US Open 2026: ಮೊದಲ ಸುತ್ತಿನಲ್ಲೇ ಜೊಕೊವಿಕ್ ಗೆ ಶಾಕ್, ಟೂರ್ನಿಯಿಂದ ಹೊರಕ್ಕೆ!

ಸಾವು (18)

ನೊವಾಕ್ ಜೊಕೊವಿಚ್ ಅವರಿಗೆ ಯುಎಸ್ ಓಪನ್‌ 2026ರಲ್ಲಿ ಭಾರೀ ಆಘಾತ ಎದುರಾಗಿದೆ. ನ್ಯೂಯಾರ್ಕ್‌ನ ಆರ್ಥರ್‌ ಆ್ಯಶ್‌ ಸ್ಟೇಡಿಯಂನಲ್ಲಿ ನಡೆದ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲೇ ಜೊಕೊವಿಚ್‌ ಸೋತು ಹೊರಬಿದ್ದಿದ್ದಾರೆ. ಅರ್ಜೆಂಟೀನಾದ ವಿಶ್ವದ 49ನೇ ಶ್ರೇಯಾಂಕದ ಆಟಗಾರ ಮಾರಿಯಾನೊ ನವೋನ್ ವಿರುದ್ಧ ನಡೆದ ಐದು ಸೆಟ್‌ಗಳ ರೋಚಕ ಕಾದಾಟದಲ್ಲಿ ಜೊಕೊವಿಚ್‌ ಸೋಲನುಭವಿಸಿದ್ದಾರೆ.

ಸುಮಾರು 4 ಗಂಟೆ 36 ನಿಮಿಷಗಳ ಕಾಲ ನಡೆದ ಈ ಮ್ಯಾರಥಾನ್‌ ಪಂದ್ಯದಲ್ಲಿ ನವೋನ್‌ 7-6 (7-5), 5-7, 4-6, 6-2, 6-1 ಸೆಟ್‌ಗಳ ಅಂತರದಲ್ಲಿ ಜೊಕೊವಿಚ್‌ ಅವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಟೈಬ್ರೇಕ್‌ ಮೂಲಕ ಮುನ್ನಡೆ ಸಾಧಿಸಿದ ನವೋನ್‌ಗೆ ಜೊಕೊವಿಚ್‌ ಎರಡನೇ ಹಾಗೂ ಮೂರನೇ ಸೆಟ್‌ಗಳಲ್ಲಿ ತಿರುಗೇಟು ನೀಡಿದ್ದರು. ಆದರೆ ನಂತರ ಜೊಕೊವಿಚ್‌ ದೈಹಿಕವಾಗಿ ಬಳಲಿದ ಪರಿಣಾಮ ಪಂದ್ಯ ಸಂಪೂರ್ಣವಾಗಿ ನವೋನ್‌ ಪರ ವಾಲಿತು.

20 ವರ್ಷಗಳ ದಾಖಲೆ ಧೂಳೀಪಟ

ಈ ಸೋಲಿನೊಂದಿಗೆ ಜೊಕೊವಿಚ್‌ ಅವರ ಯುಎಸ್‌ ಓಪನ್‌ ವೃತ್ತಿಜೀವನದ ಪ್ರಮುಖ ದಾಖಲೆ ಕೂಡ ಅಂತ್ಯಗೊಂಡಿದೆ. ಸುಮಾರು 20 ವರ್ಷಗಳ ಯುಎಸ್‌ ಓಪನ್‌ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಅವರು ಮೊದಲ ಸುತ್ತಿನಲ್ಲೇ ಸೋತಿದ್ದಾರೆ.

ಅಷ್ಟೇ ಅಲ್ಲದೆ, ಗ್ರ್ಯಾಂಡ್‌ ಸ್ಲಾಂ ಟೂರ್ನಿಗಳ ಮೊದಲ ಸುತ್ತಿನಲ್ಲಿ ಜೊಕೊವಿಚ್‌ ಹೊಂದಿದ್ದ ಸತತ 77 ಪಂದ್ಯಗಳ ಗೆಲುವಿನ ನಾಗಾಲೋಟಕ್ಕೂ ಬ್ರೇಕ್‌ ಬಿದ್ದಿದೆ. 2006ರ ಆಸ್ಟ್ರೇಲಿಯನ್‌ ಓಪನ್‌ ಬಳಿಕ ಗ್ರ್ಯಾಂಡ್‌ ಸ್ಲಾಂ ಟೂರ್ನಿಯೊಂದರಲ್ಲಿ ಅವರು ಅನುಭವಿಸಿದ ಅತ್ಯಂತ ಆಘಾತಕಾರಿ ಸೋಲು ಇದಾಗಿದೆ.

39 ವರ್ಷದ ಜೊಕೊವಿಚ್‌ ಪಂದ್ಯದುದ್ದಕ್ಕೂ ತೀವ್ರ ದೈಹಿಕ ಸಮಸ್ಯೆ ಎದುರಿಸಿದರು. ನ್ಯೂಯಾರ್ಕ್‌ನ ತೇವಾಂಶ ಹಾಗೂ ಬಿಸಿಯಾದ ವಾತಾವರಣ ಅವರ ಆಟದ ಮೇಲೆ ಪರಿಣಾಮ ಬೀರಿತು ಎನ್ನಲಾಗಿದೆ. ಮೂರನೇ ಸೆಟ್‌ನ ಮಧ್ಯಭಾಗದಲ್ಲಿ ಅವರು ಕೋರ್ಟ್‌ನಲ್ಲೇ ಹಲವು ಬಾರಿ ವಾಂತಿ ಮಾಡಿಕೊಂಡರು.

ನಂತರ ನಾಲ್ಕನೇ ಸೆಟ್‌ನಲ್ಲಿ ಬೆನ್ನುನೋವು ಹಾಗೂ ಕಾಲಿನ ಸ್ನಾಯು ಸೆಳೆತದಿಂದಾಗಿ ಜೊಕೊವಿಚ್‌ ಓಡಾಡಲು ಕೂಡ ಕಷ್ಟಪಟ್ಟರು. ಐದನೇ ಸೆಟ್‌ ವೇಳೆಗೆ ಅವರ ದೈಹಿಕ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ನೋವು ಹಾಗೂ ಬಳಲಿಕೆಯಿಂದ ಅವರು ಕಣ್ಣೀರಿಟ್ಟ ದೃಶ್ಯ ಅಭಿಮಾನಿಗಳ ಮನಕಲಕಿತು. ಮತ್ತೊಂದೆಡೆ, ನವೋನ್‌ ತಮ್ಮ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಂಡು ನಿರ್ಣಾಯಕ ಸೆಟ್‌ಗಳಲ್ಲಿ ಪ್ರಾಬಲ್ಯ ಸಾಧಿಸಿದರು.

‘ನನ್ನ ಕನಸು ನನಸಾಗಿದೆ’

ಜೊಕೊವಿಚ್‌ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ಮಾರಿಯಾನೊ ನವೋನ್‌ ಭಾವುಕರಾದರು. ಟೆನಿಸ್‌ ಜಗತ್ತಿನ GOAT ವಿರುದ್ಧ ಆರ್ಥರ್‌ ಆ್ಯಶ್‌ ಸ್ಟೇಡಿಯಂನಂತಹ ದೊಡ್ಡ ವೇದಿಕೆಯಲ್ಲಿ ಐದು ಸೆಟ್‌ಗಳ ಪಂದ್ಯ ಗೆದ್ದಿರುವುದು ತಮ್ಮ ಪಾಲಿಗೆ ಕನಸು ನನಸಾದ ಅನುಭವ ಎಂದು ಅವರು ಹೇಳಿದ್ದಾರೆ.

ಈ ಗೆಲುವಿನೊಂದಿಗೆ ನವೋನ್‌ ಯುಎಸ್‌ ಓಪನ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದು, ಜೊಕೊವಿಚ್‌ ಅವರಂತಹ ದಿಗ್ಗಜನನ್ನು ಮೊದಲ ಸುತ್ತಿನಲ್ಲೇ ಮಣಿಸಿರುವುದು ಅವರ ವೃತ್ತಿಜೀವನದ ಅತ್ಯಂತ ಮಹತ್ವದ ಗೆಲುವುಗಳಲ್ಲಿ ಒಂದಾಗಿ ದಾಖಲಾಗಿದೆ. ಇನ್ನೊಂದೆಡೆ, ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಜೊಕೊವಿಚ್‌ ಅವರ ಯುಎಸ್‌ ಓಪನ್‌ ಅಭಿಯಾನ ನಿರೀಕ್ಷೆಗೂ ಮುನ್ನವೇ ಅಂತ್ಯಗೊಂಡಿದೆ.

Exit mobile version