ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ನಿಷಾದ್‌ ಕುಮಾರ್‌ ಐತಿಹಾಸಿಕ ಸಾಧನೆ!

ಆತ್ಮಹತ್ಯೆ! (11)

ಭಾರತದ ತಾರಾ ಪ್ಯಾರಾ ಅಥ್ಲೀಟ್ ನಿಷಾದ್ ಕುಮಾರ್ ಅವರು 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ಪುರುಷರ ಹೈಜಂಪ್ T47 ವಿಭಾಗದಲ್ಲಿ ಹೊಸ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿರುವ ನಿಷಾದ್, ಸತತ ಎರಡು ದಿನಗಳಲ್ಲಿ ಎರಡು ವಿಭಿನ್ನ ಜಂಪ್ ಸ್ಪರ್ಧೆಗಳಲ್ಲಿ ಸ್ವರ್ಣ ಪದಕ ಗೆದ್ದ ವಿಶೇಷ ಸಾಧನೆ ಮಾಡಿದ್ದಾರೆ.

ಮಂಗಳವಾರ ನಡೆದ ಪುರುಷರ ಹೈಜಂಪ್ T47 ಸ್ಪರ್ಧೆಯಲ್ಲಿ ನಿಷಾದ್ ಕುಮಾರ್ ಅತ್ಯುತ್ತಮ ಪ್ರದರ್ಶನ ನೀಡಿ ಮೊದಲ ಸ್ಥಾನ ಪಡೆದರು. ಇದರೊಂದಿಗೆ ಹೊಸ ಗೇಮ್ಸ್ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಸೋಮವಾರ ನಡೆದ ಪುರುಷರ ಲಾಂಗ್ ಜಂಪ್ T47 ವಿಭಾಗದಲ್ಲೂ ನಿಷಾದ್ ಚಿನ್ನದ ಪದಕ ಗೆದ್ದಿದ್ದರು.

ಸತತ ಎರಡು ದಿನಗಳಲ್ಲಿ ಲಾಂಗ್ ಜಂಪ್ ಮತ್ತು ಹೈಜಂಪ್‌ನಲ್ಲಿ ಚಿನ್ನ ಗೆದ್ದಿರುವ ನಿಷಾದ್, ಒಂದೇ ಆವೃತ್ತಿಯ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದ ಭಾರತದ ಮೂರನೇ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಿಷಾದ್‌ಗಿಂತ ಮೊದಲು ಇಬ್ಬರ ಸಾಧನೆ

ಚೀನಾದ ಹಾಂಗ್‌ಝೌನಲ್ಲಿ ನಡೆದ ಹಿಂದಿನ ಆವೃತ್ತಿಯಲ್ಲಿ ಭಾರತದ ಪ್ಯಾರಾ ಅಥ್ಲೀಟ್ ಅಂಕುರ್ ಧಾಮಾ ಅವರು ಪುರುಷರ 5000 ಮೀಟರ್ T11 ಮತ್ತು 1500 ಮೀಟರ್ T11 ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಇದೇ ಆವೃತ್ತಿಯಲ್ಲಿ ಬಿಲ್ಲುಗಾರ್ತಿ ಶೀತಲ್ ದೇವಿ ಕೂಡ ಅದ್ಭುತ ಸಾಧನೆ ಮಾಡಿದ್ದರು. ಎರಡೂ ಕೈಗಳಿಲ್ಲದಿದ್ದರೂ ಬಿಲ್ಲುಗಾರಿಕೆಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಶೀತಲ್ ದೇವಿ, ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್ ಮತ್ತು ಮಿಶ್ರ ತಂಡ ಕಾಂಪೌಂಡ್ ಓಪನ್ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಇದೀಗ ನಿಷಾದ್ ಕುಮಾರ್ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಆರನೇ ವಯಸ್ಸಿನಲ್ಲೇ ಎದುರಾಗಿತ್ತು ಸಂಕಷ್ಟ

ನಿಷಾದ್ ಕುಮಾರ್ ಅವರ ಈ ಯಶಸ್ಸಿನ ಹಿಂದೆ ಕಠಿಣ ಹೋರಾಟದ ಕಥೆಯಿದೆ. ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಅಂಬ ಪ್ರದೇಶದವರಾದ ನಿಷಾದ್, ತಮ್ಮ ಆರನೇ ವಯಸ್ಸಿನಲ್ಲೇ ಭೀಕರ ಅಪಘಾತಕ್ಕೆ ಒಳಗಾಗಿದ್ದರು.

ತಮ್ಮ ಜಮೀನಿನಲ್ಲಿ ಹುಲ್ಲು ಕತ್ತರಿಸುವ ಯಂತ್ರಕ್ಕೆ ಸಿಲುಕಿದ ಪರಿಣಾಮ ಅವರು ಬಲಗೈಯನ್ನು ಕಳೆದುಕೊಂಡಿದ್ದರು. ಬಾಲ್ಯದಲ್ಲೇ ಇಂತಹ ದೊಡ್ಡ ಆಘಾತ ಎದುರಾದರೂ ನಿಷಾದ್ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ.

ಜೀವನದ ಸವಾಲುಗಳನ್ನು ಮೆಟ್ಟಿನಿಂತ ಅವರು ಕ್ರೀಡೆಯನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡರು. ಸತತ ಪರಿಶ್ರಮ ಮತ್ತು ದೃಢ ಸಂಕಲ್ಪದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸುತ್ತಿರುವ ನಿಷಾದ್, ಇದೀಗ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದು ದೇಶದ ಹೆಮ್ಮೆಯ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.

Exit mobile version