ನಾಳೆ ಒಂದೇ ದಿನ 3 ಪಂದ್ಯ ಆಡಲಿದೆ ಟೀಮ್​ ಇಂಡಿಯಾ

Untitled design (97)

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ನಾಳೆ ವಿಶೇಷ ದಿನವಾಗಲಿದ್ದು, ಅಭಿಮಾನಿಗಳಿಗೆ ಒಂದೇ ದಿನದಲ್ಲಿ ಮೂರು ಪ್ರಮುಖ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ. ಜೂ. 17ರಂದು  ಭಾರತ ಹಿರಿಯ ಪುರುಷರ ತಂಡ, ಮಹಿಳಾ ತಂಡ ಮತ್ತು ಭಾರತ ‘ಎ’ ತಂಡಗಳು ಕಣಕ್ಕಿಳಿಯುತ್ತಿವೆ. ಮಹಿಳಾ ತಂಡ ಟಿ20 ಪಂದ್ಯ ಆಡಲಿದ್ದು, ಪುರುಷರ ತಂಡಗಳು ಏಕದಿನ ಪಂದ್ಯಗಳನ್ನು ಆಡಲಿವೆ.

 ಭಾರತ ‘ಎ’ ತಂಡವು ಅಫ್ಘಾನಿಸ್ತಾನ ‘ಎ’ ತಂಡದ ವಿರುದ್ಧ ದಂಬುಲ್ಲಾದಲ್ಲಿ ನಡೆಯುವ ತ್ರಿಕೋನ ಸರಣಿಯ ಪ್ರಮುಖ ಪಂದ್ಯದಲ್ಲಿ ಸೆಣಸಲಿದೆ. ಈ ಸರಣಿಯಲ್ಲಿ ಶ್ರೀಲಂಕಾ ‘ಎ’, ಅಫ್ಘಾನಿಸ್ತಾನ ‘ಎ’ ಮತ್ತು ಭಾರತ ‘ಎ’ ತಂಡಗಳು ಭಾಗವಹಿಸುತ್ತಿವೆ. ಭಾರತ ತಂಡವನ್ನು ತಿಲಕ್ ವರ್ಮಾ ಮುನ್ನಡೆಸುತ್ತಿದ್ದಾರೆ. ಈಗಾಗಲೇ ಈ ಸರಣಿಯಲ್ಲಿ ಭಾರತ ‘ಎ’ ತಂಡವು ಮೂರು ಪಂದ್ಯಗಳನ್ನು ಆಡಿದ್ದು, ಶ್ರೀಲಂಕಾ ವಿರುದ್ಧ ಒಂದು ಗೆಲುವು ಮತ್ತು ಒಂದು ಸೋಲನ್ನು ದಾಖಲಿಸಿದೆ. ಅಫ್ಘಾನಿಸ್ತಾನ ವಿರುದ್ಧದ ಹಿಂದಿನ ಪಂದ್ಯದಲ್ಲಿ ಸೋಲು ಅನುಭವಿಸಿರುವ ಕಾರಣ, ನಾಳೆಯ ಪಂದ್ಯ ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಫೈನಲ್ ಪ್ರವೇಶದ ಅವಕಾಶಗಳು ಜೀವಂತವಾಗಿರಲಿವೆ.

ಅದೇ ದಿನ ಮಧ್ಯಾಹ್ನ 1:30ಕ್ಕೆ, ಹಿರಿಯ ಪುರುಷರ ತಂಡವು ಅಫ್ಘಾನಿಸ್ತಾನ ವಿರುದ್ಧ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಮೂರು ಪಂದ್ಯಗಳ ಸರಣಿಯ ಭಾಗವಾಗಿರುವ ಈ ಪಂದ್ಯದಲ್ಲಿ ಭಾರತ ಈಗಾಗಲೇ ಒಂದು ಜಯವನ್ನು ದಾಖಲಿಸಿದೆ. ಶುಭಮನ್ ಗಿಲ್ ನಾಯಕತ್ವದ ತಂಡ ಸರಣಿಯನ್ನು ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ದಾಖಲೆಗಳ ಪ್ರಕಾರ, ಇದುವರೆಗೆ ಐದು ಪಂದ್ಯಗಳು ನಡೆದಿದ್ದು, ಭಾರತ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.

ದಿನದ ಕೊನೆಯ ಪ್ರಮುಖ ಪಂದ್ಯ ಸಂಜೆ 7:00 ಗಂಟೆಗೆ ನಡೆಯಲಿದ್ದು, ಮಹಿಳಾ ತಂಡವು ನೆದರ್ಲ್ಯಾಂಡ್ಸ್ ವಿರುದ್ಧ ಟಿ20 ವಿಶ್ವಕಪ್ ಪಂದ್ಯದಲ್ಲಿ ಎದುರಿಸಲಿದೆ. ಇಂಗ್ಲೆಂಡ್‌ನ ಲೀಡ್ಸ್‌ನ ಹೆಡಿಂಗ್ಲಿ ಮೈದಾನದಲ್ಲಿ ನಡೆಯುವ ಈ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ಪಾಕಿಸ್ತಾನ ವಿರುದ್ಧದ ಗೆಲುವಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಸರಣಿಯಲ್ಲಿ ಉತ್ತಮ ಆರಂಭ ಪಡೆದಿರುವ ಭಾರತೀಯ ಮಹಿಳಾ ತಂಡ ಈ ಪಂದ್ಯದಲ್ಲಿಯೂ ಜಯ ಸಾಧಿಸುವ ಗುರಿಯೊಂದಿಗೆ ಆಡಲಿದೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವುದರಿಂದ. ಇದು ಎರಡೂ ತಂಡಗಳಿಗೂ ಹೊಸ ಅನುಭವವಾಗಲಿದೆ. ಭಾರತದ ಮಹಿಳಾ ತಂಡ ಪ್ರಬಲ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದೊಂದಿಗೆ ಕಣಕ್ಕಿಳಿಯುವ ನಿರೀಕ್ಷೆಯಿದೆ.

ಒಟ್ಟಿನಲ್ಲಿ, ನಾಳೆಯ ದಿನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಂತ ರೋಚಕ ದಿನವಾಗಲಿದ್ದು, ಬೆಳಿಗ್ಗೆಯಿಂದ ರಾತ್ರಿ ತನಕ ವಿಭಿನ್ನ ಮಟ್ಟದ ಕ್ರಿಕೆಟ್ ಪಂದ್ಯಗಳು ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿದೆ.

Exit mobile version