ಉತ್ತರ ಪ್ರದೇಶ, ಸೆಪ್ಟೆಂಬರ್ 27: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶ್ರಾವಸ್ತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಮಾಡಲು ಯೋಜಿಸುವ ಎಲ್ಲರಿಗೂ ಕಠಿಣ ಎಚ್ಚರಿಕೆ ನೀಡಿದ್ದಾರೆ. ‘ಐ ಲವ್ ಮುಹಮ್ಮದ್’ ವಿವಾದದ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಈ ಹೇಳಿಕೆಗಳನ್ನ ಹೇಳಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಭಾಷಣದಲ್ಲಿ, “ನಮ್ಮ ರಾಜ್ಯದಲ್ಲಿ ಅರಾಜಕತೆಯನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಎಲ್ಲರಿಗೂ ಭದ್ರತೆಯನ್ನು ಒದಗಿಸುತ್ತದೆ, ಆದರೆ ಯಾರಾದರೂ ಮುಗ್ಧ ಜನರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಜೋರಾಗಿ ಹೇಳಿದರು.
ಹಬ್ಬಗಳ ಸಮಯದಲ್ಲಿ ಎಚ್ಚರಿಕೆ
ಹಬ್ಬಗಳ ಸಮಯದಲ್ಲಿ ಯಾರಾದರೂ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸಿದರೆ, ಸರ್ಕಾರ ಅದನ್ನು ಒಪ್ಪುವುದಿಲ್ಲ ಎಂದು ಯೋಗಿ ಸ್ಪಷ್ಟಪಡಿಸಿದರು. “ನಾನು ಮತ್ತೊಮ್ಮೆ ಹೇಳುತ್ತೇನೆ, ಯಾರಾದರೂ ಬೀದಿಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಗೊಂದಲವನ್ನು ಉಂಟುಮಾಡಲು ಧೈರ್ಯ ಮಾಡಿದರೆ ಅವರು ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿವಾದದ ಹಿನ್ನೆಲೆ
‘ಐ ಲವ್ ಮುಹಮ್ಮದ್’ ವಿವಾದವು ಬರೇಲಿ ನಗರದಲ್ಲಿ ಹಿಂಸಾಚಾರಕ್ಕೆ ದಾರಿ ಮಾಡಿಕೊಟ್ಟಿದೆ. ಈ ವಿವಾದದ ನಡುವೆ ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆಗಳು ಪ್ರಮುಖವಾಗಿವೆ. ಪೊಲೀಸ್ ಇಲಾಖೆಯು ಹಿಂಸಾಚಾರದ ಸಂದರ್ಭಗಳಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಿದೆ ಎಂದು ತಿಳಿಸಲಾಗಿದೆ.ರಾಜ್ಯದಾದ್ಯಂತ ಸುರಕ್ಷತಾ ಏರ್ಪಾಡುಗಳನ್ನು ಬಲಪಡಿಸಲಾಗಿದೆ. ಹಬ್ಬಗಳ ಸಮಯದಲ್ಲಿ ವಿಶೇಷ ಪೊಲೀಸ್ ಪಹರೆಯನ್ನು ಏರ್ಪಡಿಸಲಾಗುವುದು. ಯಾವುದೇ ರೀತಿಯ ಗಲಾಟೆಗಳನ್ನು ತಡೆಯಲು ಪೊಲೀಸರು ಸಜ್ಜಾಗಿದ್ದಾರೆ.