ಕಾರು ಅಪಘಾತದಲ್ಲಿ ಖ್ಯಾತ ಫುಟ್ಬಾಲ್ ತಾರೆ ಡಿಯಾಗೊ ಜೋಟಾ ನಿಧನ

Untitled design 2025 07 03t163855.022

ಲಿವರ್ಪೂಲ್ ಫುಟ್ಬಾಲ್ ಕ್ಲಬ್‌ನ ಪ್ರಸಿದ್ಧ ಫಾರ್ವರ್ಡ್ ಆಟಗಾರ ಡಿಯಾಗೊ ಜೋಟಾ ಸ್ಪೇನ್‌ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೇವಲ 28 ವರ್ಷ ವಯಸ್ಸಿನ ಈ ಯುವ ತಾರೆ ತನ್ನ ಸಹೋದರ ಆಂಡ್ರೆ ಸಿಲ್ವಾ (26) ಜೊತೆಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಕಾರು ಬೆಂಕಿಗೆ ಆಹುತಿಯಾಗಿದ್ದು,  ಇಬ್ಬರೂ ಸಾವನ್ನಪ್ಪಿದ್ದಾರೆ. 

ಡಿಯೋಗೊ ಜೋಟಾ ಡಿಸೆಂಬರ್ 4, 1996 ರಂದು ಪೋರ್ಚುಗಲ್‌ನ ಪೋರ್ಟೊ ನಗರದಲ್ಲಿ ಜನಿಸಿದ್ದರು. ತಮ್ಮ ಅತ್ಯುತ್ತಮ ಆಟಗಾರಿಕೆಯಿಂದ ಲಿವರ್‌ಪೂಲ್ ಕ್ಲಬ್‌ನಲ್ಲಿ ಅಗ್ರಗಣ್ಯ ಆಟಗಾರರಾಗಿ ಗುರುತಿಸಿಕೊಂಡಿದ್ದ ಜೋಟಾ, 2020ರಲ್ಲಿ ವೋಲ್ವರ್‌ಹ್ಯಾಂಪ್ಟನ್ ವಾಂಡರರ್ಸ್‌ನಿಂದ ಲಿವರ್‌ಪೂಲ್‌ಗೆ ಸೇರಿದ್ದರು. ಈ ಕ್ಷೇತ್ರದಲ್ಲಿ ತೋರಿದ ಚಾಣಾಕ್ಷತೆ ಅವರನ್ನ ಅಭಿಮಾನಿಗಳ ಪಾಲಿನ ಫೇವರಿಟ್ ಆಗಿಸಿತ್ತು. ಪೋರ್ಚುಗಲ್ ರಾಷ್ಟ್ರೀಯ ತಂಡದ ಪರವಾಗಿಯೂ ಅವರು ಹಲವಾರು ಪಂದ್ಯಗಳನ್ನಾಡಿದ್ದರು.

ಅಪಘಾತವು ಝಮೊರಾದ ಸೆರ್ನಾಡಿಲ್ಲಾ ಬಳಿ ಸಂಭವಿಸಿದೆ. ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾಗಿದೆ. ತಕ್ಷಣವೇ ಝಮೊರಾ ಸಂಚಾರ ಪೊಲೀಸ್, ಝಮೊರಾ ಪ್ರಾಂತೀಯ ಮಂಡಳಿಯ ಅಗ್ನಿಶಾಮಕ ದಳ, ಮತ್ತು ಸ್ಯಾಸಿಲ್ ತುರ್ತು ಸಮನ್ವಯ ಕೇಂದ್ರ (CCU)ಗೆ ಮಾಹಿತಿ ತಿಳಿಸಲಾಯಿತು. ಮಾಂಬುಯೆ ಆರೋಗ್ಯ ಕೇಂದ್ರದಿಂದ ವೈದ್ಯಕೀಯ ತುರ್ತು ಘಟಕ (UME) ಮತ್ತು ಪ್ರಾಥಮಿಕ ಆರೈಕೆ ವೈದ್ಯಕೀಯ ಸಿಬ್ಬಂದಿ (MAP) ಯನ್ನು ಕಳುಹಿಸಲಾಯಿತು. ಆದರೆ, ಸ್ಥಳಕ್ಕೆ ತಲುಪಿದಾಗ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ತಂಡ ದೃಢಪಡಿಸಿತ್ತು.

ಈ ದುರಂತವು ಜೋಟಾ ಅವರ ಕುಟುಂಬ, ಸ್ನೇಹಿತರು, ಮತ್ತು ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್‌ಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಲಿವರ್‌ಪೂಲ್ ಕ್ಲಬ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಶೋಕ ಸಂದೇಶವನ್ನು ಪೋಸ್ಟ್ ಮಾಡಿದ್ದು, “ಡಿಯೋಗೊ ಜೋಟಾ ಅವರ ನಿಧನದಿಂದ ನಾವು ಆಘಾತಕ್ಕೊಳಗಾಗಿದ್ದೇವೆ. ಅವರ ಕೊಡುಗೆ ಎಂದಿಗೂ ಮರೆಯಲಾಗದು. ಅವರ ಕುಟುಂಬಕ್ಕೆ ಈ ದುಃಖದ ಸಮಯದಲ್ಲಿ ನಾವು ಸಾಂತ್ವನವನ್ನು ಹೇಳಲು ಬಯಸುತ್ತೇವೆ” ಎಂದು ತಿಳಿಸಿದೆ.

Exit mobile version