ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ, ಎಂಟು ವರ್ಷಗಳ ಬಳಿಕ ದೇಶಿ ಕ್ರಿಕೆಟ್‌ಗೆ ಭರ್ಜರಿ ಕಮ್‌ಬ್ಯಾಕ್ ನೀಡಿದ್ದಾರೆ. 2025–26ರ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸಿಕ್ಕಿಂ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್, ಕೇವಲ 62 ಎಸೆತಗಳಲ್ಲಿ ಸ್ಪೋಟಕ ಶತಕವನ್ನು ಬಾರಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ. ಈ ಶತಕದೊಂದಿಗೆ 50 ಓವರ್‌ಗಳ ದೇಶಿ ಕ್ರಿಕೆಟ್‌ನಲ್ಲಿ ಹಿಟ್‌ಮ್ಯಾನ್ ಮತ್ತೆ ತಮ್ಮ ಶಕ್ತಿಯನ್ನು ಸಾಬೀತುಪಡಿಸಿದ್ದಾರೆ.
ಜೈಪುರದ ಐತಿಹಾಸಿಕ ಸಾವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆದಿದ್ದು, ರೋಹಿತ್ ಶರ್ಮಾ ಮೈದಾನಕ್ಕೆ ಇಳಿಯುವ ಮೊದಲೇ “ರೋಹಿತ್, ರೋಹಿತ್” ಹಾಗೂ “ಮುಂಬೈ ರಾಜ” ಎಂಬ ಘೋಷಣೆಗಳು ಮೈದಾನದಲ್ಲಿ ಕೇಳಿಬಂತು. ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ ನೀಡಲಾಗಿದ್ದ ಕಾರಣ 12,000ಕ್ಕೂ ಹೆಚ್ಚು ಅಭಿಮಾನಿಗಳು ಸ್ಟೇಡಿಯಂನಲ್ಲಿ ಜಮಾಯಿಸಿದ್ದರು. ಅಭಿಮಾನಿಗಳ ನಿರೀಕ್ಷೆಯನ್ನು ಹಿಟ್‌ಮ್ಯಾನ್ ನಿರಾಸೆಗೊಳಿಸಲಿಲ್ಲ.
ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಮಿಡ್ ವಿಕೆಟ್ ಮೇಲೆ ಪುಲ್ ಶಾಟ್ ಮೂಲಕ ಬೌಂಡರಿ ಬಾರಿಸಿದ ರೋಹಿತ್, ಸಿಕ್ಕಿಂ ಬೌಲರ್‌ಗಳಿಗೆ ಆರಂಭದಲ್ಲೇ ಎಚ್ಚರಿಕೆ ನೀಡಿದರು. ಬಳಿಕ ತಮ್ಮ ಸಹಜ ಶೈಲಿಯ ಅಗ್ರೆಸಿವ್ ಬ್ಯಾಟಿಂಗ್ ಮೂಲಕ ಬೌಂಡರಿ–ಸಿಕ್ಸರ್‌ಗಳ ಮಳೆಗರೆದರು. 62 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಲಿಸ್ಟ್ ಎ ಕ್ರಿಕೆಟ್‌ನಲ್ಲಿನ ತಮ್ಮ ಅತ್ಯಂತ ವೇಗದ ಶತಕವನ್ನು ದಾಖಲಿಸಿದರು.
ರೋಹಿತ್ ಶರ್ಮಾ ತಮ್ಮ ಈ ಅದ್ಭುತ ಇನಿಂಗ್ಸ್‌ನಲ್ಲಿ 94 ಎಸೆತಗಳನ್ನು ಎದುರಿಸಿ 155 ರನ್‌ಗಳನ್ನು ಸಿಡಿಸಿದರು. ಈ ಅವಧಿಯಲ್ಲಿ 9 ಸಿಕ್ಸರ್‌ಗಳು ಹಾಗೂ 18 ಬೌಂಡರಿಗಳನ್ನು ಬಾರಿಸಿ, ಸಿಕ್ಕಿಂ ಬೌಲಿಂಗ್ ದಾಳಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದರು. ಇದು ಅವರ ಲಿಸ್ಟ್ ಎ ಕ್ರಿಕೆಟ್ ಕರಿಯರ್‌ನ 37ನೇ ಶತಕವಾಗಿದೆ.
ಮೊದಲ ವಿಕೆಟ್‌ಗೆ ಯುವ ಬ್ಯಾಟ್ಸ್‌ಮನ್ ಅಂಗ್‌ಕೃಷ್ ರಘುವಂಶಿ ಅವರೊಂದಿಗೆ 141 ರನ್‌ಗಳ ಭರ್ಜರಿ ಜೊತೆಯಾಟವನ್ನು ಆಡಿದ ರೋಹಿತ್, ಬಳಿಕ ಮುಶೀರ್ ಖಾನ್ ಅವರೊಂದಿಗೆ 85 ರನ್‌ಗಳ ಉಪಯುಕ್ತ ಜೊತೆಯಾಟವನ್ನು ನಿರ್ಮಿಸಿದರು. ಅಂಗ್‌ಕೃಷ್ 38 ರನ್ ಗಳಿಸಿದರೆ, ಮುಶೀರ್ ಖಾನ್ ಅಜೇಯ 27 ರನ್‌ಗಳನ್ನು ಬಾರಿಸಿದರು. ರೋಹಿತ್ ಅವರ ಶತಕದ ನೆರವಿನಿಂದ ಮುಂಬೈ ತಂಡ, ಸಿಕ್ಕಿಂ ನೀಡಿದ್ದ 237 ರನ್‌ಗಳ ಗುರಿಯನ್ನು ಕೇವಲ 30.3 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಸುಲಭವಾಗಿ ಚೇಸ್ ಮಾಡಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು.
ಇದಕ್ಕೂ ಮುನ್ನ ಸಿಕ್ಕಿಂ ತಂಡವನ್ನು ನಿಯಂತ್ರಿಸುವಲ್ಲಿ ಮುಂಬೈ ನಾಯಕ ಶಾರ್ದುಲ್ ಠಾಕೂರ್ ಪ್ರಮುಖ ಪಾತ್ರ ವಹಿಸಿ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು. ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.





