ನವದೆಹಲಿ (ಜುಲೈ 15): ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ಚಕಪ್ ಮಾದರಿಯ ಪುರುಷರ ಟೂರ್ನಿಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಐಸಿಸಿ ಪ್ರಕಾರ, ಹೊಸ ಮಾದರಿಯ ಉದ್ದೇಶ ಪಂದ್ಯಗಳನ್ನು ಇನ್ನಷ್ಟು ಸ್ಪರ್ಧಾತ್ಮಕವಾಗಿಸುವುದು, ಪ್ರತಿ ಪಂದ್ಯಕ್ಕೂ ಹೆಚ್ಚಿನ ಮಹತ್ವ ನೀಡುವುದು ಹಾಗೂ ಆಟಗಾರರು ಮತ್ತು ಅಭಿಮಾನಿಗಳಿಗೆ ಉತ್ತಮ ಅನುಭವ ಒದಗಿಸುವುದಾಗಿದೆ.
2027ರ ಏಕದಿನ ವಿಶ್ವಕಪ್‌ಗೆ ಹೊಸ ಮೂರು ಹಂತದ ಮಾದರಿ
2027ರ ಏಕದಿನ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಆತಿಥ್ಯ ವಹಿಸಲಿವೆ. ಟೂರ್ನಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿವೆ.
ಹೊಸ ಮಾದರಿಯ ಪ್ರಕಾರ, ಮೊದಲ ಹಂತದಲ್ಲಿ ಕೊನೆಯ ಮೂರು ಶ್ರೇಯಾಂಕದ ತಂಡಗಳು ರೌಂಡ್-ರಾಬಿನ್ ಮಾದರಿಯಲ್ಲಿ ಆಡಲಿದ್ದು, ಅಗ್ರಸ್ಥಾನ ಪಡೆದ ಒಂದು ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಲಿದೆ.
ಎರಡನೇ ಹಂತದಲ್ಲಿ 12 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನ ಮೊದಲ ಮೂರು ತಂಡಗಳು ಹಾಗೂ ಅತ್ಯುತ್ತಮ ನಾಲ್ಕನೇ ಸ್ಥಾನ ಪಡೆದ ಒಂದು ತಂಡ ಸೇರಿ ಒಟ್ಟು ಏಳು ತಂಡಗಳು ಸೂಪರ್-7 ಹಂತಕ್ಕೆ ಪ್ರವೇಶಿಸಲಿವೆ.
ಸೂಪರ್-7 ಹಂತದಲ್ಲಿ ಎಲ್ಲಾ ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು, ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ.
2028ರ ಟಿ20 ವಿಶ್ವಕಪ್‌ಗೂ ಹೊಸ ಸ್ವರೂಪ
2028ರ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸಲಿದ್ದರೂ, ಗುಂಪು ಹಂತದ ಮಾದರಿಯಲ್ಲಿ ಬದಲಾವಣೆ ಮಾಡಲಾಗಿದೆ.
20 ತಂಡಗಳನ್ನು ಐದು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್-10 ಹಂತಕ್ಕೆ ಪ್ರವೇಶಿಸಲಿವೆ.
ಈ ಹಂತದಲ್ಲಿ ಎರಡು ಗುಂಪುಗಳಾಗಿ ವಿಭಜಿಸಲಾದ 10 ತಂಡಗಳಲ್ಲಿ ಪ್ರತಿ ಗುಂಪಿನ ಅಗ್ರ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿವೆ. ಉಳಿದ ಎರಡು ಸ್ಥಾನಗಳಿಗಾಗಿ ಹೊಸದಾಗಿ ಎಲಿಮಿನೇಟರ್ ಪಂದ್ಯಗಳನ್ನು ಪರಿಚಯಿಸಲಾಗಿದೆ. ಒಂದು ಗುಂಪಿನ ಎರಡನೇ ಸ್ಥಾನ ಪಡೆದ ತಂಡ ಮತ್ತೊಂದು ಗುಂಪಿನ ಮೂರನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ.
12 ತಂಡಗಳಿಗೆ ಈಗಾಗಲೇ ಅರ್ಹತೆ
2028ರ ಟಿ20 ವಿಶ್ವಕಪ್‌ಗೆ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಸೇರಿದಂತೆ 12 ತಂಡಗಳು ಈಗಾಗಲೇ ಅರ್ಹತೆ ಪಡೆದಿವೆ. ಉಳಿದ ಎಂಟು ಸ್ಥಾನಗಳಿಗಾಗಿ ಜಾಗತಿಕ ಅರ್ಹತಾ ಟೂರ್ನಿ ನಡೆಯಲಿದೆ.
