ಕೀಪ್ಯಾಡ್ ಫೋನ್‌ ಬಳಕೆದಾರರಿಗೆ PhonePe ಗುಡ್‌ನ್ಯೂಸ್: UPI 123Pay ಆರಂಭ

Untitled design (30)

ನವದೆಹಲಿ, ಸೆ.01: ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದೆಯೇ ಡಿಜಿಟಲ್ ಪಾವತಿ ಮಾಡಲು ಸಾಧ್ಯವಾಗುವ ಹೊಸ ಅವಕಾಶವನ್ನು ಫೋನ್‌ಪೇ ಪರಿಚಯಿಸಿದೆ. ದೇಶದ ಪ್ರಮುಖ ಡಿಜಿಟಲ್ ಪಾವತಿ ಸಂಸ್ಥೆಗಳಲ್ಲಿ ಒಂದಾಗಿರುವ ಫೋನ್‌ಪೇ, ಫೀಚರ್ ಫೋನ್ ಹಾಗೂ ಕೀಪ್ಯಾಡ್ ಫೋನ್ ಬಳಕೆದಾರರಿಗಾಗಿ ‘PhonePe UPI 123Pay’ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ.

ಈ ಸೇವೆಯ ಪ್ರಮುಖ ವಿಶೇಷತೆ ಎಂದರೆ, ಸ್ಮಾರ್ಟ್‌ಫೋನ್ ಅಥವಾ ಮೊಬೈಲ್ ಇಂಟರ್ನೆಟ್ ಅಗತ್ಯವಿಲ್ಲದೆ UPI ವಹಿವಾಟು ನಡೆಸಬಹುದಾಗಿದೆ. 2G ನೆಟ್‌ವರ್ಕ್ ಲಭ್ಯವಿರುವ ಪ್ರದೇಶಗಳಲ್ಲಿಯೂ ಈ ಸೇವೆ ಬಳಸಲು ಸಾಧ್ಯವಾಗುವುದರಿಂದ ಗ್ರಾಮೀಣ ಮತ್ತು ಇಂಟರ್ನೆಟ್ ಸಂಪರ್ಕ ಸೀಮಿತವಾಗಿರುವ ಪ್ರದೇಶಗಳಲ್ಲಿನ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಫೀಚರ್ ಫೋನ್‌ನಲ್ಲೇ ಹಣ ವರ್ಗಾವಣೆ

PhonePe UPI 123Pay ಮೂಲಕ ಬಳಕೆದಾರರು ಮತ್ತೊಬ್ಬ ವ್ಯಕ್ತಿಗೆ ಹಣ ವರ್ಗಾವಣೆ ಮಾಡುವುದರ ಜೊತೆಗೆ ವ್ಯಾಪಾರಿಗಳಿಗೆ ಪಾವತಿ ಮಾಡಬಹುದು. ಕ್ಯಾಮೆರಾ ಹೊಂದಿರುವ ಕೆಲವು ಫೀಚರ್ ಫೋನ್‌ಗಳಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡುವ ಸೌಲಭ್ಯವೂ ಲಭ್ಯವಿರಲಿದೆ. ಇದರೊಂದಿಗೆ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲನೆ, ಖಾತೆ ನಿರ್ವಹಣೆ ಮತ್ತು ಹಿಂದಿನ ವಹಿವಾಟುಗಳ ವಿವರಗಳನ್ನು ತಿಳಿದುಕೊಳ್ಳುವ ಅವಕಾಶವೂ ದೊರೆಯಲಿದೆ.

ದೇಶದಲ್ಲಿ ಸುಮಾರು 20 ಕೋಟಿಗೂ ಹೆಚ್ಚು ಫೀಚರ್ ಫೋನ್ ಬಳಕೆದಾರರು ಇದ್ದಾರೆ ಎಂದು ಹೇಳಲಾಗಿದ್ದು, ಈ ದೊಡ್ಡ ಬಳಕೆದಾರ ವರ್ಗವನ್ನು ಡಿಜಿಟಲ್ ಪಾವತಿ ವ್ಯವಸ್ಥೆಗೆ ಮತ್ತಷ್ಟು ಸಂಪರ್ಕಿಸುವ ಉದ್ದೇಶದಿಂದ ಈ ಸೇವೆಯನ್ನು ಪರಿಚಯಿಸಲಾಗಿದೆ. ಥರ್ಡ್ ಪಾರ್ಟಿ ಆ್ಯಪ್ ಪ್ರೊವೈಡರ್ (TPAP) ವಿಭಾಗದಲ್ಲಿ ಫೀಚರ್ ಫೋನ್‌ಗಳಿಗೆ ಇಂತಹ UPI ಸೌಲಭ್ಯ ಒದಗಿಸಿದ ಪ್ರಮುಖ ಸಂಸ್ಥೆಗಳಲ್ಲಿ ಫೋನ್‌ಪೇ ಮುಂಚೂಣಿಯಲ್ಲಿದೆ.

ನೋಕಿಯಾ, ಎಚ್‌ಎಂಡಿ ,ಲಾವಾ,ಐಟೆಲ್ ಫೋನ್‌ಗಳಲ್ಲಿ ಸೌಲಭ್ಯ

ಈ ಸೇವೆಯನ್ನು ಮತ್ತಷ್ಟು ಬಳಕೆದಾರರಿಗೆ ತಲುಪಿಸಲು ನೋಕಿಯಾ (Nokia), ಎಚ್‌ಎಂಡಿ (HMD), ಲಾವಾ (Lava) International ಮತ್ತು ಐಟೆಲ್ (Itel) ಸೇರಿದಂತೆ ಹಲವು ಮೊಬೈಲ್ ಹ್ಯಾಂಡ್‌ಸೆಟ್ ತಯಾರಕರೊಂದಿಗೆ ಫೋನ್‌ಪೇ ಸಹಭಾಗಿತ್ವ ಮಾಡಿಕೊಂಡಿದೆ. ಕೆಲವು ಆಯ್ದ ಫೀಚರ್ ಫೋನ್‌ಗಳಲ್ಲಿ ಈ ಸೇವೆ ಪ್ರೀ-ಬಂಡಲ್ ಆಗಿ ಲಭ್ಯವಾಗಲಿದೆ.

12 ಭಾರತೀಯ ಭಾಷೆಗಳಲ್ಲಿ AI ಧ್ವನಿ ಮಾರ್ಗದರ್ಶನ

ಹೊಸ ಸೇವೆಯನ್ನು ಮೊದಲ ಬಾರಿಗೆ ಬಳಸುವವರಿಗೆ ಅನುಕೂಲವಾಗುವಂತೆ ಫೋನ್‌ಪೇ AI ಆಧಾರಿತ ವಾಯ್ಸ್ ಹೆಲ್ಪ್‌ಲೈನ್ ವ್ಯವಸ್ಥೆಯನ್ನೂ ಪರಿಚಯಿಸಿದೆ. ಸೇವೆಯನ್ನು ಸಕ್ರಿಯಗೊಳಿಸುವುದು ಮತ್ತು ಬಳಸುವ ವಿಧಾನವನ್ನು ಹಂತ ಹಂತವಾಗಿ ತಿಳಿಸಲು ಇಂಗ್ಲಿಷ್ ಸೇರಿದಂತೆ 12 ಭಾರತೀಯ ಭಾಷೆಗಳಲ್ಲಿ ಧ್ವನಿ ಮಾರ್ಗದರ್ಶನ ಲಭ್ಯವಿದೆ. ಇದರಲ್ಲಿ ಕನ್ನಡ ಭಾಷೆಯೂ ಸೇರಿರುವುದರಿಂದ ಕನ್ನಡಿಗ ಫೀಚರ್ ಫೋನ್ ಬಳಕೆದಾರರಿಗೂ ಸೇವೆ ಸುಲಭವಾಗಲಿದೆ.

ಇಂಟರ್ನೆಟ್ ಸಂಪರ್ಕದ ಅವಶ್ಯಕತೆಯನ್ನು ಕಡಿಮೆ ಮಾಡುವ ಮೂಲಕ ಡಿಜಿಟಲ್ ಪಾವತಿಯನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ PhonePe UPI 123Pay ಮಹತ್ವದ ಹೆಜ್ಜೆಯಾಗಿದೆ.

Exit mobile version