ನವದೆಹಲಿ, ಸೆ. 9: ಟೆಕ್ ಪ್ರಿಯರು ಬಹುದಿನಗಳಿಂದ ಕಾತರದಿಂದ ಕಾಯುತ್ತಿರುವ ಆ್ಯಪಲ್‌ನ ವಿಶೇಷ ಸೆಪ್ಟೆಂಬರ್ ಕಾರ್ಯಕ್ರಮ ಇಂದು ನಡೆಯಲಿದೆ. ‘Surprise and Shine’ ಹೆಸರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹೊಸ ಐಫೋನ್‌ಗಳ ಜತೆಗೆ ಆ್ಯಪಲ್ ವಾಚ್, ಏರ್‌ಪಾಡ್ಸ್ ಸೇರಿದಂತೆ ಹಲವು ಉತ್ಪನ್ನಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಭಾರತೀಯ ಕಾಲಮಾನ ಪ್ರಕಾರ ಕಾರ್ಯಕ್ರಮ ರಾತ್ರಿ 10.30ಕ್ಕೆ ಆರಂಭವಾಗಲಿದೆ.
ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋದಲ್ಲಿರುವ ಆ್ಯಪಲ್ ಪಾರ್ಕ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಾಹಕರು ಆ್ಯಪಲ್‌ನ ಅಧಿಕೃತ ವೆಬ್‌ಸೈಟ್, ಆ್ಯಪಲ್ ಟಿವಿ ಆ್ಯಪ್ ಹಾಗೂ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.
ಐಫೋನ್ 18 ಪ್ರೊ ಸರಣಿಯತ್ತ ಎಲ್ಲರ ಕಣ್ಣು
ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಆಗಿರಬಹುದು ಎಂಬ ನಿರೀಕ್ಷೆಯಿದೆ.
ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ, ಐಫೋನ್ 18 ಪ್ರೊ ಸರಣಿಯಲ್ಲಿ ಕ್ಯಾಮೆರಾ ತಂತ್ರಜ್ಞಾನದಲ್ಲಿ ಸುಧಾರಣೆ, ಹೊಸ ತಲೆಮಾರಿನ A20 Pro ಚಿಪ್, ಉತ್ತಮ ಬ್ಯಾಟರಿ ಸಾಮರ್ಥ್ಯ ಮತ್ತು ಹೊಸ ಬಣ್ಣದ ಆಯ್ಕೆಗಳು ಸಿಗುವ ಸಾಧ್ಯತೆಯಿದೆ. ಆದರೆ ಈ ಯಾವುದೇ ಮಾಹಿತಿಯನ್ನು ಆ್ಯಪಲ್ ಅಧಿಕೃತವಾಗಿ ದೃಢಪಡಿಸಿಲ್ಲ.
ಫೋಲ್ಡಬಲ್ ಐಫೋನ್‌ಗೆ ಭರ್ಜರಿ ನಿರೀಕ್ಷೆ
ಕಾರ್ಯಕ್ರಮದ ಅತಿದೊಡ್ಡ ಅಚ್ಚರಿಯಾಗಿ ಆ್ಯಪಲ್‌ನ ಮೊದಲ ಮಡಿಸಬಹುದಾದ ಐಫೋನ್ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ. ಇದಕ್ಕೆ ‘ಐಫೋನ್ ಅಲ್ಟ್ರಾ’ ಎಂದು ಕರೆಯಲಾಗುತ್ತದೆ.
ವರದಿಗಳ ಪ್ರಕಾರ, ಫೋನ್ ಪುಸ್ತಕದಂತೆ ಮಡಚುವ ವಿನ್ಯಾಸ ಹೊಂದಿರು ಸಾಧ್ಯತೆ ಇದೆ. ಸುಮಾರು 7.8 ಇಂಚಿನ ಒಳಗಿನ ಡಿಸ್‌ಪ್ಲೇ, A20 Pro ಚಿಪ್ ಮತ್ತು 12GB ಮೆಮೊರಿ ಇರುವ ಸಾಧ್ಯತೆಯಿದೆ. Face ID ಬದಲಿಗೆ Touch ID ನೀಡುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹಿಂಭಾಗದಲ್ಲಿ ಎರಡು 48 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಇರಬಹುದು ಎಂಬ ಮಾಹಿತಿಯೂ ಹರಿದಾಡುತ್ತಿದೆ.
ಆ್ಯಪಲ್ ವಾಚ್, ಏರ್‌ಪಾಡ್ಸ್‌ಗೂ ಹೊಸ ರೂಪ?
ಐಫೋನ್‌ಗಳ ಜತೆಗೆ Apple Watch Series 12 ಮತ್ತು Apple Watch Ultra 4 ಮಾದರಿಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಆರೋಗ್ಯ ಸಂಬಂಧಿತ ಸೆನ್ಸರ್‌ಗಳಲ್ಲಿ ಸುಧಾರಣೆ ಹಾಗೂ ವಿನ್ಯಾಸ ಬದಲಾವಣೆ ನಿರೀಕ್ಷಿಸಲಾಗಿದೆ. ಇದೇ ವೇಳೆ ಹೊಸ ಏರ್‌ಪಾಡ್ಸ್ ಮಾದರಿಯನ್ನೂ ಆ್ಯಪಲ್ ಅನಾವರಣಗೊಳಿಸುವ ಸಾಧ್ಯತೆ ಇದೆ.
ಇಂದು ರಾತ್ರಿ ಹೇಗೆ ವೀಕ್ಷಿಸಬಹುದು?
ಭಾರತದಲ್ಲಿ ಕಾರ್ಯಕ್ರಮ ರಾತ್ರಿ 10.30ಕ್ಕೆ ಆರಂಭವಾಗಲಿದೆ. ಆ್ಯಪಲ್‌ನ ಅಧಿಕೃತ ವೆಬ್‌ಸೈಟ್, Apple TV ಆ್ಯಪ್ ಮತ್ತು ಅಧಿಕೃತ YouTube ಚಾನೆಲ್‌ನಲ್ಲಿ ಲೈವ್‌ಸ್ಟ್ರೀಮ್ ಲಭ್ಯವಾಗಲಿದೆ. ಕಾರ್ಯಕ್ರಮದಲ್ಲಿ ನಿಜವಾಗಿ ಯಾವ ಉತ್ಪನ್ನಗಳು ಬಿಡುಗಡೆಯಾಗುತ್ತವೆ ಎಂಬುದು ಆ್ಯಪಲ್‌ನ ಅಧಿಕೃತ ಘೋಷಣೆಯ ಬಳಿಕವಷ್ಟೇ ಖಚಿತವಾಗಲಿದೆ.
