ಮೈಮಾಟ ಸಾಂಗ್ ಸುತ್ತ ಗಾಸಿಪ್: ಚಂದನ್ ಕೊಟ್ರು ಕ್ಲಾರಿಟಿ

ಗಾಯಕ್ಕೆ ಉಪ್ಪು ಸವರಿದಂತಾಯ್ತಾ ನಿವೇದಿತಾ ಗೌಡ ಪೋಸ್ಟ್

Your paragraph text 2026 10 29T115115.369

ಸ್ಯಾಂಡ್‌ವುಡ್‌ನಲ್ಲಿ ಸಖತ್ ಸೌಂಡ್‌ ಮಾಡ್ತಿರೋ ಗಾಯಕ ಚಂದನ್ ಶೆಟ್ಟಿ ಅವರ ಹೊಸ ಹಾಡು ಮೈಮಾಟ ಈಗ ಭಾರೀ ಚರ್ಚೆಯಲ್ಲಿದೆ. ಈ ಸಾಂಗ್ ಬಿಡುಗಡೆ ಆದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಗಾಸಿಪ್‌ಗಳ ಸುರಿಮಳೆಯೇ ಆಗ್ಬಿಟ್ಟಿದೆ. ಅಸಲಿಗೆ ಇಲ್ಲಿ ಏನಾಗ್ತಿದೆ..? ಚಂದನ್ ಶೆಟ್ಟಿ ಯಾಕೆ ಈ ಸ್ಪಷ್ಟನೆ ಕೊಡ್ಬೇಕಾಯ್ತು..?

ಮೈಮಾಟ ಸಾಂಗ್ ಸುತ್ತ ಗಾಸಿಪ್.. ಚಂದನ್ ಕೊಟ್ರು ಕ್ಲಾರಿಟಿ

ಗಾಯಕ್ಕೆ ಉಪ್ಪು ಸವರಿದಂತಾಯ್ತಾ ನಿವೇದಿತಾ ಗೌಡ ಪೋಸ್ಟ್

ಡಿವೋರ್ಸ್‌ಗೂ ಮುಂಚೆಯೇ ರೆಡಿಯಾಗಿತ್ತು ಮೈಮಾಟ ಸಾಂಗ್

ಗಾಸಿಪ್ ಏನೇ ಇರಲಿ… ಚಂದನ್ ಕಮ್‌ಬ್ಯಾಕ್‌ಗೆ ಫ್ಯಾನ್ಸ್ ಫುಲ್ ಫಿದಾ

ಸ್ಯಾಂಡಲ್‌ವುಡ್‌ನ ಜನಪ್ರಿಯ ಗಾಯಕ ಹಾಗೂ ಮ್ಯೂಸಿಕ್ ಕಂಪೋಸರ್ ಚಂದನ್ ಶೆಟ್ಟಿ ಅವರ ಹೊಸ ಹಾಡು ‘ಮೈಮಾಟ’ ರಿಲೀಸ್ ಆದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿರುವ ವಿಭಿನ್ನ ಶೈಲಿಯ ಸಾಹಿತ್ಯ ಹಾಗೂ ಮ್ಯೂಸಿಕ್ ವೀಕ್ಷಕರ ಗಮನ ಸೆಳೆದಿದೆಯಾದರೂ, ಮತ್ತೊಂದೆಡೆ ಇದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೂ ಕಾರಣವಾಗಿತ್ತು. ಏನೇ ನಿನ್ನ ಮೈಮಾಟದಾಟ… ಇನ್ ಏಳು ಜನುಮಕ್ಕೂ ಕಲಿಸಿಯ ಪಾಠ ಅನ್ನೋ ಸಾಲುಗಳು ರಿಲೀಸ್ ಆಗ್ತಿದ್ದಂತೆ, ನೆಟ್ಟಿಗರು ‘ಇದು ಮಾಜಿ ಹೆಂಡತಿಗೆ ಕೊಟ್ಟ ಟಕ್ಕರಾ?’ ಅಂತ ಕಣ್ಣರಳಿಸಿ ನೋಡೋಕೆ ಶುರುಮಾಡಿದ್ದಾರೆ.

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ಆದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಕಥೆ ಹರಿದಾಡ್ತಿತ್ತು. ಹೀಗಿರುವಾಗ ಇದ್ದಕ್ಕಿದ್ದಂತೆ ‘ಮೈಮಾಟ’ ಹಾಡು ಅಖಾಡಕ್ಕಿಳಿದಿದ್ದೇ ತಡ, ಗಾಸಿಪ್ ಪ್ರಿಯರಿಗೆ ಜಬ್ಬರ್‌ದಸ್ತ್ ಮೆನು ಸಿಕ್ಕಂತಾಯ್ತು. ಹಾಡಿನ ಸಾಹಿತ್ಯ ಮತ್ತು ಮ್ಯೂಸಿಕ್‌ನಲ್ಲಿರೋ ಖಾರ ನೋಡಿದ ನೆಟ್ಟಿಗರು, “ಅಯ್ಯೋ.. ಇದು ಚಂದನ್ ಶೆಟ್ಟಿ ತಮ್ಮ ವೈಯಕ್ತಿಕ ಜೀವನದ ರಿಯಲ್ ನೋವನ್ನೇ ಹಾಡಾಗಿ ಹೊರಹಾಕಿದ್ದಾರೆ!” ಅಂತ ಸೋಶಿಯಲ್ ಮೀಡಿಯಾದಾದ್ಯಂತ ಕಮೆಂಟ್‌ಗಳ ಸುರಿಮಳೆಗೈಯಲು ಶುರುಮಾಡಿದರು.

ಈ ವಿವಾದ ಕಾವೇರುತ್ತಿರುವಾಗಲೇ, ಅತ್ತ ನಿವೇದಿತಾ ಗೌಡ ಹಾಕಿದ ಒಂದು ನಿಗೂಢ ಪೋಸ್ಟ್ ಬೆಂಕಿಗೆ ತುಪ್ಪ ಸುರಿಯಿತು. “ನನ್ನ ಲವ್ ಲೈಫ್ ಒಂದು ರೊಮ್ಯಾಂಟಿಕ್ ಕಾಮಿಡಿ ಅಂದುಕೊಂಡಿದ್ದೆ, ಆದ್ರೆ ಅದು ಹಾರರ್ ಕಥೆಯಾಯ್ತು, ಪಾಸ್ಟ್ ಲವ್ ನನ್ನನ್ನು ಬಿಟ್ಟು ಕದಲುತ್ತಿಲ್ಲ” ಅಂತ ನಿವೇದಿತಾ ಬರೆದುಕೊಂಡಿದ್ದೇ ತಡ, ನೆಟ್ಟಿಗರು ಚಂದನ್ ಹಾಡಿಗೆ ನಿವೇದಿತಾ ಕೌಂಟರ್ ಕೊಟ್ಟಿದ್ದಾರೆ ಅಂತಲೇ ಲೆಕ್ಕಾಚಾರ ಹಾಕಿದರು. ನಿವೇದಿತಾ ಪೋಸ್ಟ್ ವೈರಲ್ ಆಗ್ತಿದ್ದಂತೆ ರ‍್ಯಾಪ್ ಕಿಂಗ್ ಚಂದನ್ ಶೆಟ್ಟಿ ಸ್ವತಃ ರಂಗಕ್ಕಿಳಿದು ಹರಡುತ್ತಿದ್ದ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

“ನನ್ನ ಈ ಹಾಡಿಗೂ, ನನ್ನ ಪರ್ಸನಲ್ ಲೈಫ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಪ್ರತಿಯೊಂದು ಹಾಡೂ ಕಲಾವಿದನ ನಿಜ ಜೀವನದ ಕಥೆಯಾಗಿರಲ್ಲ. ದಯವಿಟ್ಟು ನನ್ನ ವೈಯಕ್ತಿಕ ಬದುಕನ್ನು ಈ ಹಾಡಿಗೆ ತಳಕು ಹಾಕಿ ನಕಾರಾತ್ಮಕತೆಯನ್ನು ಹರಡಬೇಡಿ” ಎಂದು ಮನವಿ ಮಾಡಿಕೊಂಡಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ಬಲವಾಗಿ ತಳ್ಳಿಹಾಕಿರುವ ಚಂದನ್, ಈ ಹಾಡಿನ ಹಿಂದಿನ ಅಸಲಿ ಸತ್ಯವನ್ನು ಹೊರಹಾಕಿದ್ದಾರೆ. “ನನ್ನ ವೈಯಕ್ತಿಕ ಜೀವನದಲ್ಲಿ ಕೆಲವು ಅಹಿತಕರ ಘಟನೆಗಳು ನಡೆಯುವುದಕ್ಕೂ ಬಹಳ ಮುಂಚೆಯೇ ಈ ‘ಮೈಮಾಟ’ ಹಾಡು ಸಿದ್ಧವಾಗಿತ್ತು. ಇಂತಹ ಹೊಸ ಸಂಗೀತ ಶೈಲಿಯನ್ನು ಪ್ರಯೋಗಿಸಬೇಕು ಎಂಬುದು ನನ್ನ ಹಳೆಯ ಆಸೆಯಾಗಿತ್ತು. ಕೇವಲ ಮನರಂಜನೆಗಾಗಿ ಮಾಡಿದ ಹಾಡನ್ನು ಕೆಲವು ಯೂಟ್ಯೂಬ್ ಚಾನೆಲ್‌ಗಳು ಅತಿಯಾಗಿ ಬಿಂಬಿಸುತ್ತಿವೆ” ಎಂದು ಸ್ಪಷ್ಟಪಡಿಸುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.

ಏನೇ ವಿವಾದಗಳು, ಊಹಾಪೋಹಗಳು ಎದ್ದರೂ ಸಹ, ಚಂದನ್ ಶೆಟ್ಟಿ ಅವರ ‘ಮೈಮಾಟ’ ಹಾಡು ಮಾತ್ರ ಧೂಳೆಬ್ಬಿಸುತ್ತಿದೆ. ಏನೇ ಕಥೆ ಕಟ್ಟಿದರೂ, ಚಂದನ್ ಅವರ ಈ ಪಕ್ಕಾ ಮಾಸ್ ಅಂಡ್ ಟ್ರೆಂಡಿ ಕಮ್‌ಬ್ಯಾಕ್‌ಗೆ ಫ್ಯಾನ್ಸ್ ಮಾತ್ರ ಫುಲ್ ಫಿದಾ ಆಗಿದ್ದಾರೆ. ವಿವಾದಗಳ ನಡುವೆಯೂ ಹಾಡು ಟ್ರೆಂಡಿಂಗ್‌ನಲ್ಲಿ ರಾರಾಜಿಸುತ್ತಿದ್ದು, ಈ ಸ್ಪಷ್ಟನೆಯ ನಂತರವಾದರೂ ಸೋಷಿಯಲ್ ಮೀಡಿಯಾ ಗಾಸಿಪ್‌ಗಳಿಗೆ ಬ್ರೇಕ್ ಬೀಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version