2026ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ನಾಯಕಿ ಹರ್ಮನ್‌ಪ್ರೀತ್‌ಗೆ ಭರ್ಜರಿ ಬಹುಮಾನ!

Untitled design (23)

2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಚಿನ್ನದ ಪದಕ ಗೆದ್ದು ದೇಶಕ್ಕೆ ಈ ಆವೃತ್ತಿಯ ಮೊದಲ ಚಿನ್ನ ತಂದುಕೊಟ್ಟಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ನಿನ್ನೆ ಸೆಪ್ಟೆಂಬರ್ 22ರಂದು ನಡೆದ ಮಹಿಳಾ ಟಿ20 ಫೈನಲ್‌ನಲ್ಲಿ ಶ್ರೀಲಂಕಾವನ್ನು 147 ರನ್‌ಗಳಿಂದ ಮಣಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಈ ಮೂಲಕ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಭಾರತದ ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಪಂಜಾಬ್ ಸರ್ಕಾರದಿಂದ ಭರ್ಜರಿ ಬಹುಮಾನ ಘೋಷಿಸಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯದ ಕ್ರೀಡಾ ನೀತಿಯಡಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ರೂ. 1 ಕೋಟಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಭಾರತೀಯ ಮಹಿಳಾ ತಂಡದ ಸಾಧನೆಯಿಂದ ಪಂಜಾಬ್ ಹಾಗೂ ಇಡೀ ದೇಶದ ಹೆಮ್ಮೆ ಹೆಚ್ಚಾಗಿದೆ ಎಂದು ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ಜೊತೆಗೆ ತಮಿಳುನಾಡಿನ ಯುವ ಆಟಗಾರ್ತಿ ಜಿ. ಕಮಲಿನಿಗೂ ರಾಜ್ಯ ಸರ್ಕಾರದಿಂದ ಬಹುಮಾನ ಘೋಷಿಸಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕಮಲಿನಿಗೆ  ರೂ. 75 ಲಕ್ಷ ನಗದು ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ. ಮದುರೈ ಮೂಲದ ಕಮಲಿನಿ ಭಾರತ ತಂಡದ ಭಾಗವಾಗಿ ಏಷ್ಯನ್ ಗೇಮ್ಸ್ ಚಿನ್ನ ಗೆಲ್ಲುವಲ್ಲಿ ಕೊಡುಗೆ ನೀಡಿದ್ದಾರೆ.

ಇನ್ನು ಪಂದ್ಯಾವಳಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಅವರ ಬ್ಯಾಟಿಂಗ್ ಅಂಕಿ ಅಂಶಗಳೂ ಚರ್ಚೆಗೆ ಕಾರಣವಾಗಿವೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು 17 ಎಸೆತಗಳಲ್ಲಿ 19 ರನ್ ಗಳಿಸಿದ್ದರೆ, ಬಾಂಗ್ಲಾದೇಶ ವಿರುದ್ಧ 33 ಎಸೆತಗಳಲ್ಲಿ 40 ರನ್ ಗಳಿಸಿದ್ದರು. ಹೀಗಾಗಿ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಕುರಿತು ಚರ್ಚೆಗಳು ನಡೆದಿವೆ. ಆದರೆ ನಾಯಕಿಯಾಗಿ ಅವರು ತಂಡವನ್ನು ಫೈನಲ್‌ವರೆಗೆ ಮುನ್ನಡೆಸಿ ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಫೈನಲ್‌ನಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 216 ರನ್ ಗಳಿಸಿತು. ಸ್ಮೃತಿ ಮಂಧಾನ 79 ರನ್ ಗಳಿಸಿದರೆ, ಶಫಾಲಿ ವರ್ಮಾ ಹಾಗೂ ರಿಚಾ ಘೋಷ್ ಕೂಡ ಪ್ರಮುಖ ಕೊಡುಗೆ ನೀಡಿದರು. ಬಳಿಕ ಭಾರತದ ಬೌಲರ್‌ಗಳು ಶ್ರೀಲಂಕಾ ತಂಡವನ್ನು 69 ರನ್‌ಗಳಿಗೆ ಆಲೌಟ್ ಮಾಡಿದರು. ಪರಿಣಾಮ ಭಾರತ 147 ರನ್‌ಗಳ ಭರ್ಜರಿ ಜಯ ದಾಖಲಿಸಿತು.

2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲೂ ಭಾರತ ಮಹಿಳಾ ಕ್ರಿಕೆಟ್ ತಂಡ ಚಿನ್ನ ಗೆದ್ದಿತ್ತು. ಇದೀಗ 2026ರ ಆವೃತ್ತಿಯಲ್ಲೂ ಚಿನ್ನ ಗೆಲ್ಲುವ ಮೂಲಕ ತಂಡ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿದೆ.

Exit mobile version