ಹರ್ಭಜನ್-ಶ್ರೀಶಾಂತ್ ಸ್ಲಾಪ್‌ಗೇಟ್ ವಿವಾದ: 18 ವರ್ಷಗಳ ಬಳಿಕ ಅಸಲಿ ವಿಡಿಯೋ ಬಿಡುಗಡೆ ಮಾಡಿದ ಲಲಿತ್ ಮೋದಿ

Untitled design 2025 08 29t163752.313

ಲಂಡನ್: 2008ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮೊದಲ ಆವೃತ್ತಿಯಲ್ಲಿ ನಡೆದ ದೊಡ್ಡ ವಿವಾದವು 18 ವರ್ಷಗಳ ನಂತರ ಮತ್ತೆ ಸುದ್ದಿಯಾಗಿದೆ. ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ಬಳಿಕ ಹರ್ಭಜನ್ ಸಿಂಗ್ ಅವರು ಎಸ್. ಶ್ರೀಶಾಂತ್‌ಗೆ ಮೈದಾನದಲ್ಲಿಯೇ ಕಪಾಳಮೋಕ್ಷ ಮಾಡಿದ್ದ ಘಟನೆಯ ವಿಡಿಯೊವನ್ನು ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಶೇರ್ ಮಾಡಿದ್ದಾರೆ.

ಈ ದೃಶ್ಯವು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅವರ ‘ಬಿಯಾಂಡ್23 ಕ್ರಿಕೆಟ್ ಪಾಡ್‌ ಕಾಸ್ಟ್‌ನಲ್ಲಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

2008ರ ಏಪ್ರಿಲ್ 25ರಂದು ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು 66 ರನ್‌ಗಳಿಂದ ಸೋಲಿಸಿತ್ತು. ಪಂದ್ಯದ ಬಳಿಕ ಆಟಗಾರರು ಸಾಂಪ್ರದಾಯಿಕವಾಗಿ ಕೈಕುಲುಕುವ ಸಂದರ್ಭದಲ್ಲಿ, ಮುಂಬೈ ತಂಡದ ತಾತ್ಕಾಲಿಕ ನಾಯಕನಾಗಿದ್ದ ಹರ್ಭಜನ್ ಸಿಂಗ್, ಶ್ರೀಶಾಂತ್‌ಗೆ ಕೆನ್ನೆಗೆ ಬಾರಿಸಿದ್ದರು.

ಪಂದ್ಯದಲ್ಲಿ ಸೋತ ತಂಡದ ನಾಯಕನ ಬಳಿಗೆ ನಗುತ್ತಾ ಬಂದ ಶ್ರೀಶಾಂತ್, ‘ದುರಾದೃಷ್ಟ’ ಎಂದು ಹೇಳಿ ಕೈಕುಲುಕಲು ಮುಂದಾದಾಗ, ಇದು ಹರ್ಭಜನ್‌ರ ಕೋಪಕ್ಕೆ ಕಾರಣವಾಯಿತು ಎಂದು ವರದಿಗಳು ತಿಳಿಸಿವೆ. ಈ ಘಟನೆಯನ್ನು ಟಿವಿ ಕ್ಯಾಮೆರಾಗಳು ಸೆರೆಹಿಡಿಯದಿದ್ದರೂ, ಲಲಿತ್ ಮೋದಿ ಅವರ ಭದ್ರತಾ ಕ್ಯಾಮೆರಾವೊಂದು ಈ ಕ್ಷಣವನ್ನು ದಾಖಲಿಸಿತ್ತು.

“ಪಂದ್ಯ ಮುಗಿದ ನಂತರ ಟಿವಿ ಕ್ಯಾಮೆರಾಗಳು ಆಫ್ ಆಗಿದ್ದವು. ಆದರೆ ನನ್ನ ಭದ್ರತಾ ಕ್ಯಾಮೆರಾ ಆನ್ ಆಗಿತ್ತು. ಆಟಗಾರರು ಕೈಕುಲುಕುವಾಗ, ಹರ್ಭಜನ್ ಶ್ರೀಶಾಂತ್‌ಗೆ ‘ಇಲ್ಲಿಗೆ ಬಾ’ ಎಂದು ಹೇಳಿ ಕೆನ್ನೆಗೆ ಬಾರಿಸಿದರು,” ಎಂದು ಮೋದಿ ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ, ಹರ್ಭಜನ್ ಉಳಿದ ಐಪಿಎಲ್ 11 ಪಂದ್ಯಗಳ ನಿಷೇಧವನ್ನು ವಿಧಿಸಲಾಯಿತು. ಜೊತೆಗೆ ಅವರ ಪಂದ್ಯದ ಶುಲ್ಕವನ್ನು ಕೂಡ ಕಸಿದುಕೊಳ್ಳಲಾಯಿತು. ಹರ್ಭಜನ್ ನಂತರ ಶ್ರೀಶಾಂತ್‌ಗೆ ಕ್ಷಮೆಯಾಚಿಸಿದ್ದರು ಮತ್ತು ಇಬ್ಬರೂ ಆಟಗಾರರು ಕಾಲಾಂತರದಲ್ಲಿ ಸೌಹಾರ್ದಯುತ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ.

2019ರಲ್ಲಿ, ಹರ್ಭಜನ್ ಈ ಘಟನೆಯನ್ನು ತಮ್ಮ ಜೀವನದ ದೊಡ್ಡ ತಪ್ಪು ಎಂದು ಒಪ್ಪಿಕೊಂಡಿದ್ದರು, “ನಾನು ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದು ತಪ್ಪಾಯಿತು. ಅದನ್ನು ಸರಿಪಡಿಸಲು ಬಯಸುತ್ತೇನೆ,” ಎಂದು ಅವರು ಹೇಳಿದ್ದರು.

2023ರಲ್ಲಿ ಶ್ರೀಶಾಂತ್ ಈ ಘಟನೆಯನ್ನು ನೆನಪಿಸಿಕೊಂಡು, “ಹರ್ಭಜನ್‌ ಯಾವಾಗಲೂ ನನ್ನನ್ನು ಬೆಂಬಲಿಸಿದ್ದಾರೆ. ಆ ಘಟನೆ ಕೇವಲ ಒಂದು ತಪ್ಪು ತಿಳುವಳಿಕೆಯಾಗಿತ್ತು, ಆದರೆ ಮಾಧ್ಯಮಗಳು ಇದನ್ನು ದೊಡ್ಡದಾಗಿಸಿದವು,” ಎಂದು ತಿಳಿಸಿದ್ದರು. ಇಬ್ಬರೂ ಆಟಗಾರರು 2011ರ ವಿಶ್ವಕಪ್ ಗೆಲುವಿನ ಭಾರತ ತಂಡದ ಭಾಗವಾಗಿದ್ದರು ಮತ್ತು ನಿವೃತ್ತಿಯ ನಂತರ ಕಾಮೆಂಟರಿ ಕ್ಷೇತ್ರದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದಾರೆ.

Exit mobile version