ಪಂಜಾಬ್‌: ಪ್ಲಾಸ್ಟಿಕ್ ಡ್ರಮ್‌ನಲ್ಲಿ ಕೊಳೆತ ಶವ ಪತ್ತೆ

ಲುಧಿಯಾನಾ, ಆನೇಕಲ್, ತೆಲಂಗಾಣ: ಡ್ರಮ್‌ ಮತ್ತು ಸೂಟ್‌ಕೇಸ್‌ನಲ್ಲಿ ಕೊಳೆತ ಶವಗಳು ಪತ್ತೆ

Untitled design (10)

ಪಂಜಾಬ್‌ನ ಲುಧಿಯಾನಾದಲ್ಲಿ ಪ್ಲಾಸ್ಟಿಕ್ ಡ್ರಮ್‌ನೊಳಗೆ ಕೊಳೆತ ಶವ ಪತ್ತೆಯಾಗಿರುವ ಘಟನೆ ಆಘಾತಕಾರಿಯಾಗಿದೆ. ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ, ಕುತ್ತಿಗೆ ಮತ್ತು ಕಾಲುಗಳನ್ನು ಹಗ್ಗದಿಂದ ಬಿಗಿದಿಡಲಾಗಿತ್ತು. ಸುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಹರಡಿದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ವ್ಯಕ್ತಿ ವಲಸೆ ಕಾರ್ಮಿಕನಂತೆ ಕಾಣುತ್ತಿದ್ದಾನೆ. ದೇಹದಲ್ಲಿ ಗಾಯದ ಗುರುತುಗಳಿಲ್ಲ, ಆದರೆ ಸಂಪೂರ್ಣವಾಗಿ ಕೊಳೆತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಎಸ್‌ಎಚ್‌ಒ ಕುಲ್ವಂತ್ ಕೌರ್ ತಿಳಿಸಿದ್ದಾರೆ.

ಪೊಲೀಸರು ಲುಧಿಯಾನಾದ 42 ಡ್ರಮ್ ತಯಾರಿಕಾ ಘಟಕಗಳ ಪಟ್ಟಿಯನ್ನು ಸಂಗ್ರಹಿಸಿದ್ದಾರೆ. ಡ್ರಮ್ ಹೊಸದಾಗಿದ್ದು, ಪೂರ್ವಯೋಜಿತ ಕೊಲೆಯ ಸಾಧ್ಯತೆಯನ್ನು ಸೂಚಿಸುತ್ತದೆ. 5 ಕಿಮೀ ವ್ಯಾಪ್ತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ, ಜೊತೆಗೆ ಅನುಮಾನಾಸ್ಪದ ವಾಹನಗಳ ನೋಂದಣಿ ಸಂಖ್ಯೆಗಳನ್ನೂ ತಪಾಸಲಾಗುತ್ತಿದೆ. ಹಲವು ಡ್ರಮ್ ಕಂಪನಿಗಳನ್ನು ಮತ್ತು ಸ್ಥಳೀಯ ವಲಸಿಗರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಎಸ್‌ಎಚ್‌ಒ ಕುಲ್ವಂತ್ ಕೌರ್ ತಿಳಿಸಿದ್ದಾರೆ.

ಆನೇಕಲ್: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹಳೇ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್‌ಕೇಸ್‌ನಲ್ಲಿ ಸುಮಾರು 10 ವರ್ಷದ ಬಾಲಕಿಯ ಕೊಳೆತ ಶವ ಪತ್ತೆಯಾಗಿದೆ. ಸೂರ್ಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ಎಸೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ತೆಲಂಗಾಣ: ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ಪತ್ತೆ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಬಾಚುಪಲ್ಲಿ ಪ್ರದೇಶದಲ್ಲಿ ಕೆಂಪು ಸೂಟ್‌ಕೇಸ್‌ನಲ್ಲಿ 25-35 ವರ್ಷದ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ. ರೆಡ್ಡಿ ಲ್ಯಾಬ್‌ನ ಗೋಡೆ ಬಳಿ ದುರ್ವಾಸನೆಯಿಂದಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲೆ 10-12 ದಿನಗಳ ಹಿಂದೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 194ರಡಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Exit mobile version