ವಿಶ್ವಕಪ್‌ಗೆ ಫುಟ್ಬಾಲ್ ಲೆಜೆಂಡ್ ಕ್ರಿಸ್ಟಿಯಾನೋ ರೊನಾಲ್ಡೊ ಕಣ್ಣೀರಿನ ವಿದಾಯ

Web Photo Editor 2026 07 06T142033.135

ವಿಶ್ವ ಫುಟ್‌ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅವರ ವಿಶ್ವಕಪ್ ಕನಸು ಮತ್ತೊಮ್ಮೆ ಭಂಗವಾಗಿದೆ. ಅಮೆರಿಕದ ಟೆಕ್ಸಾಸ್‌ನಲ್ಲಿ ಸೋಮವಾರ ಭಾರತೀಯ ಕಾಲಮಾನ ಮುಂಜಾನೆ ನಡೆದ ಪ್ರೀ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡ ಸ್ಪೇನ್ ವಿರುದ್ಧ 1-0 ಗೋಲುಗಳ ಅಂತರದಿಂದ ಸೋಲು ಅನುಭವಿಸಿದ್ದು, ಈ ಆಘಾತಕಾರಿ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ ವಿಶ್ವಕಪ್ ಟ್ರೋಫಿ ಗೆಲ್ಲಬೇಕೆಂಬ ರೊನಾಲ್ಡೊ ಅವರ ಬಹುದೊಡ್ಡ ಕನಸು ಅಪೂರ್ಣವಾಗಿಯೇ ಉಳಿದಿದೆ.

ಪಂದ್ಯ ಆರಂಭದಿಂದಲೇ ಎರಡೂ ತಂಡಗಳು ಎಚ್ಚರಿಕೆಯ ಆಟ ಪ್ರದರ್ಶಿಸಿದವು. ಮಧ್ಯಮೈದಾನದಲ್ಲಿ ಕಠಿಣ ಪೈಪೋಟಿ ಕಂಡುಬಂದ ಕಾರಣ, ನಿರ್ಧಿಷ್ಟ 90 ನಿಮಿಷಗಳ ಅವಧಿಯವರೆಗೆ ಎರಡೂ ತಂಡಗಳು ಗೋಲುರಹಿತ ಸಮಬಲದಲ್ಲೇ ಉಳಿದವು. ಪೋರ್ಚುಗಲ್ ರಕ್ಷಣಾತ್ಮಕವಾಗಿ ಗಟ್ಟಿಯಾಗಿ ನಿಂತಿದ್ದರೆ, ಸ್ಪೇನ್ ನಿರಂತರವಾಗಿ ದಾಳಿಗಳನ್ನು ನಡೆಸಿ ಒತ್ತಡ ಹೆಚ್ಚಿಸಿತು. ಪಂದ್ಯ ಡ್ರಾಕ್ಕೆ ಸಾಗುವ ಲಕ್ಷಣಗಳು ಗೋಚರಿಸುತ್ತಿದ್ದಾಗ, ಸ್ಟಾಪೇಜ್ ಟೈಮ್‌ನಲ್ಲಿ ಸ್ಪೇನ್ ಪರ ಮೈಕೆಲ್ ಮೆರಿನೊ ನಿರ್ಣಾಯಕ ಗೋಲು ಬಾರಿಸಿ ಪಂದ್ಯ ಫಲಿತಾಂಶವನ್ನು ತಿರುಗಿಸಿದರು. ಆ ಒಂದು ಗೋಲಿನ ನೆರವಿನಿಂದ ಸ್ಪೇನ್ ಕ್ವಾರ್ಟರ್‌ಫೈನಲ್‌ಗೆ ಭರ್ಜರಿಯಾಗಿ ಪ್ರವೇಶಿಸಿತು.

ಇನ್ನೊಂದೆಡೆ, ಈ ಸೋಲು ಪೋರ್ಚುಗಲ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು. ಪಂದ್ಯ ಮುಗಿದ ತಕ್ಷಣ ಕ್ರಿಸ್ಟಿಯಾನೋ ರೊನಾಲ್ಡೊ ಮೈದಾನದಲ್ಲೇ ಭಾವುಕರಾಗಿ ಕಣ್ಣೀರು ಹಾಕಿದರು. ಅಭಿಮಾನಿಗಳತ್ತ ಚಪ್ಪಾಳೆ ತಟ್ಟುತ್ತಾ ಅವರು ಮೈದಾನ ತೊರೆದ ದೃಶ್ಯಗಳು ಫುಟ್‌ಬಾಲ್ ಪ್ರೇಮಿಗಳನ್ನು ಕಾಡುವಂತಿದ್ದವು. ನಂತರ ಮಾತನಾಡಿದ ರೊನಾಲ್ಡೊ, ಇದು ತಮ್ಮ ಕೊನೆಯ ವಿಶ್ವಕಪ್ ಪಂದ್ಯವಾಗಿರುವುದನ್ನು ಖಚಿತಪಡಿಸಿದರು.

“ವಿಶ್ವಕಪ್‌ನಿಂದ ಈ ರೀತಿ ಹೊರಬೀಳುತ್ತಿರುವುದು ಬೇಸರ ತಂದಿದೆ. ಆದರೆ ನನ್ನ ದೇಶಕ್ಕಾಗಿ ನಾನು ನನ್ನಿಂದಾದ ಎಲ್ಲವನ್ನೂ ಕೊಟ್ಟಿದ್ದೇನೆ. ಯಾವುದೇ ಪಶ್ಚಾತ್ತಾಪವಿಲ್ಲದೆ, ಮುಕ್ತ ಮನಸ್ಸಿನಿಂದ ನಾನು ಹೊರಟಿದ್ದೇನೆ,” ಎಂದು ರೊನಾಲ್ಡೊ ಭಾವುಕರಾಗಿ ಪ್ರತಿಕ್ರಿಯಿಸಿದರು.

ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಪೋರ್ಚುಗಲ್ ತಂಡಕ್ಕೆ ಅನೇಕ ಐತಿಹಾಸಿಕ ಕ್ಷಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. 2016ರ ಯುರೋ ಕಪ್ ಹಾಗೂ ಎರಡು ಯುಇಎಫ್ಎ ನೇಷನ್ಸ್ ಲೀಗ್ ಟ್ರೋಫಿಗಳನ್ನು ಗೆಲ್ಲುವಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದರು. ಆದರೆ ವಿಶ್ವಕಪ್ ಟ್ರೋಫಿ ಮಾತ್ರ ಅವರ ಕೈಗೆ ಸಿಗದೇ ಉಳಿಯಿತು. ವಿಶ್ವಕಪ್ ಇತಿಹಾಸದಲ್ಲಿ ಅವರು ಆಡಿದ 27 ಪಂದ್ಯಗಳಲ್ಲಿ 11 ಗೋಲುಗಳನ್ನು ಬಾರಿಸಿದ್ದು, ಪೋರ್ಚುಗಲ್ ಪರ ಅಮೋಘ ಸಾಧನೆ ಮೆರೆದಿದ್ದಾರೆ.

ಆದರೂ, ವಿಶ್ವಕಪ್ ಗೆಲ್ಲುವ ಕನಸನ್ನು ಸಾಕಾರಗೊಳಿಸಲಾಗದೇ ಟೂರ್ನಿಗೆ ವಿದಾಯ ಹೇಳಿರುವುದು ರೊನಾಲ್ಡೊ ಅವರ ವೃತ್ತಿಜೀವನದ ಅತ್ಯಂತ ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿ ಉಳಿಯಲಿದೆ.

Exit mobile version