ಇಂದಿನ ಡಿಜಿಟಲ್ ಯುಗದಲ್ಲಿ ಯಾವುದೇ ಮಾಹಿತಿ ಬೇಕಾದರೂ ಬೆರಳ ತುದಿಯಲ್ಲಿ ಸಿಗುತ್ತದೆ. ಅದಕ್ಕೆ ಮುಖ್ಯ ಕಾರಣ ಹೆಚ್ಚಾಗಿ ಕೃತಕ ಬುದ್ಧಿಮತ್ತೆ ಅಥವಾ AI ಪರಿಕರಗಳನ್ನ ಹೆಚ್ಚಾಗಿ ಬಳಸುವುದು. ಗೂಗಲ್ ಜೆಮಿನಿ (Google Gemini), ಚಾಟ್ ಜಿಪಿಟಿ (ChatGPT) ನಂತಹ ಪ್ಲಾಟ್‌ಫಾರ್ಮ್‌ಗಳು ನಮ್ಮ ಕೆಲಸವನ್ನು ಸುಲಭಗೊಳಿಸಿರುವುದು ಸುಳ್ಳಲ್ಲ. ಆದರೆ, ಅತಿಯಾದ ಬಳಕೆ ನಮ್ಮನ್ನು ಸಂಕಷ್ಟಕ್ಕೆ ತಳ್ಳಬಹುದು. AI ಬಳಸುವಾಗ ನಾವು ವಹಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ತಜ್ಞರು ನೀಡಿರುವ ಎಚ್ಚರಿಕೆ ಇಲ್ಲಿದೆ.
ಗೌಪ್ಯ ಮಾಹಿತಿ ಹಂಚಿಕೊಳ್ಳಬೇಡಿ (Sensitive Information)
ಅನೇಕ ಬಳಕೆದಾರರು AI ಅನ್ನು ತಮ್ಮ ಆತ್ಮೀಯ ಗೆಳೆಯನಂತೆ ಭಾವಿಸಿ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಆದರೆ ನೆನಪಿಡಿ, ನೀವು ನೀಡುವ ಪ್ರತಿಯೊಂದು ಮಾಹಿತಿಯು ಆಯಾ ಸಂಸ್ಥೆಗಳ ಸರ್ವರ್‌ನಲ್ಲಿ ಶೇಖರಣೆಯಾಗುತ್ತದೆ ಮತ್ತು ಭವಿಷ್ಯದ ತರಬೇತಿಗಾಗಿ ಬಳಕೆಯಾಗಬಹುದು. ಹೀಗಾಗಿ, ನಿಮ್ಮ ಕಂಪನಿಯ ರಹಸ್ಯಗಳು, ವೈಯಕ್ತಿಕ ಹಣಕಾಸಿನ ಯೋಜನೆಗಳು ಅಥವಾ ಗೌಪ್ಯ ದಾಖಲೆಗಳ ಬಗ್ಗೆ AI ಬಳಿ ಹೇಳಿಕೊಳ್ಳಬೇಡಿ.
ಆರೋಗ್ಯದ ವಿಚಾರದಲ್ಲಿ ರಿಸ್ಕ್ ಬೇಡ
ಇತ್ತೀಚಿನ ದಿನಗಳಲ್ಲಿ ಸಣ್ಣ ಅನಾರೋಗ್ಯಕ್ಕೂ ಗೂಗಲ್ ಅಥವಾ AI ಬಳಿ ಔಷಧಿ ಕೇಳುವ ಹವ್ಯಾಸ ಹೆಚ್ಚಾಗಿದೆ. AI ಪರಿಕರಗಳು ದೊಡ್ಡ ದತ್ತಾಂಶದ ಆಧಾರದ ಮೇಲೆ ಮಾಹಿತಿ ನೀಡುತ್ತವೆಯೇ ಹೊರತು, ಅವು ವೈದ್ಯರಲ್ಲ. ತಪ್ಪಾದ ವೈದ್ಯಕೀಯ ಸಲಹೆಯು ಪ್ರಾಣಕ್ಕೆ ಕುತ್ತು ತರಬಹುದು. ಆದ್ದರಿಂದ, ಆರೋಗ್ಯದ ವಿಷಯದಲ್ಲಿ ವೈದ್ಯರನ್ನೇ ಸಂಪರ್ಕಿಸುವುದು ಜಾಣತನ.
ಬ್ಯಾಂಕಿಂಗ್ ಮತ್ತು ವೈಯಕ್ತಿಕ ಐಡಿಗಳು
ನಿಮ್ಮ OTP ಗಳು, ಬ್ಯಾಂಕ್ ಪಾಸ್‌ವರ್ಡ್‌ಗಳು, ಕ್ರೆಡಿಟ್ ಕಾರ್ಡ್ ವಿವರಗಳು, ಆಧಾರ್ ಸಂಖ್ಯೆ ಅಥವಾ ಪಾನ್ ಕಾರ್ಡ್ ಮಾಹಿತಿಯನ್ನು ಎಂದಿಗೂ AI ಚಾಟ್‌ಬಾಟ್‌ಗಳಲ್ಲಿ ನೀಡಬೇಡಿ. ಹ್ಯಾಕರ್‌ಗಳು ಇಂತಹ ಡೆಟಾಗಳನ್ನು ಕದಿಯುವ ಸಾಧ್ಯತೆ ಇರುತ್ತದೆ, ಇದು ನಿಮ್ಮನ್ನು ಸೈಬರ್ ವಂಚನೆಗೆ ಬಲಿಯಾಗಿಸಬಹುದು.
ಕಾನೂನುಬಾಹಿರ ಪ್ರಶ್ನೆಗಳಿಂದ ಜೈಲು ಶಿಕ್ಷೆ!
ಬ್ಯಾಂಕ್ ಹ್ಯಾಕ್ ಮಾಡುವುದು ಹೇಗೆ ?, ತೆರಿಗೆ ವಂಚಿಸುವುದು ಹೇಗೆ?, ಅಥವಾ ಸ್ಫೋಟಕಗಳನ್ನು ತಯಾರಿಸುವುದು ಹೇಗೆ? ಎಂಬಂತಹ ಕಾನೂನುಬಾಹಿರ ವಿಷಯಗಳ ಬಗ್ಗೆ AI ಗೆ ಪ್ರಶ್ನೆ ಕೇಳಬೇಡಿ. ಇಂತಹ ಪ್ರಶ್ನೆಗಳು ನಿಮ್ಮನ್ನು ಅಪರಾಧದ ಸಂಶಯಕ್ಕೆ ಗುರಿಪಡಿಸಬಹುದು ಮತ್ತು ತನಿಖಾ ಸಂಸ್ಥೆಗಳ ಕಣ್ಗಾವಲಿಗೆ ತರಬಹುದು. ನೆನಪಿಡಿ, ಡಿಜಿಟಲ್‌ನಲ್ಲಿ ಸ್ಟೋರ್ ಆಗಿರುವ ಮಾಹಿತಿಗಳನ್ನ ಡಿಲಿಟ್ ಮಾಡುವುದು ಅಸಾಧ್ಯ ಹೀಗಾಗಿ ಯಾವುದೇ ಮಾಹಿತಿಯನ್ನ AI ಬಳಿ ಹಂಚಿಕೊಳ್ಳುವಾಗ ಎಚ್ಚರವಾಗಿರಿ.
ಕುಟುಂಬದ ಆಂತರಿಕ ಕಲಹಗಳು ಅಥವಾ ಅತ್ಯಂತ ವೈಯಕ್ತಿಕ ವಿಷಯಗಳನ್ನು AI ಜೊತೆ ಚರ್ಚಿಸಬೇಡಿ. ಇದು ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುತ್ತದೆ. AI ಎಂಬುದು ಕೇವಲ ಒಂದು ಉಪಕರಣವೇ ಹೊರತು ಅದಕ್ಕೆ ಭಾವನೆಗಳಿಲ್ಲ ಮತ್ತು ಅದು ನಿಮ್ಮ ಮಾಹಿತಿಯ ರಕ್ಷಕನಲ್ಲ ಎಂಬುದು ನೆನಪಿರಲಿ.
