ಮಂಗಳೂರಿನಲ್ಲಿ ಯಶ್‌ಗೆ ಅದ್ದೂರಿ ಸ್ವಾಗತ; ಧರ್ಮಸ್ಥಳಕ್ಕೆ ಭೇಟಿ ನೀಡಲಿರುವ ರಾಕಿಂಗ್ ಸ್ಟಾರ್!

Image d463a8ad

ಮಂಗಳೂರು: ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ಬೆನ್ನಲ್ಲೇ ನಟ ಯಶ್ ಮಂಗಳೂರಿಗೆ ಆಗಮಿಸಿದ್ದಾರೆ. ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಯಶ್ ಅವರಿಗೆ ಅಭಿಮಾನಿಗಳು ಹಾಗೂ ಬೆಂಬಲಿಗರಿಂದ ಅದ್ದೂರಿ ಸ್ವಾಗತ ದೊರೆಯಿತು.

ಟಾಕ್ಸಿಕ್‌ ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಯಶ್ ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಕ್ಷೇತ್ರಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ದೇವರ ಆಶೀರ್ವಾದ ಪಡೆಯುವ ಉದ್ದೇಶದಿಂದ ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ. 

ಯಶ್ ಅವರು ತಮ್ಮ ಪ್ರತಿಯೊಂದು ಚಿತ್ರದ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡುವ ಪದ್ಧತಿಯನ್ನು ಹಲವು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಹೊಸ ಸಿನಿಮಾ ಆರಂಭಿಸುವಾಗ ಅಥವಾ ಬಿಡುಗಡೆಯ ಸಂದರ್ಭದಲ್ಲಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಾರೆ. ಈಗಲೂ ಈ ಪದ್ಧತಿ ಮುಂದುವರೆದಿದ್ದು ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವುದು ಗಮನ ಸೆಳೆದಿದೆ.

ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಯಶ್ ಅವರನ್ನು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಸಂಭ್ರಮದಿಂದ ಬರಮಾಡಿಕೊಂಡರು. ಯಶ್ ಅವರನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ವಿಮಾನ ನಿಲ್ದಾಣದ ಸುತ್ತಮುತ್ತ ಕೆಲಕಾಲ ಅಭಿಮಾನಿಗಳ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

‘ಟಾಕ್ಸಿಕ್’ ಸಿನಿಮಾ ಯಶ್ ಅವರ ಬಹುನಿರೀಕ್ಷಿತ ಚಿತ್ರವಾಗಿದ್ದು, ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ನಿರೀಕ್ಷೆ ಇದ್ದು, ಯಶ್ ಅವರ ವಿಭಿನ್ನ ಲುಕ್ ಹಾಗೂ ಸಿನಿಮಾದ ಕಥಾಹಂದರದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ.

ಚಿತ್ರ ಬಿಡುಗಡೆಗೂ ಮುನ್ನ ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವುದು ಅವರ ಅಭಿಮಾನಿಗಳಿಗೆ ಮತ್ತಷ್ಟು ವಿಶೇಷವಾಗಿದೆ. ಪ್ರತೀ ಚಿತ್ರದ ಯಶಸ್ಸಿಗಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ತಮ್ಮ ಸಂಪ್ರದಾಯವನ್ನು ಈ ಬಾರಿಯೂ ಯಶ್ ಮುಂದುವರಿಸಿದ್ದಾರೆ. 

Exit mobile version