ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ರೋಚಕ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ RCBಯ ಮಾಜಿ ನಾಯಕ ಫಾಫ್ ಡು ಪ್ಲೆಸ್ಸಿಸ್ ಇಂದು ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಈ ಕಾರಣದಿಂದ RCBಗೆ ಫಾಫ್ ಕಂಟಕನಾಗುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಫಾಫ್ ಡು ಪ್ಲೆಸ್ಸಿಸ್ ಹಿಂದೆ RCB ತಂಡದ ನಾಯಕರಾಗಿದ್ದವರು. ಸದ್ಯ ಡೆಲ್ಲಿ ಕ್ಯಾಪಿಟಲ್ಸ್‌ನ ಉಪನಾಯಕರಾಗಿ ಆಡುತ್ತಿದ್ದಾರೆ. ಆದರೆ, ತೊಡೆಸಂದು ಗಾಯದಿಂದಾಗಿ (Groin Injury) ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ಅವರು, ಈಗ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ RCB ವಿರುದ್ಧ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಇದರಿಂದ RCB ವಲಯದಲ್ಲಿ ಕೊಂಚ ಆತಂಕದ ವಾತಾವರಣವಿದೆ.
ಫಾಫ್‌ಗೆ RCBಯ ತಂತ್ರ ಗೊತ್ತು:
ಫಾಫ್ ಡು ಪ್ಲೆಸ್ಸಿಸ್ RCBಯ ನಾಯಕನಾಗಿದ್ದಾಗ ತಂಡದ ಎಲ್ಲ ತಂತ್ರಗಳು, ಆಟಗಾರರ ಬಲಾಬಲಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದ್ದಾರೆ. RCBಯ ಬೌಲರ್‌ಗಳ ಶೈಲಿ, ಬ್ಯಾಟ್ಸ್‌ಮನ್‌ಗಳಿಗೆ ಫೀಲ್ಡಿಂಗ್ ಹೇಗೆ ಇಡಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ತಂತ್ರಗಾರಿಕೆಯಲ್ಲಿ ಮೇಲುಗೈ ಸಿಗಬಹುದು, ಆದರೆ RCBಗೆ ಇದು ಸವಾಲಾಗಬಹುದು.
ಫಾಫ್ ಓಪನರ್ ಆಗಿ ಕ್ರೀಸ್‌ಗೆ ಬರುವ ಕಾರಣ ಕನ್ನಡಿಗ ಕರುಣ್ ನಾಯರ್ 3 ಅಥವಾ 4ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ.
ಫಾಫ್‌ನ ಹಿಂದಿನ ಪ್ರದರ್ಶನ:
ಈ ವರ್ಷ ಏಪ್ರಿಲ್ 10ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ವಿರುದ್ಧ ಆಡಿದ್ದ ಫಾಫ್ ಕೇವಲ 2 ರನ್‌ಗೆ ಔಟ್ ಆಗಿದ್ದರು. ಆದರೆ, ನಂತರ ಲಕ್ನೋ ವಿರುದ್ಧ 29 ರನ್ ಮತ್ತು ಹೈದರಾಬಾದ್ ವಿರುದ್ಧ ಅರ್ಧಶತಕ ಸಿಡಿಸಿದ್ದರು. ತಂಡ ಬದಲಾದಂತೆ ತಮ್ಮ ಬ್ಯಾಟಿಂಗ್ ಶೈಲಿಯನ್ನು ಸುಧಾರಿಸಿಕೊಂಡಿರುವ ಫಾಫ್, ಇಂದಿನ ಪಂದ್ಯದಲ್ಲಿ RCBಗೆ ದೊಡ್ಡ ಮುಳುವಾಗಬಹುದು ಎಂದು ತಿಳಿದುಬಂದಿದೆ.
RCBಗೆ ತಮ್ಮ ಮಾಜಿ ನಾಯಕನ ಈ ರೀತಿಯ ಆಟ ಒಂದು ರೀತಿಯ ಒತ್ತಡವನ್ನುಂಟು ಮಾಡಬಹುದು. ಇಂದಿನ ಪಂದ್ಯದಲ್ಲಿ ಫಾಫ್ ಡು ಪ್ಲೆಸ್ಸಿಸ್‌ನ ಬ್ಯಾಟಿಂಗ್ ಮತ್ತು ತಂತ್ರಗಾರಿಕೆ RCBಗೆ ಎಷ್ಟರ ಮಟ್ಟಿಗೆ ಸವಾಲಾಗಲಿದೆ ಎಂಬುದು ಕಾತರದ ಕ್ಷಣವಾಗಿದೆ. ಅಭಿಮಾನಿಗಳು ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಉತ್ಸುಕರಾಗಿದ್ದಾರೆ.





