ವಾಟ್ಸಪ್ ಹೊಸ Username ಫೀಚರ್‌ಗೆ ಕೇಂದ್ರ ನೋಟಿಸ್

Untitled design (14)

ನವದೆಹಲಿ, ಜುಲೈ 1: ವಾಟ್ಸಪ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸದೇ Username ಮೂಲಕ ಸಂಪರ್ಕ ಸಾಧಿಸಲು ಅವಕಾಶ ನೀಡುವ ಹೊಸ ವೈಶಿಷ್ಟ್ಯದ ಕುರಿತು ಕೇಂದ್ರ ಸರ್ಕಾರ ಗಂಭೀರ ಕಳವಳ ವ್ಯಕ್ತಪಡಿಸಿದೆ. ಯೂಸರ್‌ನೇಮ್” ವೈಶಿಷ್ಟ್ಯದ ಬಿಡುಗಡೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಸರ್ಕಾರ ಇಂದು ಆದೇಶಿಸಿದೆ ಈ ಹೊಸ ವ್ಯವಸ್ಥೆಯ ಕಾರ್ಯವಿಧಾನ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಮೆಟಾ ಸಂಸ್ಥೆಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿಗೊಳಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಈ ಹೊಸ ವೈಶಿಷ್ಟ್ಯ ಹೇಗೆ ಕಾರ್ಯ ನಿರ್ವಹಿಸುತ್ತದೆ, ಬಳಕೆದಾರರ ಸುರಕ್ಷತೆಯನ್ನು ಹೇಗೆ ಖಚಿತಪಡಿಸುತ್ತದೆ ಹಾಗೂ ದುರ್ಬಳಕೆಯನ್ನು ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಕುರಿತು ಮೂರು ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಮೆಟಾಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಬಳಕೆದಾರರ ಗೌಪ್ಯತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ Username Feature ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮೆಟಾ ಹೇಳಿದೆ. ಇದರ ಮೂಲಕ ಮೊಬೈಲ್ ಸಂಖ್ಯೆ ಹಂಚಿಕೊಳ್ಳದೆ ಬಳಕೆದಾರರು ಪರಸ್ಪರ ಸಂಪರ್ಕ ಸಾಧಿಸಬಹುದು ಎಂದು ಕಂಪನಿ ತಿಳಿಸಿದೆ.

ಆದರೆ, ಈ ವ್ಯವಸ್ಥೆಯಿಂದ ಸೈಬರ್ ಅಪರಾಧಗಳ ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಆತಂಕವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ. ವಿಶೇಷವಾಗಿ ನಕಲಿ ಖಾತೆಗಳನ್ನು ಸೃಷ್ಟಿಸುವುದು, ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಹೋಲುವ ಯೂಸರ್‌ನೇಮ್‌ಗಳನ್ನು ಬಳಸಿ ಸಾರ್ವಜನಿಕರನ್ನು ವಂಚಿಸುವುದು, ಗುರುತಿನ ಕಳವು ಹಾಗೂ ಹಣಕಾಸು ವಂಚನೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯನ್ನು ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಯಾರಾದರೂ ಮತ್ತೊಬ್ಬರ ಹೆಸರಿನಂತೆಯೇ ಕಾಣುವ Username ಬಳಸಿ ನಕಲಿ ಖಾತೆ ತೆರೆದು ಜನರನ್ನು ದಾರಿ ತಪ್ಪಿಸುವ ಸಾಧ್ಯತೆಯಿರುವುದರಿಂದ, ಈ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಎಲ್ಲಾ ಸುರಕ್ಷತಾ ಅಂಶಗಳನ್ನು ಸರ್ಕಾರ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.

ಹೊಸ ವೈಶಿಷ್ಟ್ಯ ಜಾರಿಗೆ ಬಂದ ಬಳಿಕ ಬಳಕೆದಾರರ ಸುರಕ್ಷತೆ, ಗೌಪ್ಯತೆ ಮತ್ತು ಸೈಬರ್ ಭದ್ರತೆಗೆ ಯಾವುದೇ ಧಕ್ಕೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮೆಟಾ ಸಲ್ಲಿಸುವ ವರದಿಯ ಆಧಾರದ ಮೇಲೆ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Exit mobile version