ಗ್ಲ್ಯಾಸ್ಗೋ, (ಜುಲೈ 31): 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಜೋರಾಗಿದ್ದು, ಮಹಿಳಾ ಜೂಡೋ ಪಟು ಅಸ್ಮಿತಾ ಡೇ ದೇಶಕ್ಕೆ ನಾಲ್ಕನೇ ಚಿನ್ನದ ಪದಕ ಗೆದ್ದಿದ್ದಾರೆ. 48 ಕೆಜಿ ವಿಭಾಗದ ಫೈನಲ್‌ನಲ್ಲಿ ಕೆನಡಾದ ಹೈಡಿ ಕ್ವಾಚ್ ಅವರನ್ನು ಮಣಿಸಿದ ಅಸ್ಮಿತಾ, ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಜೂಡೋ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಈ ಗೆಲುವಿನೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಅಸ್ಮಿತಾ ಅವರ ಸಾಧನೆ ಭಾರತೀಯ ಜೂಡೋ ಕ್ರೀಡೆಯ ಬೆಳವಣಿಗೆಗೆ ಹೊಸ ಮೈಲಿಗಲ್ಲಾಗಿ ಪರಿಣಮಿಸಿದೆ.
ಫೈನಲ್‌ವರೆಗಿನ ಅದ್ಭುತ ಪಯಣ
ಅಸ್ಮಿತಾ ಡೇ ಆರಂಭದಿಂದಲೇ ಅತ್ಯುತ್ತಮ ಪ್ರದರ್ಶನ ನೀಡಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಇವಾ ಎವಿಂಗ್ ಅವರನ್ನು ಮಣಿಸಿದ ಅವರು, ಸೆಮಿಫೈನಲ್‌ನಲ್ಲಿ ಮತ್ತೋರ್ವ ಸ್ಕಾಟ್ಲೆಂಡ್ ಆಟಗಾರ್ತಿ ಸಮ್ಮರ್ ಶಾ ವಿರುದ್ಧ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದರು. ಅಂತಿಮ ಹಣಾಹಣಿಯಲ್ಲಿ ಕೆನಡಾದ ಹೈಡಿ ಕ್ವಾಚ್ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಯಾರು ಈ ಅಸ್ಮಿತಾ ಡೇ?
ತ್ರಿಪುರಾದ ಬೆಲೋನಿಯಾ ಮೂಲದ ಅಸ್ಮಿತಾ ಡೇ ಆರಂಭದಲ್ಲಿ ಅಥ್ಲೆಟಿಕ್ಸ್‌ನಲ್ಲಿ, ವಿಶೇಷವಾಗಿ 800 ಮೀಟರ್ ಓಟದಲ್ಲಿ ಆಸಕ್ತಿ ಹೊಂದಿದ್ದರು. ಆದರೆ ಜಿಲ್ಲಾ ಮಟ್ಟದ ಟ್ರಯಲ್ಸ್ ವೇಳೆ ಜೂಡೋ ಕ್ರೀಡೆಯತ್ತ ಆಕರ್ಷಿತರಾದ ಅವರು, ನಂತರ ಭೋಪಾಲ್‌ನ SAI ಪ್ರಾದೇಶಿಕ ಕೇಂದ್ರದಲ್ಲಿ ತರಬೇತುದಾರ ಯಶ್ಪಾಲ್ ಸೋಲಂಕಿ ಅವರ ಮಾರ್ಗದರ್ಶನದಲ್ಲಿ ಕಠಿಣ ತರಬೇತಿ ಪಡೆದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಸಾಧಿಸಿದರು.
ಪದಕಗಳ ಸರದಾರ್ತಿ ಅಸ್ಮಿತಾ ಡೇ
ಅಸ್ಮಿತಾ ಡೇ ಈಗಾಗಲೇ ಹಲವು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.
- 2025ರ ಕಾಸಾಬ್ಲಾಂಕಾ ಆಫ್ರಿಕನ್ ಓಪನ್ – ಚಿನ್ನ
- 2023ರ ಮಕಾವು ಜೂನಿಯರ್ ಏಷ್ಯಾಕಪ್ – ಚಿನ್ನ
- 2023ರ ಏಷ್ಯನ್ ಓಪನ್ – ಬೆಳ್ಳಿ
- ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ – ಹಲವು ಚಿನ್ನದ ಪದಕಗಳು
- ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿ
ಇದೀಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನಕ್ಕೆ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಸೇರಿಸಿಕೊಂಡಿದ್ದಾರೆ.
