಪಡಿಸುವುದು ಸೇರಿದಂತೆ ಹಲವು ವಿಚಾರಗಳನ್ನು ಇಬ್ಬರೂ ಈ ಮಾತುಕತೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಆದರೆ, ನಿರ್ದಿಷ್ಟವಾಗಿ ಯಾವ ಮಾತುಕತೆ ನಡೆಸಲಾಯಿತು ಎಂಬುದು ಗೊತ್ತಾಗಿಲ್ಲ. ಎಲಾನ್ ಮಸ್ಕ್ ಅವರ ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಆಮದು ಮಾಡಲು ಎಲ್ಲಾ ಸಿದ್ಧತೆ ನಡೆದಿರುವ ಹೊತ್ತಿನಲ್ಲಿ ಈ ಮಾತುಕತೆ ನಡೆದಿರುವುದು ಕುತೂಹಲ ಮೂಡಿಸಿದೆ.
ಒಂದೆಡೆ ಭಾರತದಲ್ಲಿ ತಂತ್ರಜ್ಞಾನದ ಇಕೋಸಿಸ್ಟಂ ಬಲಿಷ್ಠಗೊಳ್ಳುತ್ತಿದೆ. ಮತ್ತೊಂದೆಡೆ, ಎಲಾನ್ ಮಸ್ಕ್ ಅವರ ಸಂಸ್ಥೆಗಳಿಂದ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಎರಡು ದೇಶಗಳ ಮಧ್ಯೆ ಹೊಂದಾಣಿಕೆ ಸಾಧ್ಯತೆಗಳನ್ನು ಇಬ್ಬರೂ ಚರ್ಚಿಸಿದ್ದಾರೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ, ಮಸ್ಕ್ ಜೊತೆಗಿನ ದೂರವಾಣಿ ಮಾತುಕತೆ ವಿಚಾರ ಪ್ರಸ್ತಾಪಿಸಿದ್ದಾರೆ. ಎಲಾನ್ ಮಸ್ಕ್ ಅವರೊಂದಿಗೆ ಮಾತನಾಡಿದೆ. ಈ ಹಲವು ವಿಷಯಗಳ ಬಗ್ಗೆ ಮಾತನಾಡಿದೆವು. ಈ ವರ್ಷದ ಆರಂಭದಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ನಮ್ಮ ಭೇಟಿ ವೇಳೆ ಚರ್ಚಿಸಲಾಗಿದ್ದ ವಿಷಯಗಳೂ ಸೇರಿದಂತೆ ಹಲವು ವಿಚಾರಗಳು ಬಂದವು.
ತಂತ್ರಜ್ಞಾನ ಮತ್ತು ಇನ್ನೋವೇಶನ್ ಕ್ಷೇತ್ರದಲ್ಲಿ ಹೊಂದಾಣಿಕೆ ಸಾಧ್ಯತೆಯನ್ನು ಚರ್ಚಿಸಿದೆವು. ಈ ಕ್ಷೇತ್ರದಲ್ಲಿ ಅಮೆರಿಕದ ಜೊತೆ ಸಹಭಾಗಿತ್ವವನ್ನು ಹೆಚ್ಚಿಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎರಡು ತಿಂಗಳ ಹಿಂದೆ (ಫೆಬ್ರುವರಿ) ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಎರಡು ದಿನದ ಭೇಟಿ ಮಾಡಿದ್ದರು. ಮೊದಲ ದಿನವೇ ಅವರು ಎಲಾನ್ ಮಸ್ಕ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಎಲಾನ್ ಮಸ್ಕ್ ಅವರ ಮೂವರು ಮಕ್ಕಳಾದ ಎಕ್ಸ್, ಸ್ಟ್ರೈಡರ್ ಮತ್ತು ಅಜುರೆ ಅವರೂ ಇದ್ದರು. ಆಗ ಯಾವ ವಿಚಾರದ ಬಗ್ಗೆ ಚರ್ಚೆಯಾಯಿತು ಎಂಬುದು ಸ್ಪಷ್ಟವಾಗಿಲ್ಲ.
ಎಲಾನ್ ಮಸ್ಕ್ ಅವರ ಟೆಸ್ಲಾ ಸಂಸ್ಥೆಗೆ ಈಗ ಭಾರತದ ಮಾರುಕಟ್ಟೆ ಬಹಳ ಅಗತ್ಯವಾಗಿದೆ. ಚೀನಾದಲ್ಲಿ ಅಲ್ಲಿಯ ಕಂಪನಿಗಳೇ ಈಗ ಎಲೆಕ್ಟ್ರಿಕ್ ಕಾರು ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಿವೆ. ವಿಶ್ವದ ನಂಬರ್ ಒನ್ ಇವಿ ಸಂಸ್ಥೆಯಾದ ಬಿವೈಡಿ ಭಾರತಕ್ಕೆ ಬರಬಹುದು ಎನ್ನುವ ಸುದ್ದಿಯಂತೂ ಹರಿದಾಡುತ್ತಿದೆ. ಬಿವೈಡಿ ಇದನ್ನು ತಳ್ಳಿಹಾಕಿದರೂ, ಭವಿಷ್ಯದಲ್ಲಿ ಅದು ಬರುವ ಸಾಧ್ಯತೆ ಇಲ್ಲದಿಲ್ಲ.
ಚೀನಾದಲ್ಲಿ ಟೆಸ್ಲಾ ನಾಲ್ಕೈದು ಸ್ಥಾನಕ್ಕೆ ಕುಸಿದಿದೆ. ಈಗ ಭಾರತದ ಮಾರುಕಟ್ಟೆ ಬಹಳ ಅಗತ್ಯ ಎನಿಸಿದೆ. ಭಾರತದಲ್ಲಿ ಇವಿ ಬೆಳೆಯುತ್ತಿರುವ ಮಾರುಕಟ್ಟೆ. ಟೆಸ್ಲಾ ಸಂಸ್ಥೆ ಒಂದೆರಡು ವರ್ಷದ ಬಳಿಕ ಭಾರತದಲ್ಲಿ ಫ್ಯಾಕ್ಟರಿ ತೆರೆಯಬಹುದು. ಅಲ್ಲಿಯವರೆಗೆ, ರಿಯಾಯಿತಿ ಆಮದು ಸುಂಕದೊಂದಿಗೆ ಟೆಸ್ಲಾ ಕಾರುಗಳು ಭಾರತಕ್ಕೆ ಆಮದಾಗಬಹುದು.