ಭಾರತೀಯ ಕ್ರಿಕೆಟ್ ತಂಡದ ಆಟಗಾರ ರಿಂಕು ಸಿಂಗ್ ಹಾಗೂ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ವಿವಾಹದ ಕುರಿತು ಮಹತ್ವದ ಸುದ್ದಿ ಹೊರಬಿದ್ದಿದೆ. ಇಬ್ಬರೂ ಡಿಸೆಂಬರ್ 4ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ. ಲಕ್ನೋದ ರಾಮದಾ ಹೋಟೆಲ್‌ನಲ್ಲಿ ವಿವಾಹ ಸಮಾರಂಭ ನಡೆಯಲಿದ್ದು, ಈಗಾಗಲೇ ಮದುವೆ ಸಿದ್ಧತೆಗಳು ಆರಂಭಗೊಂಡಿವೆ ಎನ್ನಲಾಗಿದೆ.
ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಅವರ ವಿವಾಹಕ್ಕೆ ಎರಡೂ ಕುಟುಂಬಗಳ ಆಪ್ತರು, ಸ್ನೇಹಿತರು ಸೇರಿದಂತೆ ಕ್ರಿಕೆಟ್ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಈ ಮೂಲಕ ಕ್ರಿಕೆಟ್ ಹಾಗೂ ರಾಜಕೀಯ ಕ್ಷೇತ್ರದ ಪ್ರಮುಖ ವ್ಯಕ್ತಿಗಳ ಸಮಾಗಮಕ್ಕೆ ಮದುವೆ ವೇದಿಕೆಯಾಗಲಿದೆ.
ಹಲವು ಬಾರಿ ಮುಂದೂಡಿಕೆಯಾಗಿದ್ದ ಮದುವೆ
ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಅವರು 2025ರ ಜೂನ್ 8ರಂದು ಲಕ್ನೋದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ಬಳಿಕ ನವೆಂಬರ್ 2025ರಲ್ಲಿ ವಾರಣಾಸಿಯ ತಾಜ್ ಹೋಟೆಲ್‌ನಲ್ಲಿ ವಿವಾಹ ನಡೆಯಲಿದೆ ಎಂಬ ವರದಿಗಳು ಹರಿದಾಡಿದ್ದವು. ಆದರೆ ರಿಂಕು ಸಿಂಗ್ ಅವರ ಕ್ರಿಕೆಟ್ ಬದ್ಧತೆಗಳಿಂದಾಗಿ ಮದುವೆ ಮುಂದೂಡಿಕೆಯಾಗಿತ್ತು.
ನಂತರ 2026ರ ಫೆಬ್ರವರಿಯಲ್ಲಿ ವಿವಾಹ ನಡೆಸಲು ಯೋಜಿಸಲಾಗಿತ್ತು. ಆದರೆ ಆ ಸಮಯದಲ್ಲಿ ಟಿ20 ವಿಶ್ವಕಪ್ ಸೇರಿದಂತೆ ಹಲವು ಪ್ರಮುಖ ಕ್ರಿಕೆಟ್ ಪಂದ್ಯಗಳು ಇದ್ದ ಕಾರಣ ಮದುವೆಯನ್ನು ಮತ್ತೆ ಮುಂದೂಡಲಾಗಿತ್ತು. ಇದೀಗ ಸುಮಾರು ಒಂದು ವರ್ಷದ ಬಳಿಕ ಡಿಸೆಂಬರ್ 4ರಂದು ವಿವಾಹ ನೆರವೇರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಹಳ್ಳಿಯಲ್ಲಿ ಮದುವೆಯಾಗುವ ಆಸೆ
ಪ್ರಿಯಾ ಸರೋಜ್ ಅವರಿಗೆ ತಮ್ಮ ಸ್ವಗ್ರಾಮದಲ್ಲೇ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಬೇಕು ಎಂಬ ಆಸೆ ಇತ್ತು ಎನ್ನಲಾಗಿದೆ. ಅವರ ಕುಟುಂಬದಲ್ಲಿ ಹಲವು ಮದುವೆಗಳು ಗ್ರಾಮೀಣ ಸಂಪ್ರದಾಯದಂತೆ ನಡೆದಿರುವುದರಿಂದ, ಬಾಲ್ಯದಿಂದಲೂ ಹಳ್ಳಿ ವಾತಾವರಣದಲ್ಲಿ ನಡೆಯುವ ಮದುವೆಯನ್ನು ಅವರು ಕಂಡಿದ್ದರು. ಮಂಟಪ, ಕುಟುಂಬಸ್ಥರು, ಸಂಬಂಧಿಕರು ಹಾಗೂ ಊರಿನ ಜನರ ಸಮ್ಮುಖದಲ್ಲಿ ವಿವಾಹವಾಗುವುದು ಅವರ ಬಯಕೆಯಾಗಿತ್ತು ಎನ್ನಲಾಗಿದೆ.
ಆದರೆ ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಇಬ್ಬರೂ ಸಾರ್ವಜನಿಕ ಜೀವನದಲ್ಲಿ ಜನಪ್ರಿಯರಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಗಣ್ಯರು ಹಾಗೂ ಅತಿಥಿಗಳು ಭಾಗವಹಿಸುವ ಸಾಧ್ಯತೆಯಿದೆ. ಹೀಗಾಗಿ ಲಕ್ನೋದಲ್ಲಿ ವಿವಾಹ ನಡೆಸಲು ನಿರ್ಧರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ರಿಂಕು ಮತ್ತು ಪ್ರಿಯಾ ಅವರ ನಿಶ್ಚಿತಾರ್ಥವೂ ಲಕ್ನೋದಲ್ಲಿಯೇ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಕ್ರಿಕೆಟ್ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಿದ್ದರು. ಹೀಗಾಗಿ ವಿವಾಹಕ್ಕೂ ಲಕ್ನೋವೇ ಅನುಕೂಲಕರ ಸ್ಥಳವಾಗಿ ಆಯ್ಕೆಯಾಗಿದೆ ಎನ್ನಲಾಗಿದೆ.
ಇದರ ಜೊತೆಗೆ ಪ್ರಿಯಾ ಸರೋಜ್ ಅವರು ಸಮಾಜವಾದಿ ಪಕ್ಷದ ಸಂಸದೆಯಾಗಿದ್ದು, ಉತ್ತರ ಪ್ರದೇಶದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ವಿವಾಹ ಆಯೋಜಿಸಿರುವುದು ರಾಜಕೀಯವಾಗಿಯೂ ಗಮನ ಸೆಳೆಯುತ್ತಿದೆ. ಆದರೆ ವಿವಾಹದ ದಿನಾಂಕ ಹಾಗೂ ಸ್ಥಳದ ಕುರಿತು ಕುಟುಂಬದಿಂದ ಅಧಿಕೃತ ಪ್ರಕಟಣೆ ಹೊರಬಂದ ಬಳಿಕವೇ ಅಂತಿಮ ದೃಢತೆ ಸಿಗಲಿದೆ.
