ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ತಿಂಗಳಿನಿಂದ ಸುದ್ದಿಯಾಗಿರುವ ‘ವೈಟ್ ಕಾಲರ್ ಭಯೋತ್ಪಾದನಾ ಮಾಡ್ಯೂಲ್’ ಪ್ರಕರಣದಲ್ಲಿ ರಾಜ್ಯ ತನಿಖಾ ದಳ (ಎಸ್‌ಐಎ) ಶನಿವಾರ (ನ.22, 2025) ಮತ್ತೊಬ್ಬ ಶಂಕಿತನನ್ನು ಬಂಧಿಸಿದೆ. ಬಟಮಾಲೂ ಪ್ರದೇಶದ ನಿವಾಸಿ, ತುಫೈಲ್ ನಿಯಾಜ್ ಭಟ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಂಧನದೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಅಕ್ಟೋಬರ್ 27, 2025ರಂದು ಶ್ರೀನಗರದಲ್ಲಿ ಪ್ರದೇಶದಲ್ಲಿ ಜೈಶ್-ಏ-ಮೊಹಮ್ಮದ್ (JeM) ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದವು. ಈ ಘಟನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಶ್ರೀನಗರ ಪೊಲೀಸರು, ಪೋಸ್ಟರ್ ಅಂಟಿಸುತ್ತಿರುವ ವೈದ್ಯ ಡಾ. ಆದಿಲ್ ಅಹ್ಮದ್ ರಾಥರ್ ಅವರನ್ನು ಗುರುತಿಸಿದರು. ಇದರಿಂದ ತನಿಖೆ ಆರಂಭವಾಯಿತು.
ನಂತರದ ದಿನಗಳಲ್ಲಿ ತನಿಖಾ ತಂಡವು ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿ, ಒಟ್ಟು ಏಳು ಆರೋಪಿಗಳನ್ನು ಬಂಧಿಸಿತು. ಬಂಧಿತರ ಪೈಕಿ ಇಬ್ಬರು ವೈದ್ಯರು (ಡಾ. ಆದಿಲ್ ರಾಥರ್ ಮತ್ತು ಇನ್ನೊಬ್ಬರು), ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಒಬ್ಬ ಫಾರ್ಮಸಿಸ್ಟ್, ಒಬ್ಬ ಮೌಲ್ವಿ ಹಾಗೂ ಇತರ ವೃತ್ತಿಪರರು ಸೇರಿದ್ದಾರೆ. ಈ ಎಲ್ಲರೂ ಉನ್ನತ ಶಿಕ್ಷಣ ಪಡೆದ, ಸಮಾಜದಲ್ಲಿ ಗೌರವಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಎನ್ನುವುದು ತನಿಖಾಧಿಕಾರಿಗಳಿಗೆ ಆಘಾತವನ್ನುಂಟುಮಾಡಿತ್ತು.
ಈ ಗುಂಪು ‘ವೈಟ್ ಕಾಲರ್ ಭಯೋತ್ಪಾದಕ ಜಾಲ’ ಎಂದು ಕರೆಯಲ್ಪಟ್ಟಿದೆ. ಇವರು ನೇರವಾಗಿ ಶಸ್ತ್ರಾಸ್ತ್ರ ಹಿಡಿದು ಹೋರಾಡದಿದ್ದರೂ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ, ಹಣ ಸಂಗ್ರಹ, ಯುವಕರನ್ನು ಭಯೋತ್ಪಾದನೆಗೆ ಒಡ್ಡುವ ಚಟುವಟಿಕೆಗಳಲ್ಲಿ ತೊಡಗಿದ್ದರು ಎನ್ನಲಾಗಿದೆ. ಈ ಜಾಲವು ಪಾಕ್ ಆಧಾರಿತ ಜೈಶ್-ಏ-ಮೊಹಮ್ಮದ್ ಸಂಘಟನೆಯೊಂದಿಗೆ ನೇರ ಸಂಪರ್ಕ ಹೊಂದಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ.
ತನಿಖೆಯನ್ನು ಶ್ರೀನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ. ಜಿ.ವಿ. ಸಂದೀಪ್ ಚಕ್ರವರ್ತಿ ಅವರು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಮೊದಲ ಹಂತದಲ್ಲಿ ಆರಿಫ್ ನಿಸಾರ್ ದಾರ್ (ಅಲಿಯಾಸ್ ಸಾಹಿಲ್), ಯಾಸಿರ್-ಉಲ್-ಅಶ್ರಫ್, ಮಕ್ಸೂದ್ ಅಹ್ಮದ್ ದಾರ್ (ಅಲಿಯಾಸ್ ಶಾಹಿದ್) ಆರೋಪಿಗಳನ್ನು ಬಂಧಿಸಲಾಯಿತು. ನಂತರ ಮೌಲ್ವಿ ಇರ್ಫಾನ್ ಅಹ್ಮದ್ ಸೇರಿದಂತೆ ಇತರರನ್ನೂ ವಶಕ್ಕೆ ಪಡೆಯಲಾಯಿತು.
ಈ ತನಿಖೆಯ ಒಂದು ದೊಡ್ಡ ಯಶಸ್ಸು ಎಂದರೆ , ಆರೋಪಿಗಳ ಮಾಹಿತಿ ಆಧರಿಸಿ ಹರಿಯಾಣದ ಫರಿದಾಬಾದ್‌ನಲ್ಲಿ ಸುಮಾರು 2,900 ಕೆಜಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ದಿನ ದೆಹಲಿಯ ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಕಾರು ಸ್ಫೋಟದ ಹಿನ್ನೆಲೆಯೂ ಈ ಪ್ರಕರಣದೊಂದಿಗೆ ಸಂಬಂಧ ಹೊಂದಿರಬಹುದು ಎಂಬ ಅನುಮಾನ ಇದೆ.
ಈ ಪ್ರಕರಣದಡಿ ಯುಎಪಿಎ ಕಾಯ್ದೆಯ ಸೆಕ್ಷನ್ 13, 16, 17, 18, 18B, 19, 20, 23, 39, 40, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 61(2), 147, 148, 152, 351(2), ಸ್ಫೋಟಕ ಪದಾರ್ಥ ಕಾಯ್ದೆ 4/5 ಹಾಗೂ ಶಸ್ತ್ರಾಸ್ತ್ರ ಕಾಯ್ದೆ 7/25/27 ಅಡಿ ಆರೋಪಗಳನ್ನು ಹಾಕಲಾಗಿದೆ.
ವೈಟ್ ಕಾಲರ್ ಭಯೋತ್ಪಾದನೆ ಎಂದರೇನು?
‘ವೈಟ್ ಕಾಲರ್ ಕ್ರೈಂ’ (White Collar Crime) ಪರಿಕಲ್ಪನೆಯಿಂದ ಪ್ರೇರಿತವಾದ ಈ ಪದವು, ಉನ್ನತ ಶಿಕ್ಷಣ ಪಡೆದ, ವೃತ್ತಿಪರ ಉದ್ಯೋಗದಲ್ಲಿರುವ, ಸಮಾಜದಲ್ಲಿ ಗೌರವಯುತ ಸ್ಥಾನ ಹೊಂದಿರುವ ವ್ಯಕ್ತಿಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದಾಗ ಅದನ್ನು ‘ವೈಟ್ ಕಾಲರ್ ಭಯೋತ್ಪಾದನೆ’ ಎಂದು ಕರೆಯಲಾಗುತ್ತದೆ. ಇವರು ಸಾಮಾನ್ಯವಾಗಿ ಹಣಕಾಸು, ತಂತ್ರಜ್ಞಾನ, ಪ್ರಚಾರ, ಯುವಕರ ರಾಡಿಕಲೈಸೇಶನ್‌ನಲ್ಲಿ ಪಾತ್ರ ವಹಿಸುತ್ತಾರೆ.
ತನಿಖೆ ಇನ್ನೂ ಮುಂದುವರಿದಿದ್ದು, ಈ ಜಾಲದ ಇನ್ನಷ್ಟು ಕೊಂಡಿಗಳು ಬಯಲಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
