ಏಷ್ಯನ್ ಗೇಮ್ಸ್‌ಗೆ ಟೀಮ್ ಇಂಡಿಯಾ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ

Shriram Nene Madhuri Dixit

2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಮಾಜಿ ಕ್ರಿಕೆಟಿಗ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರ ಹೆಗಲೇರಿದೆ. ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಭಾರತೀಯ ಕ್ರೀಡಾ ಸಚಿವಾಲಯ ಅಧಿಕೃತ ಅನುಮೋದನೆ ನೀಡಿದ್ದು, ಅದರಂತೆ ಏಷ್ಯನ್ ಗೇಮ್ಸ್‌ಗಾಗಿ ಭಾರತ ತಂಡಕ್ಕೆ ಲಕ್ಷ್ಮಣ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಏಷ್ಯನ್ ಗೇಮ್ಸ್ ನಡೆಯುವ ಅವಧಿಯಲ್ಲೇ ಭಾರತ ಹಿರಿಯರ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ತೊಡಗಿಕೊಳ್ಳಲಿದೆ. ಈ ಸರಣಿಯ ಜವಾಬ್ದಾರಿ ನಿಯಮಿತ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮೇಲಿದೆ. ಹೀಗಾಗಿ ಒಂದೇ ಸಮಯದಲ್ಲಿ ನಡೆಯಲಿರುವ ಎರಡು ಪ್ರಮುಖ ಅಂತಾರಾಷ್ಟ್ರೀಯ ಕ್ರಿಕೆಟ್ ಬದ್ಧತೆಗಳನ್ನು ನಿರ್ವಹಿಸಲು ಬಿಸಿಸಿಐ ವಿಭಿನ್ನ ಕೋಚಿಂಗ್ ವ್ಯವಸ್ಥೆಯನ್ನು ರೂಪಿಸಿದೆ.

ಅದರಂತೆ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಗೌತಮ್ ಗಂಭೀರ್ ಭಾರತ ಹಿರಿಯರ ತಂಡದ ಕೋಚ್ ಆಗಿ ಮುಂದುವರಿಯಲಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ಕಣಕ್ಕಿಳಿಯುವ ತಂಡದ ಜವಾಬ್ದಾರಿಯನ್ನು ವಿವಿಎಸ್ ಲಕ್ಷ್ಮಣ್ ವಹಿಸಿಕೊಳ್ಳಲಿದ್ದಾರೆ. ಲಕ್ಷ್ಮಣ್ ಅವರಿಗೆ ಸಹಾಯಕ ಸಿಬ್ಬಂದಿಯಾಗಿ ಮಾಜಿ ಕ್ರಿಕೆಟಿಗರಾದ ಹೃಷಿಕೇಶ್ ಕಾನಿಟ್ಕರ್ ಹಾಗೂ ಸುನಿಲ್ ಜೋಶಿ ಕಾರ್ಯನಿರ್ವಹಿಸಲಿದ್ದಾರೆ. ಕಾನಿಟ್ಕರ್ ಬ್ಯಾಟಿಂಗ್ ಕೋಚ್ ಆಗಿ, ಸುನಿಲ್ ಜೋಶಿ ಬೌಲಿಂಗ್ ಕೋಚ್ ಆಗಿ ತಂಡಕ್ಕೆ ನೆರವಾಗಲಿದ್ದಾರೆ.

ಶ್ರೇಯಸ್ ಅಯ್ಯರ್ ನಾಯಕತ್ವ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ತಂಡದಲ್ಲಿ ಅನುಭವಿಗಳ ಜೊತೆಗೆ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಹಾಗೂ ಸಂಜು ಸ್ಯಾಮ್ಸನ್ ಅವರಂತಹ ಪ್ರಮುಖ ಆಟಗಾರರು ತಂಡದ ಬಲ ಹೆಚ್ಚಿಸಲಿದ್ದಾರೆ. ಇದೇ ವೇಳೆ ಅಭಿಷೇಕ್ ಶರ್ಮಾ ಸೇರಿದಂತೆ ಯುವ ಆಟಗಾರರ ಮೇಲೂ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಇದರ ಜೊತೆಗೆ ಕೇವಲ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಕೂಡ ತಂಡದಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಯುವ ಹಾಗೂ ಅನುಭವಿ ಆಟಗಾರರ ಸಂಯೋಜನೆಯೊಂದಿಗೆ ಭಾರತ ಬಲಿಷ್ಠ ತಂಡವನ್ನು ಕಟ್ಟಿಕೊಂಡಿದೆ.

ಹಾಲಿ ಚಾಂಪಿಯನ್ ಭಾರತ

ಕಳೆದ ಬಾರಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡ ಚಿನ್ನದ ಪದಕ ಗೆದ್ದು ಗಮನ ಸೆಳೆದಿತ್ತು. ಇದೀಗ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿರುವ ಭಾರತ ಮತ್ತೊಮ್ಮೆ ಚಿನ್ನದ ಪದಕ ಗೆಲ್ಲುವ ಗುರಿ ಹೊಂದಿದೆ.

ಭಾರತ ತಂಡವು ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದಿರುವುದರಿಂದ ಟೂರ್ನಿಯಲ್ಲಿ ಆರಂಭಿಕ ಹಂತದ ಪಂದ್ಯಗಳ ಒತ್ತಡವೂ ಕಡಿಮೆಯಾಗಲಿದೆ. ವಿವಿಎಸ್ ಲಕ್ಷ್ಮಣ್ ಅವರ ಮಾರ್ಗದರ್ಶನ, ಶ್ರೇಯಸ್ ಅಯ್ಯರ್ ಅವರ ನಾಯಕತ್ವ ಹಾಗೂ ಅನುಭವಿ-ಯುವ ಆಟಗಾರರ ಸಮತೋಲನದೊಂದಿಗೆ ಭಾರತ ತಂಡ ಮತ್ತೊಮ್ಮೆ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದೆ.

Exit mobile version