ಶ್ರೀಹರಿಕೋಟ, ಜುಲೈ 18: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಾಣವಾಗಿದ್ದು, ದೇಶದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ ‘ವಿಕ್ರಮ್-1′ ಅನ್ನು ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದೆ.
‘ಮಿಷನ್ ಆಗಮನ್’ ಹೆಸರಿನ ಈ ಕಾರ್ಯಾಚರಣೆಯು ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಈ ರಾಕೆಟ್ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಮ್ ಸಾರಾಭಾಯಿ ಅವರ ಗೌರವಾರ್ಥವಾಗಿ ಈ ರಾಕೆಟ್‌ಗೆ ‘ವಿಕ್ರಮ್-1’ ಎಂದು ಹೆಸರಿಡಲಾಗಿದೆ.
ಈ ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಐತಿಹಾಸಿಕ ಕ್ಷಣವಾಗಿದೆ. ಮಿಷನ್ ಯಶಸ್ವಿಯಾಗಿ ಭೂಮಿಯ ಕೆಳ ಕಕ್ಷೆಯನ್ನು (Low Earth Orbit) ತಲುಪಿದರೆ, ಸ್ವಂತ ತಂತ್ರಜ್ಞಾನದಲ್ಲಿ ಖಾಸಗಿ ಸಂಸ್ಥೆಯ ಮೂಲಕ ಬಾಹ್ಯಾಕಾಶಕ್ಕೆ ರಾಕೆಟ್ ಉಡಾಯಿಸಿದ ವಿಶ್ವದ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಲಿದೆ. ಇಂದು ರಾಕೆಟ್ ‘ವಿಕ್ರಮ್-1′ ಅನ್ನು ಬೆಳಗ್ಗೆ 11.30ಕ್ಕೆ ಉಡಾವಣೆ ಮಾಡಲು ಸಮಯ ನಿಗಧಿಯಾಗಿತ್ತು, ಆದರೆ ತಾಂತ್ರಿಕ ಕಾರಣಗಳಿಂದ ಉಡಾವಣೆ ಮುಂದೂಡಿಕೆಯಾಗಿತ್ತು. ಇದೀಗ ಉಡಾವಣೆ ಯಶಸ್ವಿಯಾಗಿದೆ.
‘ವಿಕ್ರಮ್-1’ ವಿಶೇಷತೆಗಳೇನು?
‘ವಿಕ್ರಮ್-1’ ಮೂರು ಹಂತಗಳ (3-Stage) ಅತ್ಯಾಧುನಿಕ ಉಡಾವಣಾ ವಾಹನವಾಗಿದೆ. ಸುಮಾರು 23 ಮೀಟರ್ ಎತ್ತರ ಹಾಗೂ 1.7 ಮೀಟರ್ ವ್ಯಾಸ ಹೊಂದಿರುವ ಈ ರಾಕೆಟ್, 300 ಕೆ.ಜಿ.ವರೆಗೆ ತೂಕದ ಸಣ್ಣ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ನಿಖರವಾಗಿ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.
ರಾಕೆಟ್ ಕಕ್ಷೆ ತಲುಪಲು ಗಂಟೆಗೆ ಸುಮಾರು 28,000 ಕಿಲೋಮೀಟರ್ ವೇಗ ಸಾಧಿಸಬೇಕಾಗುತ್ತದೆ. ಹಂತಗಳ ಬೇರ್ಪಡಿಕೆ, ಸಂಚರಣೆ ಹಾಗೂ ನಿಯಂತ್ರಣ ಸೇರಿದಂತೆ ಪ್ರತಿಯೊಂದು ಪ್ರಕ್ರಿಯೆಯೂ ಅತ್ಯಂತ ನಿಖರತೆಯಿಂದ ನಡೆಯಬೇಕಿರುವುದರಿಂದ ಇದು ಬಾಹ್ಯಾಕಾಶ ವಿಜ್ಞಾನದ ಅತ್ಯಂತ ಸಂಕೀರ್ಣ ಸಾಧನೆಗಳಲ್ಲಿ ಒಂದಾಗಿದೆ.
ಇಸ್ರೋ ಮಾಜಿ ವಿಜ್ಞಾನಿಗಳ ಕನಸಿನ ಫಲ
ಈ ಸಾಧನೆಯ ಹಿಂದೆ ಇಸ್ರೋದ ಮಾಜಿ ವಿಜ್ಞಾನಿಗಳಾದ ಪವನ್ ಚಂದ್ನಾ ಹಾಗೂ ನಾಗಾ ಭರತ್ ಡಾಕಾ ಅವರ ಪರಿಶ್ರಮವಿದೆ. ಇವರು 2018ರಲ್ಲಿ ಇಸ್ರೋ ತೊರೆದು ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯನ್ನು ಆರಂಭಿಸಿದ್ದರು. 2022ರಲ್ಲಿ ‘ವಿಕ್ರಮ್-ಎಸ್’ ಉಪ-ಕಕ್ಷೆಯ ರಾಕೆಟ್ ಯಶಸ್ವಿಯಾಗಿ ಉಡಾಯಿಸಿದ ಬಳಿಕ ಇದೀಗ ‘ವಿಕ್ರಮ್-1’ ಮೂಲಕ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಇಂದು ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ಮೌಲ್ಯ 1.1 ಬಿಲಿಯನ್ ಡಾಲರ್‌ಗಿಂತಲೂ ಅಧಿಕವಾಗಿದೆ. ಈ ಬೆಳವಣಿಗೆಯಲ್ಲಿ ಇಸ್ರೋ ತನ್ನ ಉಡಾವಣಾ ಕೇಂದ್ರ, ತಾಂತ್ರಿಕ ನೆರವು ಹಾಗೂ ಪರೀಕ್ಷಾ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಬಲ ತುಂಬಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಹೊಸ ಅವಕಾಶ
ಜಗತ್ತಿನಲ್ಲಿ ಸಣ್ಣ ಉಪಗ್ರಹಗಳ ಉಡಾವಣೆಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಡಿಮೆ ವೆಚ್ಚದಲ್ಲಿ ಮತ್ತು ವೇಗವಾಗಿ ಉಡಾವಣೆ ಮಾಡುವ ಸಾಮರ್ಥ್ಯ ಭಾರತಕ್ಕೆ ದೊಡ್ಡ ಸ್ಪರ್ಧಾತ್ಮಕ ಮುನ್ನಡೆ ನೀಡಲಿದೆ. ಈ ಮಿಷನ್ ಯಶಸ್ವಿಯಾದರೆ ಭಾರತ ಜಾಗತಿಕ ವಾಣಿಜ್ಯ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಮತ್ತಷ್ಟು ಪ್ರಭಾವ ಬೀರುವ ಸಾಧ್ಯತೆ ಇದೆ.
ಮುಂದಿನ ಹಂತದಲ್ಲಿ ಮರುಬಳಕೆ ಮಾಡಬಹುದಾದ ರಾಕೆಟ್‌ಗಳು ಹಾಗೂ ಹ್ಯೂಮನ್ ಸ್ಪೇಸ್‌ಫ್ಲೈಟ್ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಗುರಿಯನ್ನು ಸ್ಕೈರೂಟ್ ಹೊಂದಿದೆ. ಇದು ದೇಶದ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುವುದರ ಜೊತೆಗೆ ಯುವ ಇಂಜಿನಿಯರ್‌ಗಳಿಗೆ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.