ಐಸಿಸಿ ಇಂದು ಬಿಡುಗಡೆ ಮಾಡಿರುವ ನೂತನ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. 916 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅವರು ವಿಶ್ವದ ನಂ.1 ಟಿ20 ಬ್ಯಾಟರ್ ಆಗಿ ಮುಂದುವರಿದಿರುವುದಷ್ಟೇ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನೂ ನಿರ್ಮಿಸಿದ್ದಾರೆ.
ಈ ಸಾಧನೆಯೊಂದಿಗೆ ಇಶಾನ್ ಕಿಶನ್, ಟಿ20 ರ‍್ಯಾಂಕಿಂಗ್ ನಲ್ಲಿ ಭಾರತದ ದಿಗ್ಗಜರಾದ ವಿರಾಟ್ ಕೊಹ್ಲಿ (909) ಮತ್ತು ಸೂರ್ಯಕುಮಾರ್ ಯಾದವ್ (912) ಅವರ ಅತ್ಯುತ್ತಮ ರೇಟಿಂಗ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇದೀಗ ಅಭಿಷೇಕ್ ಶರ್ಮಾ (931) ನಂತರ ಅತಿ ಹೆಚ್ಚು ರೇಟಿಂಗ್ ಪಾಯಿಂಟ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇತ್ತೀಚಿನ ರ್ಯಾಂಕಿಂಗ್‌ನಲ್ಲಿ ಅಭಿಷೇಕ್ ಶರ್ಮಾ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದಾಗ್ಯೂ, 931 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಟಿ20 ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಅತಿ ಹೆಚ್ಚು ರೇಟಿಂಗ್ ಗಳಿಸಿದ ಆಟಗಾರ ಎಂಬ ದಾಖಲೆ ಇನ್ನೂ ಅವರ ಹೆಸರಿನಲ್ಲೇ ಉಳಿದಿದೆ. ಇಂಗ್ಲೆಂಡ್‌ನ ಡೇವಿಡ್ ಮಲನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಅಗ್ರ ಐದರಲ್ಲಿರುವ ಏಕೈಕ ವಿದೇಶಿ ಆಟಗಾರರಾಗಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಅಗ್ರ ಐದು ಬ್ಯಾಟರ್‌ಗಳಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದು, ಇದು ಟಿ20 ಕ್ರಿಕೆಟ್‌ನಲ್ಲಿ ಭಾರತದ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇಶಾನ್ ಕಿಶನ್ ಅವರ ರೇಟಿಂಗ್ ಏರಿಕೆಗೆ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಪ್ರದರ್ಶನ ಪ್ರಮುಖ ಕಾರಣವಾಗಿದೆ. ಮೂರು ಪಂದ್ಯಗಳಲ್ಲಿ ಅವರು 48.33 ಸರಾಸರಿಯಲ್ಲಿ 145 ರನ್ ಗಳಿಸಿದ್ದು, 154ಕ್ಕೂ ಅಧಿಕ ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದರು. ಈ ಅದ್ಭುತ ಪ್ರದರ್ಶನದಿಂದ ಅವರ ರೇಟಿಂಗ್ ಪಾಯಿಂಟ್‌ಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ಕಳೆದ ವರ್ಷ ಜುಲೈನಲ್ಲಿ ಅಭಿಷೇಕ್ ಶರ್ಮಾ ಮೊದಲ ಬಾರಿಗೆ ವಿಶ್ವದ ನಂ.1 ಟಿ20 ಬ್ಯಾಟರ್ ಆಗಿ ಹೊರಹೊಮ್ಮಿ ಸುಮಾರು 11 ತಿಂಗಳುಗಳ ಕಾಲ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಆದರೆ ಈ ತಿಂಗಳ ಆರಂಭದಲ್ಲಿ ಇಶಾನ್ ಕಿಶನ್ ಅದ್ಭುತ ಫಾರ್ಮ್‌ನ ನೆರವಿನಿಂದ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದು, ಇದೀಗ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.
