ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿತು. ಟಾಸ್ ಗೆದ್ದ ಆರ್ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿ, ಅವರನ್ನು ಕೇವಲ 157 ರನ್‌ಗಳಿಗೆ ನಿಯಂತ್ರಿಸಿತು.
ಪಂಜಾಬ್ ಕಿಂಗ್ಸ್ ಪರ ಪ್ರಭಸಿಮ್ರಾನ್ ಸಿಂಗ್ 33 ರನ್, ಜೋಸ್ ಇಂಗ್ಲಿಷ್ 29 ರನ್, ಶಶಾಂಕ್ ಸಿಂಗ್ ಅಜೇಯ 31 ರನ್ ಹಾಗೂ ಮಾರ್ಕೊ ಜಾನ್ಸನ್ ಅಜೇಯ 25 ರನ್ ಗಳಿಸಿ ಗರಿಷ್ಠ ಸ್ಕೋರರ್‌ಗಳಾದರು.
ತವರಿನಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್‌ಗೆ ಪ್ರಭಸಿಮ್ರಾನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಬಿರುಸಿನ ಆರಂಭ ನೀಡಿದರಾದರೂ ದೊಡ್ಡ ಜೊತೆಯಾಟ ನೀಡಲು ವಿಫಲರಾದರು. ಐದನೇ ಓವರ್‌ನಲ್ಲಿ ಕೃನಾಲ್ ಪಾಂಡ್ಯ, ಪ್ರಿಯಾಂಶ್ ಆರ್ಯ (22) ಅವರ ವಿಕೆಟ್ ಪಡೆದು ಆರ್ಸಿಬಿಗೆ ಮೊದಲ ಯಶಸ್ಸು ತಂದುಕೊಟ್ಟರು. ಆರನೇ ಓವರ್‌ನಲ್ಲಿ ಪಾಂಡ್ಯ, ಪ್ರಭಸಿಮ್ರಾನ್ ಸಿಂಗ್ (33) ಅವರನ್ನು ಔಟ್ ಮಾಡಿದರು. 68 ರನ್‌ಗಳ ವೇಳೆಯಲ್ಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಕೇವಲ 6 ರನ್ ಗಳಿಸಿ ರೊಮಾರಿಯೋ ಶೆಫರ್ಡ್‌ಗೆ ಕ್ಯಾಚ್ ನೀಡಿ ಔಟಾದರು.
ನಂತರ, ವಿರಾಟ್ ಕೊಹ್ಲಿ 9ನೇ ಓವರ್‌ನ ಕೊನೆಯ ಎಸೆತದಲ್ಲಿ ನೆಹಾಲ್ ವಧೇರಾ (5) ಅವರನ್ನು ರನೌಟ್ ಮಾಡಿದರು. ಇದಾದ ಬಳಿಕ ಚೇತರಿಸಿಕೊಳ್ಳಲಾಗದ ಪಂಜಾಬ್ ಕಿಂಗ್ಸ್, 112 ರನ್‌ಗಳ ವೇಳೆಯಲ್ಲಿ ಸುಯಾಶ್ ಶರ್ಮಾ ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. 17 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 29 ರನ್ ಗಳಿಸಿದ್ದ ಜೋಸ್ ಇಂಗ್ಲಿಷ್‌ರ ವಿಕೆಟ್ ಪಡೆದ ಅವರು, ಅದೇ ಓವರ್‌ನಲ್ಲಿ ಮಾರ್ಕಸ್ ಸ್ಟೋಯಿನಿಸ್ ವಿಕೆಟ್ ಕಿತ್ತು ಮಿಂಚಿದರು.
14ನೇ ಓವರ್‌ನಿಂದ 20ನೇ ಓವರ್‌ವರೆಗೆ ಆರ್ಸಿಬಿ ಬೌಲರ್‌ಗಳು ಪಂಜಾಬ್ ಬ್ಯಾಟರ್‌ಗಳನ್ನು ದೊಡ್ಡ ಹೊಡೆತಗಳಿಂದ ತಡೆದರು. ಶಶಾಂಕ್ ಸಿಂಗ್ ಮತ್ತು ಮಾರ್ಕೊ ಜಾನ್ಸನ್ 37 ಎಸೆತಗಳಲ್ಲಿ ಕೇವಲ 43 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕೊನೆಯ 7 ಓವರ್‌ಗಳಲ್ಲಿ ಆರ್ಸಿಬಿ ಬೌಲರ್ಗಳು ಕೇವಲ 2 ಸಿಕ್ಸರ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಶಶಾಂಕ್ ಸಿಂಗ್ 33 ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಸಹಿತ 31 ರನ್ ಗಳಿಸಿದರೆ, ಜಾನ್ಸನ್ 20 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ ಅಜೇಯ 25 ರನ್ ಗಳಿಸಿ ಪಂಜಾಬ್ ಮೊತ್ತವನ್ನು 150ರ ಗಡಿ ದಾಟಿಸಿದರು.
ಆರ್ಸಿಬಿ ಪರ ಕೃನಾಲ್ ಪಾಂಡ್ಯ ಮತ್ತು ಸುಯಾಶ್ ಶರ್ಮಾ ತಲಾ 2 ವಿಕೆಟ್‌ಗಳನ್ನು ಪಡೆದರೆ, ರೊಮಾರಿಯೋ ಶೆಫರ್ಡ್ 1 ವಿಕೆಟ್ ಕಿತ್ತರು. ಈ ಪ್ರಬಲ ಬೌಲಿಂಗ್ ಪ್ರದರ್ಶನದೊಂದಿಗೆ ಆರ್ಸಿಬಿ, ಪಂಜಾಬ್ ಕಿಂಗ್ಸ್‌ನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು.





