‘ಸರ್, ನಿಮ್ಮ ಡಿಗ್ರಿ ಸರ್ಟಿಫಿಕೇಟ್, ಅನುಭವ ಪತ್ರ, ರೆಫರೆನ್ಸ್ ಎಲ್ಲಾ ಪಕ್ಕಕ್ಕಿಡಿ.. ಮೊದಲು ನಿಮ್ಮ ಫೇಸ್ಬುಕ್ ಪ್ರೊಫೈಲ್ ಯಾವುದು ಅಂತಾ ಹೇಳಿ..’
ಈ ಮಾತು ಕಾಲ್ಪನಿಕ ಅಲ್ಲ..! ಇತ್ತೀಚಿನ ದಿನಗಳಲ್ಲಿ ಉದ್ಯೋಗ ನೇಮಕಾತಿ ವೇಳೆ ಹಾಗೂ ವೀಸಾ ಪ್ರಕ್ರಿಯೆ ವೇಳೆ ಅನುಸರಿಸಲಾಗುತ್ತಿರುವ ‘ಡಿಜಿಟಲ್ ಯುಗ’ದ ಹೊಸ ರಿಯಾಲಿಟಿ..! ಕೆಲಸ ಕೊಡುವ ಸಂಸ್ಥೆಯ ಮುಖ್ಯಸ್ಥರು ಮತ್ತು ರಾಯಭಾರ ಕಚೇರಿಗಳು ಈಗ ನಿಮ್ಮ ದಾಖಲೆ ಪತ್ರಗಳಿಗಿಂತ ಹೆಚ್ಚಾಗಿ ನಿಮ್ಮ ಪಿಕ್ಚರ್‌ಗಳನ್ನ ಪರಿಶೀಲಿಸುತ್ತಾರೆ. ‘ಲಿಂಕ್ಡ್ ಇನ್’ ಅನ್ನೋದು ಅಭ್ಯರ್ಥಿಯೊಬ್ಬನ ಔಪಚಾರಿಕ ಮುಖ.. ಆದರೆ ‘ಇನ್‌ಸ್ಟಾಗ್ರಾಮ್’ ಆತನ ‘ಅನಧಿಕೃತ’ ಆವೃತ್ತಿ..! ‘ಸೋಷಿಯಲ್ ಮೀಡಿಯಾ ವೆರಿಫಿಕೇಷನ್’ ಅನ್ನೋ ಈ ಹೊಸ ‘ಡಿಜಿಟಲ್ ಅಗ್ನಿಪರೀಕ್ಷೆ’ ಎಷ್ಟು ಸರಿ?
ಒಂದು ಕಾಲದಲ್ಲಿ, ನಮ್ಮ ಜೀವನದ ರಹಸ್ಯಗಳು ನಮ್ಮ ಹೃದಯದಲ್ಲೇ ಇರುತ್ತಿದ್ದವು..! ಆದರೆ ಇಂದು..? ನಮ್ಮ ಫೇಸ್‌ಬುಕ್ ಪೋಸ್ಟ್‌ಗಳು, ಎಕ್ಸ್ ಟ್ವೀಟ್‌ಗಳು, ಇನ್‌ಸ್ಟಾಗ್ರಾಂ ರೀಲ್‌ಗಳು.. ಇವೆಲ್ಲವೂ ನಮ್ಮ ಜೀವನದ ‘ಪಬ್ಲಿಕ್ ಟಾಯ್ಲೆಟ್’ ಆಗಿವೆ..! ಉದ್ಯೋಗ ನೇಮಕಾತಿ ವೇಳೆ, ವಿದೇಶಿ ವೀಸಾ ವಿತರಣೆ ವೇಳೆ ಸೋಷಿಯಲ್ ಮೀಡಿಯಾ ಚಟುವಟಿಕೆಗಳನ್ನ ಪರಿಶೀಲನೆ ಮಾಡಲಾಗುತ್ತದೆ. ‘ಬಿಗ್ ಬಾಸ್ ನಿಮ್ಮನ್ನು ನೋಡುತ್ತಿದ್ದಾರೆ’ ಎನ್ನುವ ರೀತಿಯಲ್ಲಿ ಇದೊಂದು ಆಧುನಿಕ ‘ಬಿಗ್ ಬಾಸ್’ ಆಟದಂತಾಗಿಬಿಟ್ಟಿದೆ. ಹೀಗಾಗಿ, ಕೆಲಸ ಕೊಡೋ ಕಂಪನಿಗಳು, ಫಾರಿನ್ ವೀಸಾ ಕೊಡುವ ರಾಯಭಾರ ಕಚೇರಿಗಳು ‘ಡಿಜಿಟಲ್ ಡಿಟೆಕ್ಟಿವ್’ ರೀತಿ ವರ್ತನೆ ಮಾಡೋದು ಸರಿಯೇ..?
ಸೋಷಿಯಲ್ ಮೀಡಿಯಾ ವೆರಿಫಿಕೇಷನ್: ಸುರಕ್ಷತೆ ಹೆಸರಿನಲ್ಲಿ ಸ್ಪೈ ಗೇಮ್..?
ಕೆಲವೇ ವರ್ಷಗಳ ಹಿಂದೆ ಉದ್ಯೋಗ ನೇಮಕಾತಿ ವೇಳೆ ನೀವು CV ಕೊಟ್ಟರೆ ಸಾಕಾಗಿತ್ತು. ಆದರೆ ಇಂದು? ಕಂಪನಿಗಳು ನಿಮ್ಮ ಲಿಂಕ್ಡ್ ಇನ್ ಪ್ರೊಫೈಲ್ ಅನ್ನು ಓದಿ, ನಿಮ್ಮ ಫೇಸ್‌ಬುಕ್‌ನಲ್ಲಿ ‘ಪಾರ್ಟಿ ಪಿಕ್ಸ್’ ಹುಡುಕುತ್ತವೆ..! ಇದರಿಂದ ಪ್ರಯೋಜನ ಏನು? ಇದೊಂದು ‘ಕಾಸ್ಟ್-ಎಫೆಕ್ಟಿವ್’, ‘ಫಾಸ್ಟ್’ ಮತ್ತು ‘ಈಸಿ’ ಪ್ರಕ್ರಿಯೆ..! ಒಂದೇ ಕ್ಲಿಕ್‌ನಲ್ಲಿ ನಿಮ್ಮ ‘ಇಲ್ಲೀಗಲ್ ಬಿಹೇವಿಯರ್’ ಅಥವಾ ‘ಆಂಟಿ-ಸೋಷಿಯಲ್’ ಆಕ್ಟಿವಿಟಿಗಳನ್ನ ಕಂಡು ಹಿಡಿಯಬಹುದು..! ನಿಮ್ಮ ಪ್ರೊಫೆಷನಲ್ ಎಕ್ಸ್‌ಪೀರಿಯನ್ಸ್ ವೆರಿಫೈ ಮಾಡಬಹುದು ಮತ್ತು ‘ಕಲ್ಚರಲ್ ಫಿಟ್’ ಗುರುತಿಸಬಹುದು – ಅಂದರೆ, ನೀವು ಕಂಪನಿಯ ‘ಟೀಮ್ ಪ್ಲೇಯರ್’ ಆಗಿದ್ದೀರಾ ಅಥವಾ ಕೇವಲ ‘ಮೀಮ್ ಶೇರ್’ ಮಾಡುವವರಾ..? ಈ ರೀತಿ ನಿಮ್ಮ ಕ್ಯಾರೆಕ್ಟರ್, ವರ್ಕ್ ಎಥಿಕ್ ಎಲ್ಲವೂ ಒಂದು ಸ್ಕ್ರೋಲ್‌ನಲ್ಲಿ ಸಿಕ್ಕಿಬಿಡುತ್ತೆ..!
ಇತ್ತೀಚೆಗೆ ಅಮೆರಿಕ ಸರ್ಕಾರ ಹೊಸ ಆದೇಶವೊಂದನ್ನ ಮಾಡಿದೆ. ವೀಸಾ ವಿತರಣೆ ವೇಳೆ ಎಲ್ಲಾ ಸ್ಟೂಡೆಂಟ್ ಮತ್ತು ವೀಸಾ ಅರ್ಜಿದಾರರು ತಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳನ್ನು ‘ಪಬ್ಲಿಕ್’ ಮಾಡಬೇಕು. ಇದು ಆನ್‌ಲೈನ್ ಪರಿಶೀಲನಾ ಪ್ರಕ್ರಿಯೆ.. ನಿಮ್ಮಲ್ಲಿ ‘ಹೋಸ್ಟೈಲ್ ಅಟಿಟ್ಯೂಡ್’ ಇದೆಯೇ ಅನ್ನೋದನ್ನ ಪರಿಶೀಲಿಸ್ತೀವಿ ಅಂತಿದೆ ಅಮೆರಿಕ ರಾಯಭಾರ ಕಚೇರಿ.. ಇದರ ಪ್ರಯೋಜನ ಏನು ಅಂತಾ ಕೇಳಿದರೆ ಸುರಕ್ಷತೆ ಅನ್ನೋ ಉತ್ತರ ಕೊಡ್ತಿದೆ. ನಿಮ್ಮಿಂದ ಎದುರಾಗಬಹುದಾದ ಟೆರರ್ ಥ್ರೆಟ್‌ಗಳನ್ನ ಈ ಮೂಲಕ ಕಂಡುಹಿಡಿಯಬಹುದಂತೆ.. ಜೊತೆಯಲ್ಲೇ ನೀವು ಪ್ರಕಟಿಸುವ ಕಮ್ಯುನಿಸ್ಟ್ ಮೀಮ್‌ಗಳಿಂದ ದೇಶವನ್ನು ರಕ್ಷಿಸಬಹುದಂತೆ..! ಏಕೆಂದರೆ, ಅಮೆರಿಕ ವೀಸಾ ಪಡೆದ ಒಬ್ಬ ವಿದ್ಯಾರ್ಥಿ ಪ್ಯಾಲೆಸ್ಟೈನ್ ಪರ ಪೋಸ್ಟ್ ಮಾಡಿದರೆ, ಅದು ‘ನ್ಯಾಷನಲ್ ಸೆಕ್ಯೂರಿಟಿ ಥ್ರೆಟ್’ ಆಗಬಹುದಲ್ಲವೇ? ಹೀಗಾಗಿ ಈ ಪ್ರಕ್ರಿಯೆಯನ್ನ ಉತ್ತಮ ಎನ್ನಬಹುದೇ..? ಜೊತೆಗೆ ನಿಮ್ಮ ಸೋಷಿಯಲ್ ಮೀಡಿಯಾ ಫ್ರೆಂಡ್ ಸರ್ಕಲ್‌ನಲ್ಲೂ ಇಂಥವರೇ ಇದ್ದರೆ ಆ ಮೂಲಕವೂ ನಿಮ್ಮ ವ್ಯಕ್ತಿತ್ವವನ್ನು ‘ಜಡ್ಜ್’ ಮಾಡಬಹುದು..!
ಡಿಜಿಟಲ್ ವೆರಿಫಿಕೇಷನ್ ಅಪಾಯಗಳೇನು? ‘ಪ್ರೈವಸಿ’ ಅನ್ನೋದೇ ಇಲ್ವಾ?
ಉದ್ಯೋಗ ನೇಮಕಾತಿ ವೇಳೆ ನಿಮ್ಮ ಪೋಸ್ಟ್‌ಗಳನ್ನ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಉದ್ಯೋಗದಾತರಿಗೆ ನಿಮ್ಮ ಪೋಸ್ಟ್‌ಗಳು ಇಷ್ಟವಾಗದಿದ್ದರೆ ಏನು ಕಥೆ..? ನೀವು ಕೆಲಸ ಕಳೆದುಕೊಳ್ಳೋ ಸಾಧ್ಯತೆಗಳೇ ಹೆಚ್ಚು..! ಉದ್ಯೋಗದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಅನ್ನೋ ಪರಿಕಲ್ಪನೆಗೇ ಇದು ದೊಡ್ಡ ಹೊಡೆತ..! ಹಾರ್ವರ್ಡ್ ಬಿಜಿನೆಸ್ ರಿವ್ಯೂ ಲೇಖನದ ಪ್ರಕಾರ, ಡಿಜಿಟಲ್ ವೆರಿಫಿಕೇಷನ್ ಪ್ರಕ್ರಿಯೆಯು ನಿಮ್ಮ ಔದ್ಯೋಗಿಕ ಬದುಕಿಗೆ ನೆರವಾಗೋದಕ್ಕಿಂತ ಹೆಚ್ಚಾಗಿ ನಷ್ಟವನ್ನೇ ಉಂಟು ಮಾಡುತ್ತದೆ..!
ಇದೇ ಮಾತು ವೀಸಾ ಪಡೆಯುವ ಸಂದರ್ಭದಲ್ಲೂ ಅನ್ವಯ ಆಗಬಹುದು. ನಿಮ್ಮ ಪೋಸ್ಟ್‌ಗಳನ್ನ ನೋಡಿ ಕೊಂಕು ತೆಗೆದು ವೀಸಾ ನಿರಾಕರಿಸುವ ಸಾಧ್ಯತೆಗಳೇ ಹೆಚ್ಚು..! ಅಮೆರಿಕದ ವೀಸಾ ನೀಡುವ ವೇಳೆ ನಿಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಚೆಕ್ ಮಾಡುವ ವೇಳೆ ‘ಹೋಸ್ಟೈಲ್ ಅಟಿಟ್ಯೂಡ್’ ಇದ್ದರೆ ನಿಮ್ಮ ವೀಸಾ ರಿಜೆಕ್ಟ್ ಆಗೋದು ಗ್ಯಾರಂಟಿ.. ಇದು ನಿಮ್ಮ ಖಾಸಗಿತನಕ್ಕೆ ಆಗುವ ಧಕ್ಕೆ ಕೂಡಾ.. ಆದರೆ ಇದನ್ನೆಲ್ಲಾ ಯಾರಿಗೆ ಹೇಳೋದು..?
ಸರಿ-ತಪ್ಪುಗಳ ಸರ್ಕಸ್ ಆಗಿದೆ ಬದುಕು..!
ಡಿಜಿಟಲ್ ಪರಿಶೀಲನೆ ಅನ್ನೋ ವಿಚಾರದಲ್ಲಿ ‘ಸರಿ’ ಯಾವುದು? ‘ತಪ್ಪು’ ಯಾವುದು? ಎಂದು ನಿರ್ಧರಿಸೋದೇ ಕಷ್ಟ.. ನಿಮ್ಮ ಮನೆಯಲ್ಲಿ CCTV ಕ್ಯಾಮೆರಾ ಇದೆ ಅಂದುಕೊಳ್ಳಿ.. ಅದು ನಿಮ್ಮ ‘ಸುರಕ್ಷತೆ’.. ಕಳ್ಳರನ್ನು ಹಿಡಿಯಬಹುದು. ಜೊತೆಯಲ್ಲೇ ಇದೇ CCTV ಕ್ಯಾಮೆರಾ ನಿಮ್ಮ ಚಲನವಲನಗಳನ್ನೂ ರೆಕಾರ್ಡ್ ಮಾಡುತ್ತೆ..! ಶೇ. 70% ಕಂಪನಿಗಳು ಇದೇ ತಂತ್ರ ಅನುಸರಿಸುತ್ತಿವೆ..! ನೀವು ಎಷ್ಟು ಚನ್ನಾಗಿ ಕೆಲಸ ಮಾಡ್ತಿದ್ದೀರಿ ಅಂತಾ ನಿರ್ಧರಿಸೋದ್ರಲ್ಲಿ CCTV ಕ್ಯಾಮೆರಾ ಪಾತ್ರವೂ ಇದೆ..!
ಒಟ್ಟಾರೆ ಹೇಳೋದಾದರೆ, ಡಿಜಿಟಲ್ ‘ಬಿಗ್ ಬಾಸ್’ ನಮ್ಮೆಲ್ಲರನ್ನ ಪ್ರತಿ ಕ್ಷಣ ನೋಡುತ್ತಿದೆ, ಫಾಲೋ ಮಾಡ್ತಿದೆ. ತಮಾಷೆಯಾಗಿ ಹೇಳೋದಾದರೆ ನಾಳೆ, ನಿಮ್ಮ ಮ್ಯಾರೇಜ್ ರಿಜಿಸ್ಟ್ರೇಷನ್‌ಗೂ ಸೋಷಿಯಲ್ ಮೀಡಿಯಾ ಚೆಕ್ ಮಾಡೋ ಸಂದರ್ಭ ಬರಬಹುದು..! ‘ಇವನ ಪೋಸ್ಟ್‌ಗಳು ಸೇಫ್ ಆಗಿವೆಯೇ?’ ಎಂದು ನಿಮ್ಮ ಭಾವಿ ಹೆಂಡತಿ ಚೆಕ್ ಮಾಡಬಹುದು..! ಇನ್ನೂ ಏನೇನ್ ಆಗುತ್ತೋ.. ದೇವರೇ ಬಲ್ಲ..
