ಐಷಾರಾಮಿ ಎಸ್‌ಯುವಿ ಪ್ರಿಯರಿಗೆ ಜಾಗ್ವಾರ್ ಲ್ಯಾಂಡ್ ರೋವರ್ (JLR) ಭರ್ಜರಿ ಸುದ್ದಿಯೊಂದನ್ನು ನೀಡಿದೆ. ಕಂಪನಿಯು ಭಾರತದಲ್ಲಿ ರೇಂಜ್ ರೋವರ್ ಸ್ಪೋರ್ಟ್ ಟ್ವೆಂಟಿ ಎಡಿಷನ್ (Range Rover Sport Twenty Edition) ವಿಶೇಷ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇದರ ಎಕ್ಸ್‌ಶೋರೂಂ ಬೆಲೆ ರೂ. 1.90 ಕೋಟಿ ಎಂದು ಘೋಷಿಸಿದೆ. ರೇಂಜ್ ರೋವರ್ ಸ್ಪೋರ್ಟ್‌ನ ಎರಡು ದಶಕಗಳ ಪಯಣವನ್ನು ಆಚರಿಸುವ ಈ ವಿಶೇಷ ಮಾದರಿಯ ವಿತರಣೆ ಭಾರತದಲ್ಲಿ 2026ರ ಅಕ್ಟೋಬರ್‌ನಿಂದ ಆರಂಭವಾಗುವ ನಿರೀಕ್ಷೆಯಿದೆ.
ರೇಂಜ್ ರೋವರ್ ಸ್ಪೋರ್ಟ್‌ನ ಈ ವಿಶೇಷ ಆವೃತ್ತಿಯ ವಿನ್ಯಾಸಕ್ಕೆ 2004ರ ಡೆಟ್ರಾಯಿಟ್ ಆಟೋ ಶೋನಲ್ಲಿ ಪರಿಚಯಿಸಲಾದ ರೇಂಜ್ ಸ್ಟಾರ್ಮರ್ ಆವೃತ್ತಿಯಿಂದ (Range Stormer Concept) ಸ್ಫೂರ್ತಿಯಾಗಿದೆ. ಆಟೋಬಯಾಗ್ರಫಿ ಹಾಗೂ SV ಮಾದರಿಗಳಿಂದಲೂ ಕೆಲವು ವಿನ್ಯಾಸ ಅಂಶಗಳನ್ನು ಪಡೆದುಕೊಂಡಿರುವ ಟ್ವೆಂಟಿ ಎಡಿಷನ್, ಸಾಮಾನ್ಯ ಮಾದರಿಗಿಂತ ಹೆಚ್ಚು ವಿಶೇಷವಾಗಿ ಕಾಣುತ್ತದೆ.
ಮೂರು ಬಣ್ಣಗಳಲ್ಲಿ ಲಭ್ಯ
ರೇಂಜ್ ರೋವರ್ ಸ್ಪೋರ್ಟ್ ಟ್ವೆಂಟಿ ಎಡಿಷನ್ (Range Rover Sport Twenty Edition) ಅನ್ನು ಈ ಎಸ್‌ಯುವಿ ಸ್ಯಾಂಟೊರಿನಿ ಬ್ಲಾಕ್ (Santorini Black), ಒಸ್ಟುನಿ ಪರ್ಲ್ ವೈಟ್ (Ostuni Pearl White) ಮತ್ತು ವಿಶೇಷ ಸಾಂಗಿನೆಲ್ಲೊ ಆರೆಂಜ್ (Sanguinello Orange) ಬಣ್ಣಗಳಲ್ಲಿ ಪಡೆಯಬಹುದು. ವಿಶೇಷವಾಗಿ ಸಾಂಗಿನೆಲ್ಲೊ ಆರೆಂಜ್ ಬಣ್ಣವು ಮೂಲ ರೇಂಜ್ ಸ್ಟಾರ್ಮರ್ ಪರಿಕಲ್ಪನೆಯೊಂದಿಗೆ ವಿನ್ಯಾಸದ ಸಂಪರ್ಕ ಕಲ್ಪಿಸುತ್ತದೆ.
ಎಸ್‌ಯುವಿಯಲ್ಲಿ 23 ಇಂಚಿನ ಅಲಾಯ್ ಟಯರ್ ಗಳು, ವಿಶೇಷ 20ಅಡಿಷನ್ (Twenty Edition) ಬ್ಯಾಡ್ಜಿಂಗ್ ಹಾಗೂ ಗ್ಲಾಸ್ ಬ್ಲ್ಯಾಕ್ ಎಕ್ಸ್‌ಟೀರಿಯರ್ ಪ್ಯಾಕ್ ನೀಡಲಾಗಿದೆ. ರೂಫ್, ಹೊರಗಿನ ಮಿರರ್ ಕವರ್ ಸೇರಿದಂತೆ ಹಲವು ಭಾಗಗಳಿಗೆ ಕಪ್ಪು ಫಿನಿಶ್ ನೀಡಿರುವುದು ಇದರ ಸ್ಪೋರ್ಟಿ ಲುಕ್ ಹೆಚ್ಚಿಸುತ್ತದೆ.
ಐಷಾರಾಮಿ ಒಳಾಂಗಣ
ಕ್ಯಾಬಿನ್‌ನಲ್ಲಿ ಸಂಪೂರ್ಣ ಕಪ್ಪು ಥೀಮ್ ಅಳವಡಿಸಲಾಗಿದೆ. ಎಬೊನಿ ವಿಂಡ್ಸರ್ ಲೆದರ್ (Ebony Windsor Leather) ಸೀಟುಗಳು, SV-ಪ್ರೇರಿತ ಪರ್ಫಾರ್ಮೆನ್ಸ್ ಸೀಟುಗಳು, Suedecloth ಹೆಡ್‌ಲೈನರ್, ಕಾರ್ಬನ್ ಮಾದರಿಯ ಟ್ರಿಮ್ ಮತ್ತು ವಿಶೇಷ Twenty Edition ಟ್ರೆಡ್‌ಪ್ಲೇಟ್‌ಗಳು ಗಮನ ಸೆಳೆಯುತ್ತವೆ. ಸೆಂಟರ್ ಕನ್ಸೋಲ್‌ನಲ್ಲೂ ವಿಶೇಷ Twenty ಬ್ರ್ಯಾಂಡಿಂಗ್ ನೀಡಲಾಗಿದೆ.
529bhp V8 ಎಂಜಿನ್
ಈ ವಿಶೇಷ ಎಸ್‌ಯುವಿಯ ಪ್ರಮುಖ ಆಕರ್ಷಣೆ ಅದರ 4.4 ಲೀಟರ್ ಟ್ವಿನ್-ಟರ್ಬೊ V8 ಸೌಮ್ಯ-ಹೈಬ್ರಿಡ್ ಪೆಟ್ರೋಲ್ ಎಂಜಿನ್. ಇದು 529bhp ಶಕ್ತಿ ಮತ್ತು 750Nm ಟಾರ್ಕ್ ಉತ್ಪಾದಿಸುತ್ತದೆ. 8-ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಈ ಎಂಜಿನ್ ಕಾರ್ಯನಿರ್ವಹಿಸಲಿದ್ದು, ಕೇವಲ 4.5 ಸೆಕೆಂಡುಗಳಲ್ಲಿ 0-100 ಕಿ.ಮೀ. ವೇಗ ತಲುಪುವ ಸಾಮರ್ಥ್ಯ ಹೊಂದಿದೆ.
ಇದರೊಂದಿಗೆ ಆಲ್-ವೀಲ್ ಡ್ರೈವ್, ಆಲ್-ವೀಲ್ ಸ್ಟೀರಿಂಗ್, ಡೈನಾಮಿಕ್ ಏರ್ ಸಸ್ಪೆನ್ಷನ್, ಎಲೆಕ್ಟ್ರಾನಿಕ್ ಆಕ್ಟಿವ್ ಡಿಫರೆನ್ಷಿಯಲ್, ಟಾರ್ಕ್ ವೆಕ್ಟರಿಂಗ್ ಮತ್ತು ವಿವಿಧ ಭೂಪ್ರದೇಶಗಳಿಗೆ ಹೊಂದಿಕೊಳ್ಳುವ Terrain Response ವ್ಯವಸ್ಥೆಗಳೂ ಲಭ್ಯವಿವೆ.
ರೂ.1.90 ಕೋಟಿ ಬೆಲೆ ಮತ್ತು ಸೀಮಿತ ಉತ್ಪಾದನೆಯೊಂದಿಗೆ, ಸಾಮಾನ್ಯ ಎಸ್‌ಯುವಿಗಿಂತ ವಿಭಿನ್ನವಾದ ವಿಶೇಷತೆ, ಐಷಾರಾಮಿ ಮತ್ತು V8 ಕಾರ್ಯಕ್ಷಮತೆ ಬಯಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ ಈ Range Rover Sport Twenty Edition.
