ಚಿನ್ನಸ್ವಾಮಿಯಲ್ಲಿ ಇಂದು ಹಾಲಿ ಚಾಂಪಿಯನ್ RCB vs SRH ಹೈವೋಲ್ಟೇಜ್ ಫೈಟ್

Untitled design (23)

ಬೆಂಗಳೂರು: ಕ್ರಿಕೆಟ್ ಜಗತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕಿರುವ ಅಭಿಮಾನಿಗಳ ಬಳಗ ಮತ್ಯಾವ ತಂಡಕ್ಕೂ ಇಲ್ಲ ಎನ್ನಬಹುದು. 18 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, 2025ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್‌ಸಿಬಿ, ಈಗ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಸವಾಲಿನೊಂದಿಗೆ ಕಣಕ್ಕಿಳಿಯುತ್ತಿದೆ.

ಚಿನ್ನಸ್ವಾಮಿಯಲ್ಲಿ ಇಂದಿನಿಂದ ಹೈವೋಲ್ಟೇಜ್ ಪಂದ್ಯ

ಐಪಿಎಲ್ 2026ರ ಕ್ಷಣಗಣನೆ ಶುರುವಾಗಿದ್ದು, ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್‌ (SRH) ಮುಖಾಮುಖಿಯಾಗಲಿವೆ. ‘ಈ ಸಲ ಕಪ್ ನಮ್ದೆ’ ಎಂಬ ಸ್ಲೋಗನ್ ಹಳೆಯದಾದರೂ, ಕಳೆದ ಬಾರಿಯ ಗೆಲುವಿನ ನಂತರ ಈ ಬಾರಿ ‘ಕಪ್ ಉಳಿಸಿಕೊಳ್ಳುವ’ ಹೊಣೆಗಾರಿಕೆ ತಂಡದ ಮೇಲಿದೆ.

ಆರ್‌ಸಿಬಿಯಲ್ಲಿ ಘಟಾನುಘಟಿಗಳ ದಂಡು

ರಜತ್ ಪಾಟೀದಾರ್ ನೇತೃತ್ವದ ಆರ್ ತಂಡದಲ್ಲಿ ಈ ಬಾರಿಯೂ ಬ್ಯಾಟರ್‌ಗಳ ಅಬ್ಬರ ಮುಂದುವರಿಯುವ ಸೂಚನೆ ಇದೆ. ಆರಂಭಿಕರಾಗಿ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅಬ್ಬರಿಸಲಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ದೇವದತ್ ಪಡೀಕಲ್, ಜಿತೇಶ್ ಶರ್ಮಾ ಹಾಗೂ ವೆಂಕಟೇಶ್ ಅಯ್ಯರ್ ಬಲ ತುಂಬಲಿದ್ದಾರೆ. ಆಲ್-ರೌಂಡರ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ ಮತ್ತು ರೊಮಾರಿಯೋ ಶೆಫರ್ಡ್ ಮಿಂಚಲಿದ್ದು, ಫಿನಿಶರ್‌ಗಳಾಗಿ ಟಿಮ್ ಡೇವಿಡ್ ಮತ್ತು ಜೇಕಬ್ ಡಫಿ ತಂಡದ ದೊಡ್ಡ ಶಕ್ತಿಯಾಗಿದ್ದಾರೆ.

ಕಳೆದ ಬಾರಿ ಸರ್ವತೋಮುಖ ಪ್ರದರ್ಶನ ನೀಡಿದ್ದ ಆರ್‌ಸಿಬಿಗೆ ಈ ಬಾರಿ ಬೌಲಿಂಗ್ ಕೊರತೆ ಎದ್ದು ಕಾಣುತ್ತಿದೆ. ಯಶ್ ದಯಾಳ್ ಅವರ ಅಲಭ್ಯತೆ ಮತ್ತು ಜೋಶ್ ಹ್ಯಾಜಲ್ವುಡ್ ಮೊದಲ ಕೆಲವು ಪಂದ್ಯಗಳಿಗೆ ದೂರವಿರುವುದು ತಂಡಕ್ಕೆ ಹಿನ್ನಡೆಯಾಗಬಹುದು. ಅನುಭವಿ ಭುವನೇಶ್ವರ್ ಕುಮಾರ್, ಸುಯಾಶ್ ಪ್ರಭುದೇಸಾಯಿ ಮತ್ತು ರಸಿಕ್ ದಾರ್ ಅವರ ಮೇಲೆಯೇ ಬೌಲಿಂಗ್ ಜವಾಬ್ದಾರಿ ಹೆಚ್ಚಿದೆ.

ಎಸ್‌ಆರ್‌ಹೆಚ್‌ ಕೂಡ ಬಲಿಷ್ಠ

ಇತ್ತ ಇಶಾನ್ ಕಿಶನ್ ನೇತೃತ್ವದ ಸನ್ರೈಸರ್ಸ್ ಹೈದರಾಬಾದ್ ತಂಡವೂ ಘಟಾನುಘಟಿಗಳಿಂದ ಕೂಡಿದೆ. ಟ್ರಾವಿಸ್ ಹೆಡ್, ಹೆನ್ರಿಕ್ ಕ್ಲಾಸೆನ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಅವರಂತಹ ಸ್ಪೋಟಕ ಬ್ಯಾಟರ್‌ಗಳು ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲರು. ಬೌಲಿಂಗ್‌ನಲ್ಲಿ ಹರ್ಷಲ್ ಪಟೇಲ್ ಮತ್ತು ಬ್ರೈಡನ್ ಕಾರ್ಸ್ ಅವರ ಉಪಸ್ಥಿತಿ ಎಸ್‌ಆರ್‌ಹೆಚ್‌ ತಂಡವನ್ನು ಬಲಿಷ್ಠವಾಗಿಸಿದೆ.

ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಗೌರವ

ಕಳೆದ ಬಾರಿಯ ಐಪಿಎಲ್‌ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ 11ಜನರ ಹೆಸರಿನಲ್ಲಿ ಸೀಟ್‌ನ್ನು ರಿಸರ್ವ್‌ ಮಾಡಿ ಬಿಡಲು ತೀರ್ಮಾನ ಮಾಡಲಾಗಿದೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ರನ್ ಮಳೆ ಹರಿಯುವುದು ಗ್ಯಾರಂಟಿ. ಆರ್‌ಸಿಬಿ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಹಾದಿಯಲ್ಲಿ ಮೊದಲ ಹೆಜ್ಜೆ ಹೇಗೆ ಇಡಲಿದೆ ಎಂದು ಕಾದು ನೋಡಬೇಕಿದೆ.

Exit mobile version