ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ಮೌಲ್ಯಯುತ ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಅಮೆರಿಕದ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕೆ (Houlihan Lokey) ಬಿಡುಗಡೆ ಮಾಡಿರುವ 2026ರ ಐಪಿಎಲ್ ಬ್ರಾಂಡ್ ಮೌಲ್ಯಮಾಪನ ಅಧ್ಯಯನದ ಪ್ರಕಾರ, ಮೊದಲ ಬಾರಿಗೆ ಐಪಿಎಲ್‌ನ ಒಟ್ಟು ವ್ಯವಹಾರ ಮೌಲ್ಯ ಸುಮಾರು 2 ರೂ. ಲಕ್ಷ ಕೋಟಿ ಗಡಿ ದಾಟಿದೆ.
ಮೊದಲ ಸ್ಥಾನಕ್ಕೇರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಈ ವರದಿಯ ಪ್ರಮುಖ ಆಕರ್ಷಣೆ ಎಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬ್ರಾಂಡ್ ಮೌಲ್ಯದಲ್ಲಿ ಎಲ್ಲ ತಂಡಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿರುವುದು. ಕಳೆದ ಎರಡು ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದಿರುವ ಆರ್‌ಸಿಬಿ, 312 ಮಿಲಿಯನ್ ಡಾಲರ್ (ಅಂದಾಜು ₹2,600 ಕೋಟಿ) ಬ್ರಾಂಡ್ ಮೌಲ್ಯ ಹೊಂದಿದ್ದು, 300 ಮಿಲಿಯನ್ ಡಾಲರ್ ಗಡಿ ದಾಟಿದ ಮೊದಲ ಐಪಿಎಲ್ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಎರಡು ಮತ್ತು ಮೂರನೇ ಸ್ಥಾನದಲ್ಲಿ ಯಾವ ತಂಡ?
ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡದ ಬ್ರಾಂಡ್ ಮೌಲ್ಯ 264 ಮಿಲಿಯನ್ ಡಾಲರ್ ಆಗಿದೆ. 2026ರ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ಐದು ಪ್ರಶಸ್ತಿಗಳು, ಬಲಿಷ್ಠ ಅಭಿಮಾನಿ ಬಳಗ ಹಾಗೂ ವಾಣಿಜ್ಯ ಪಾಲುದಾರಿಕೆಗಳ ಕಾರಣದಿಂದ ಮುಂಬೈ ತನ್ನ ಬ್ರಾಂಡ್ ಮೌಲ್ಯವನ್ನು ಶೇ.9.1ರಷ್ಟು ಹೆಚ್ಚಿಸಿಕೊಂಡಿದೆ.
ಮೂರನೇ ಸ್ಥಾನದಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಬ್ರಾಂಡ್ ಮೌಲ್ಯ 245 ಮಿಲಿಯನ್ ಡಾಲರ್ ಆಗಿದ್ದು, ಕಳೆದ ವರ್ಷಕ್ಕಿಂತ ಶೇ.7.9ರಷ್ಟು ಏರಿಕೆಯಾಗಿದೆ. 2024ರ ಐಪಿಎಲ್ ಪ್ರಶಸ್ತಿ ಗೆಲುವಿನ ಪರಿಣಾಮ ತಂಡದ ಬ್ರಾಂಡ್ ಬಲ ಮತ್ತಷ್ಟು ಹೆಚ್ಚಾಗಿದೆ.
ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ಇತ್ತೀಚಿನ ಆವೃತ್ತಿಗಳಲ್ಲಿ ಕಳಪೆ ಪ್ರದರ್ಶನ ನೀಡಿದರೂ, ಅದರ ಬ್ರಾಂಡ್ ಮೌಲ್ಯ 244 ಮಿಲಿಯನ್ ಡಾಲರ್ ತಲುಪಿದೆ. ಆದರೆ, ತಂಡದ ಪ್ರದರ್ಶನ ಕುಸಿತ ಹಾಗೂ ಎಂ.ಎಸ್. ಧೋನಿ ಅವರ ಅನುಪಸ್ಥಿತಿ ಕಾರಣದಿಂದ ನಿರೀಕ್ಷಿತ ಮಟ್ಟದ ಬೆಳವಣಿಗೆ ಕಂಡಿಲ್ಲ ಎಂದು ವರದಿ ಹೇಳಿದೆ.
ಉಳಿದ ತಂಡಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ 168 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ ಐದನೇ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ 161 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ 158 ಮಿಲಿಯನ್ ಡಾಲರ್ ಹಾಗೂ ಗುಜರಾತ್ ಟೈಟಾನ್ಸ್ 157 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ ಕ್ರಮವಾಗಿ ಏಳನೇ ಮತ್ತು ಎಂಟನೇ ಸ್ಥಾನದಲ್ಲಿವೆ. ಡೆಲ್ಲಿ ಕ್ಯಾಪಿಟಲ್ಸ್ 156 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದು, ಲಕ್ನೋ ಸೂಪರ್ ಜೈಂಟ್ಸ್ 122 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ ಹತ್ತನೇ ಸ್ಥಾನ ಪಡೆದಿದೆ.
ಈ ಅಧ್ಯಯನವು ಐಪಿಎಲ್ ಕೇವಲ ಕ್ರಿಕೆಟ್ ಟೂರ್ನಿಯಾಗಿಯೇ ಅಲ್ಲ, ಜಾಗತಿಕ ಮಟ್ಟದಲ್ಲಿ ಅತ್ಯಂತ ಶಕ್ತಿಶಾಲಿ ಕ್ರೀಡಾ ಬ್ರಾಂಡ್ ಆಗಿ ಬೆಳೆಯುತ್ತಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
