ಗ್ಲ್ಯಾಸ್ಗೋ: 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಬಾಕ್ಸರ್‌ಗಳು ಚಿನ್ನದ ಮಳೆ ಸುರಿಸುತ್ತಿದ್ದು, ಕೆಲವೇ ನಿಮಿಷಗಳ ಅಂತರದಲ್ಲಿ ಭಾರತ ಎರಡು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ. 54 ಕೆಜಿ ವಿಭಾಗದಲ್ಲಿ ಪ್ರೀತಿ ಪನ್ವಾರ್ ಚಿನ್ನ ಗೆದ್ದ ಬೆನ್ನಲ್ಲೇ, ಮಹಿಳೆಯರ 57 ಕೆಜಿ ವಿಭಾಗದ ಬಾಕ್ಸಿಂಗ್ ಫೈನಲ್‌ನಲ್ಲಿ ಜಾಸ್ಮಿನ್ ಲಂಬೋರಿಯಾ ಕೂಡ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಫೈನಲ್ ಪಂದ್ಯದಲ್ಲಿ ಉತ್ತರ ಐರ್ಲೆಂಡ್‌ನ ಅನುಭವಿ ಬಾಕ್ಸರ್ ಮೈಕೆಲಾ ವಾಲ್ಷ್ ಅವರನ್ನು ಎದುರಿಸಿದ ಜಾಸ್ಮಿನ್, 5-0 ಅಂತರದ ಏಕಪಕ್ಷೀಯ ಗೆಲುವು ದಾಖಲಿಸಿದ ಜಾಸ್ಮಿನ್ ಕಾಮನ್‌ವೆಲ್ತ್ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಜಾಸ್ಮಿನ್ ಲಂಬೋರಿಯಾ ಅವರ ಎರಡನೇ ಕಾಮನ್‌ವೆಲ್ತ್ ಪದಕ
ಇದು ಜಾಸ್ಮಿನ್ ಲಂಬೋರಿಯಾ ಅವರ ಎರಡನೇ ಕಾಮನ್‌ವೆಲ್ತ್ ಪದಕವಾಗಿದೆ. ಅವರು 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಲೈಟ್‌ವೇಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೀಗ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಸಾಧನೆಗೆ ಮತ್ತೊಂದು ಮಹತ್ವದ ಅಧ್ಯಾಯ ಸೇರಿಸಿದ್ದಾರೆ.
ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ 7ಕ್ಕೆ ಏರಿಕೆ
ಜಾಸ್ಮಿನ್ ಅವರ ಈ ಗೆಲುವಿನೊಂದಿಗೆ ಬಾಕ್ಸಿಂಗ್‌ನಲ್ಲಿ ಭಾರತ ಸತತ ಎರಡು ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿದೆ. ಅಲ್ಲದೆ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ 7ಕ್ಕೆ ಏರಿದ್ದು, ಪದಕ ಪಟ್ಟಿಯಲ್ಲಿ ಭಾರತ 6ನೇ ಸ್ಥಾನಕ್ಕೆ ಜಿಗಿದಿದೆ.
2025ರಲ್ಲಿ ಚಿನ್ನ ಗೆದ್ದಿದ್ದ ಜಾಸ್ಮಿನ್
ಜಾಸ್ಮಿನ್ ಈಗಾಗಲೇ ವಿಶ್ವ ಮಟ್ಟದಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. 2025ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನನಲ್ಲಿ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆ ಫೈನಲ್‌ನಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪೋಲೆಂಡ್‌ನ ಜೂಲಿಯಾ ಸ್ಜೆರೆಮೆಟಾ ಅವರನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿದ್ದರು.
ಕ್ರೀಡಾ ಕುಟುಂಬದಿಂದ ಬಂದ ಜಾಸ್ಮಿನ್
ಹರಿಯಾಣದ ಭಿವಾನಿ ಜಿಲ್ಲೆಯವರಾದ ಜಾಸ್ಮಿನ್ ಲಂಬೋರಿಯಾ ಕ್ರೀಡಾ ಕುಟುಂಬದಿಂದ ಬಂದವರು. ಅವರು ಪ್ರಸ್ತುತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ಜೈವೀರ್ ಲಂಬೋರಿಯಾ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದು, ಕುಟುಂಬದಲ್ಲೇ ಕ್ರೀಡಾ ಪರಂಪರೆ ಇದೆ. ಜಾಸ್ಮಿನ್ ಅವರ ಮುತ್ತಜ್ಜ ಹವಾ ಸಿಂಗ್ ಭಾರತದ ಹೆಸರಾಂತ ಹೆವಿವೇಯ್ಟ್ ಬಾಕ್ಸರ್ ಆಗಿದ್ದು, ಎರಡು ಏಷ್ಯನ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದರು.
ಪ್ರೀತಿ ಪನ್ವಾರ್ ಮತ್ತು ಜಾಸ್ಮಿನ್ ಲಂಬೋರಿಯಾ ಅವರ ಸತತ ಚಿನ್ನದ ಸಾಧನೆ ಭಾರತ ಬಾಕ್ಸಿಂಗ್ ತಂಡದ ಸಾಮರ್ಥ್ಯವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಸಾಬೀತುಪಡಿಸಿದ್ದು, ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆಗೆ ಹೊಸ ಉತ್ಸಾಹ ತುಂಬಿದೆ.
