ಗ್ಲ್ಯಾಸ್ಗೋ, (ಜುಲೈ 31): 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಜೂಡೋ ವಿಭಾಗದಿಂದ ಐತಿಹಾಸಿಕ ಕ್ಷಣ ಸಿಕ್ಕಿದೆ. ಕ್ರೀಡಾಕೂಟದ 9ನೇ ದಿನದಂದು ಕೆಲವೇ ನಿಮಿಷಗಳ ಅಂತರದಲ್ಲಿ ಅಸ್ಮಿತಾ ಡೇ ಮತ್ತು ಹರ್ಷ್ ಸಿಂಗ್ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ.
ಮೊದಲಿಗೆ ಮಹಿಳೆಯರ 48 ಕೆಜಿ ವಿಭಾಗದ ಫೈನಲ್‌ನಲ್ಲಿ ಅಸ್ಮಿತಾ ಡೇ ಕೆನಡಾದ ಹೈಡಿ ಕ್ವಾಚ್ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದರು. ಇದರ ಬೆನ್ನಲ್ಲೇ ಪುರುಷರ 60 ಕೆಜಿ ವಿಭಾಗದ ಫೈನಲ್‌ನಲ್ಲಿ ಹರ್ಷ್ ಸಿಂಗ್ ಆಸ್ಟ್ರೇಲಿಯಾದ ಜೋಶುವಾ ಕಾಟ್ಜ್ ಅವರನ್ನು 10-0 ಅಂತರದಿಂದ ಮಣಿಸಿ ಮತ್ತೊಂದು ಚಿನ್ನ ಭಾರತದ ಪಾಲಾಗುವಂತೆ ಮಾಡಿದರು.
ಈ ಸಾಧನೆಯೊಂದಿಗೆ ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಜೂಡೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಮತ್ತು ಪುರುಷ ಆಟಗಾರರು ಎಂಬ ಹೆಗ್ಗಳಿಕೆಗೆ ಅಸ್ಮಿತಾ ಡೇ ಹಾಗೂ ಹರ್ಷ್ ಸಿಂಗ್ ಪಾತ್ರರಾಗಿದ್ದಾರೆ.
ಭಾರತದ ಪದಕ ಬೇಟೆ ಮತ್ತಷ್ಟು ಬಲ
ಜೂಡೋದಲ್ಲಿ ಸಿಕ್ಕ ಎರಡು ಚಿನ್ನದ ಪದಕಗಳೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಭಾರತದ ಪದಕಗಳ ಸಂಖ್ಯೆ 19ಕ್ಕೆ ತಲುಪಿದ್ದು, ಕ್ರೀಡಾಕೂಟದಲ್ಲಿ ಭಾರತ ಉತ್ತಮ ಪ್ರದರ್ಶನ ಮುಂದುವರಿಸಿದೆ.
ಹರ್ಷ್ ಸಿಂಗ್ ಅವರ ಅದ್ಭುತ ಪಯಣ
ಹರ್ಷ್ ಸಿಂಗ್ ಆರಂಭದಿಂದಲೇ ಅತ್ಯುತ್ತಮ ಪ್ರದರ್ಶನ ತೋರಿದರು. 16ನೇ ಸುತ್ತಿನಲ್ಲಿ ಮಲಾವಿಯ ಚಿಕೊಂಡಿ ಕಥೆವೆರಾ ಅವರನ್ನು ಮಣಿಸಿದ ಅವರು, ಕ್ವಾರ್ಟರ್‌ಫೈನಲ್‌ನಲ್ಲಿ ವನವಾಟುವಿನ ಅಲನ್ ಮಂತುಲಿ ಅವರನ್ನು ಸೋಲಿಸಿದರು. ಬಳಿಕ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಪೆಡ್ರೊ ಕಾರ್ಲೋಸ್ ಆಂಟೂನ್ ನೆಟೊ ವಿರುದ್ಧ ಜಯ ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟರು.
ಫೈನಲ್‌ನಲ್ಲಿ ಒಲಿಂಪಿಕ್ಸ್ ಅನುಭವ ಹೊಂದಿದ್ದ ಆಸ್ಟ್ರೇಲಿಯಾದ ಜೋಶುವಾ ಕಾಟ್ಜ್ ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದರೂ, ಹರ್ಷ್ ಸಿಂಗ್ ತಾಳ್ಮೆಯ ಆಟ ಪ್ರದರ್ಶಿಸಿದರು. ಪಂದ್ಯದ ಕೊನೆಯ ಕ್ಷಣಗಳಲ್ಲಿ ಅದ್ಭುತ ‘ಥ್ರೋ ಮತ್ತು ಪಿನ್’ ತಂತ್ರ ಬಳಸಿದ ಹರ್ಷ್, 10-0 ಅಂತರದ ಭರ್ಜರಿ ಗೆಲುವಿನೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
