ನಾಳೆಯಿಂದ ಪುರುಷ, ಮಹಿಳಾ ಹಾಕಿ ವಿಶ್ವಕಪ್​ ಪ್ರಾರಂಭ

Untitled design 2026 08 14T123938.846

ಆಗಸ್ಟ್ 15ರಿಂದ ವಿಶ್ವ ಹಾಕಿಯ ಅತಿದೊಡ್ಡ ಮಹಾಕುಂಭಕ್ಕೆ ಚಾಲನೆ ಸಿಗಲಿದೆ. ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ ಜಂಟಿಯಾಗಿ ಆತಿಥ್ಯ ವಹಿಸಿರುವ 2026ರ ಎಫ್‌ಐಎಚ್ ಹಾಕಿ ವಿಶ್ವಕಪ್ ಹಲವು ವಿಶೇಷತೆಗಳನ್ನು ಹೊಂದಿದೆ. ಇದೇ ಮೊದಲ ಬಾರಿಗೆ ಪುರುಷರ ಮತ್ತು ಮಹಿಳೆಯರ ವಿಶ್ವಕಪ್ ಪಂದ್ಯಾವಳಿಗಳು ಒಂದೇ ವೇಳೆಯಲ್ಲಿ, ಒಂದೇ ಆಯೋಜಕರ ಅಡಿಯಲ್ಲಿ ನಡೆಯುತ್ತಿರುವುದು ಈ ಟೂರ್ನಿಯ ಐತಿಹಾಸಿಕ ಹೆಜ್ಜೆಯಾಗಿದೆ.

ಭಾರತದ ಅಭಿಮಾನಿಗಳ ಕಾತರದ ನಿರೀಕ್ಷೆಯಲ್ಲಿರುವ ಪುರುಷರ ತಂಡವು ತನ್ನ ಮೊದಲ ಪಂದ್ಯದಲ್ಲಿ ವೇಲ್ಸ್ ವಿರುದ್ಧ ಸೆಣಸಲಿದೆ. ಈ ಪಂದ್ಯವು ಆಗಸ್ಟ್ 15ರಂದು ಸಂಜೆ 4:30ಕ್ಕೆ ನಡೆಯಲಿದೆ. ಮಹಿಳಾ ವಿಭಾಗದ ಉದ್ಘಾಟನಾ ಪಂದ್ಯ ಮಧ್ಯಾಹ್ನ 1:30ಕ್ಕೆ ನಡೆಯಲಿದ್ದು, ಆಸ್ಟ್ರೇಲಿಯಾ ಮತ್ತು ಜಪಾನ್ ತಂಡಗಳು ಮೊದಲ ಕಾದಾಟದಲ್ಲಿ ಮುಖಾಮುಖಿಯಾಗಲಿವೆ.

16 ದಿನಗಳ ಕಾಲ ವಿಶ್ವ ಹಾಕಿ ಸಂಭ್ರಮ

ಆಗಸ್ಟ್ 15ರಿಂದ ಆರಂಭವಾಗುವ ಈ ಟೂರ್ನಿಯು 16 ದಿನಗಳ ಕಾಲ ನಡೆಯಲಿದೆ. ಪುರುಷರ ಹಾಗೂ ಮಹಿಳೆಯರ ವಿಭಾಗಗಳನ್ನು ಸೇರಿಸಿ ಒಟ್ಟು 32 ತಂಡಗಳು ಕಣಕ್ಕಿಳಿಯಲಿದ್ದು, ಎರಡೂ ವಿಭಾಗಗಳಲ್ಲಿ ಸೇರಿ 50 ಪಂದ್ಯಗಳು ಆಯೋಜಿಸಲಾಗಿದೆ. ಎಲ್ಲಾ ಪಂದ್ಯಗಳು ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್‌ನ ಎರಡು ಪ್ರಮುಖ ಕ್ರೀಡಾಂಗಣಗಳಲ್ಲಿ ನಡೆಯಲಿವೆ.

ತಲಾ 16 ತಂಡಗಳು, ನಾಲ್ಕು ಪೂಲ್‌ಗಳಾಗಿ ವಿಭಜನೆ

ಪುರುಷರ ಮತ್ತು ಮಹಿಳೆಯರ ವಿಶ್ವಕಪ್‌ನಲ್ಲಿ ತಲಾ 16 ತಂಡಗಳು ಭಾಗವಹಿಸುತ್ತಿವೆ. ಆರಂಭಿಕ ಹಂತದಲ್ಲಿ ತಂಡಗಳನ್ನು A, B, C ಮತ್ತು D ಎಂಬ ನಾಲ್ಕು ಪೂಲ್‌ಗಳಾಗಿ ವಿಂಗಡಿಸಲಾಗಿದೆ. ಪ್ರತಿ ಪೂಲ್‌ನಲ್ಲಿ ನಾಲ್ಕು ತಂಡಗಳಿದ್ದು, ಪ್ರತಿಯೊಂದು ತಂಡವೂ ತನ್ನದೇ ಗುಂಪಿನ ಉಳಿದ ಮೂರು ತಂಡಗಳ ವಿರುದ್ಧ ತಲಾ ಒಂದು ಪಂದ್ಯವನ್ನು ಆಡಲಿದೆ.

ಈ ಪೂಲ್ ಹಂತದ ಪಂದ್ಯಗಳು ಆಗಸ್ಟ್ 15ರಿಂದ 20ರವರೆಗೆ ನಡೆಯಲಿವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಪ್ರಶಸ್ತಿ ಸ್ಪರ್ಧೆಯಲ್ಲಿ ಮುಂದುವರಿದರೆ, ಉಳಿದ ತಂಡಗಳು ಶ್ರೇಯಾಂಕದ ಹೋರಾಟಕ್ಕೆ ಪ್ರವೇಶಿಸಲಿವೆ.

ಮಹಿಳಾ ವಿಭಾಗದಲ್ಲೂ ಭರ್ಜರಿ ಪೈಪೋಟಿ

ಮಹಿಳಾ ವಿಶ್ವಕಪ್‌ನಲ್ಲೂ 16 ತಂಡಗಳು ಭಾಗವಹಿಸುತ್ತಿದ್ದು, ಒಂಬತ್ತು ಬಾರಿ ಚಾಂಪಿಯನ್ ಆಗಿರುವ ಆತಿಥೇಯ ನೆದರ್‌ಲೆಂಡ್ಸ್ ಪ್ರಶಸ್ತಿ ಉಳಿಸಿಕೊಳ್ಳುವ ಫೇವರಿಟ್ ತಂಡವಾಗಿದೆ. ಭಾರತ ಮಹಿಳಾ ತಂಡವೂ ಉತ್ತಮ ತಯಾರಿಯೊಂದಿಗೆ ಟೂರ್ನಿಗೆ ಪ್ರವೇಶಿಸುತ್ತಿದ್ದು, ನಾಕೌಟ್ ಹಂತ ತಲುಪುವ ಗುರಿ ಹೊಂದಿದೆ.

ಅರ್ಜೆಂಟಿನಾ, ಆಸ್ಟ್ರೇಲಿಯಾ, ಜರ್ಮನಿ, ಇಂಗ್ಲೆಂಡ್ ಹಾಗೂ ಬೆಲ್ಜಿಯಂ ತಂಡಗಳು ಕೂಡ ಪ್ರಶಸ್ತಿ ಸ್ಪರ್ಧೆಯ ಪ್ರಮುಖ ಆಕಾಂಕ್ಷಿಗಳಾಗಿವೆ.

 ಸೆಮಿಫೈನಲ್ ಮತ್ತು ಫೈನಲ್ ವೇಳಾಪಟ್ಟಿ

  • ಆಗಸ್ಟ್ 29: ಮಹಿಳೆಯರ ಫೈನಲ್ ಹಾಗೂ ಕಂಚಿನ ಪದಕ ಪಂದ್ಯ
  • ಆಗಸ್ಟ್ 30: ಪುರುಷರ ಫೈನಲ್ ಹಾಗೂ ಕಂಚಿನ ಪದಕ ಪಂದ್ಯ

    ಒಂದೇ ವೇದಿಕೆಯಲ್ಲಿ ಪುರುಷ ಮತ್ತು ಮಹಿಳಾ ಹಾಕಿಯ ಅತ್ಯುನ್ನತ ಟೂರ್ನಿಗಳನ್ನು ಆಯೋಜಿಸುವ ಮೂಲಕ 2026ರ ವಿಶ್ವಕಪ್ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿದ್ದು, ಭಾರತ ಸೇರಿದಂತೆ ವಿಶ್ವದ ಪ್ರಮುಖ ಹಾಕಿ ರಾಷ್ಟ್ರಗಳ ನಡುವೆ ರೋಚಕ ಪೈಪೋಟಿಗೆ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.

    Exit mobile version