ಸಿನಿಮಾ ರಂಗಕ್ಕೆ ಯೋಗಿ ಆದಿತ್ಯನಾಥ್ ಖಡಕ್ ವಾರ್ನಿಂಗ್

Untitled design (49)

ವಾರಣಾಸಿ: ಬೆಳ್ಳಿತೆರೆಯ ಮೇಲೆ ರೌಡಿಗಳು ಮಾಸ್ ಎಂಟ್ರಿ ಕೊಡುವುದು, ಸಿಗರೇಟ್ ಸ್ಟೈಲ್ ಆಗಿ ಹಚ್ಚುವುದು ಮತ್ತು ಕಾನೂನು ಉಲ್ಲಂಘಿಸಿ ಮೆರೆಯುವುದನ್ನು ನೋಡಿ ಅಭಿಮಾನಿಗಳು ಸೀಟಿ ಹೊಡೆಯಬಹುದು. ಆದರೆ, ಇಂತಹ ರೀಲ್ ಲೈಫಿನ ವಿಲನ್ ಅಟ್ಟಹಾಸಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಬ್ರೇಕ್ ಹಾಕುವ ಮಾತನಾಡಿದ್ದಾರೆ. ವಾರಣಾಸಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಿತ್ರರಂಗದ ಇಂದಿನ ಪ್ರವೃತ್ತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್‌, ಇಂದಿನ ಸಿನಿಮಾಗಳು ಯುವ ಪೀಳಿಗೆಯ ದಾರಿಯನ್ನು ತಪ್ಪಿಸುತ್ತಿವೆ. ಹಿಂದೆ ಸಮಾಜದಲ್ಲಿ ಉದಾತ್ತ ವ್ಯಕ್ತಿಗಳನ್ನು, ಸಜ್ಜನರನ್ನು ನಾಯಕರಂತೆ ತೋರಿಸಲಾಗುತ್ತಿತ್ತು. ಕೆಟ್ಟವರನ್ನು ಮತ್ತು ಸಮಾಜಘಾತುಕರನ್ನು ಖಳನಾಯಕರಂತೆ ಬಿಂಬಿಸಲಾಗುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ. ಕಟುಕರು, ಡಕಾಯಿತರು ಮತ್ತು ಕ್ರಿಮಿನಲ್‌ಗಳನ್ನು ‘ಹೀರೋ’ಗಳಂತೆ ಬಿಂಬಿಸಿ ಸಮಾಜಕ್ಕೆ ತಪ್ಪು ಸಂದೇಶ ನೀಡಲಾಗುತ್ತಿದೆ ಎಂದು ಅವರು ಗುಡುಗಿದ್ದಾರೆ. ಸಿನಿಮಾ ನೋಡಿ ಯುವಕರು ಅಪರಾಧಿಗಳನ್ನೇ ರೋಲ್ ಮಾಡೆಲ್ ಅಂದುಕೊಂಡರೆ ದೇಶದ ಭವಿಷ್ಯ ಏನಾಗಬಹುದು ಎಂಬ ಬೇಸರ ವ್ಯಕ್ತಪಡಿಸಿದ್ದಾರೆ.

ಮನರಂಜನೆಯ ಹೆಸರಲ್ಲಿ ಸಂಸ್ಕಾರ ಬಲಿ ಕೊಡಬೇಡಿ

ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯೋಗಿಜಿ ಚಲನಚಿತ್ರ ನಿರ್ಮಾಪಕರಿಗೆ ನೇರ ಸಲಹೆ ನೀಡಿದ್ದಾರೆ. ಸೃಜನಶೀಲತೆ ಎನ್ನುವುದು ಸಮಾಜದ ಮೌಲ್ಯಗಳನ್ನು ಬಲಿಕೊಡುವಂತಿರಬಾರದು. ಸಿನಿಮಾ ಅಂದರೆ ಕೇವಲ ಮೂರು ಗಂಟೆಯ ಮನರಂಜನೆಯಲ್ಲ, ಅದು ಸಮಾಜದ ಕನ್ನಡಿ. ರಾಷ್ಟ್ರಭಕ್ತಿ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವ ಕಥೆಗಳಿಗೆ ನೀವು ಜೀವ ತುಂಬಬೇಕು ಎಂದು ಅವರು ಕರೆ ನೀಡಿದ್ದಾರೆ.

‘Bad is Good’ ಟ್ರೆಂಡ್ ಬಗ್ಗೆ ಆತಂಕ

ಇತ್ತೀಚಿನ ಸಿನಿಮಾಗಳಲ್ಲಿ ‘ಕೆಟ್ಟದ್ದೇ ಸರಿ’ (Bad is Good) ಎಂಬ ಪ್ರವೃತ್ತಿ ಹೆಚ್ಚಾಗಿದೆ. ಹಿಂಸೆ ಮತ್ತು ಅಪರಾಧವನ್ನು ಅತಿಶಯವಾಗಿ ವೈಭವೀಕರಿಸುವುದರಿಂದ ಜನರಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ಕಿಚ್ಚು ಆರಿಹೋಗುತ್ತಿದೆ ಎಂದು ಯೋಗಿ ಆತಂಕ ವ್ಯಕ್ತಪಡಿಸಿದ್ದಾರೆ. ನೆನಪಿಡಿ, ನಿಮ್ಮ ಕಲೆ ಸಮಾಜಕ್ಕೆ ಸ್ಪೂರ್ತಿ ನೀಡುವಂತಿರಲಿ, ಸಮಾಜವನ್ನು ಸುಡುವ ಕಿಚ್ಚಾಗದಿರಲಿ ಎಂದು ಎಚ್ಚರಿಸಿದ್ದಾರೆ.

Exit mobile version