ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಬಣದಲ್ಲಿ ಮತ್ತೊಂದು ಬಿರುಕು ಮೂಡುವ ಸಾಧ್ಯತೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ.
4 ವರ್ಷಗಳ ಹಿಂದೆ ಶಿವಸೇನೆಯಲ್ಲಿ ನಡೆದ ದೊಡ್ಡ ಮಟ್ಟದ ಬಂಡಾಯದಿಂದ ಶಿವಸೇನೆ ಪಕ್ಷ ಎರಡು ಬಣಗಳಾಗಿ ವಿಭಜನೆಯಾಗಿತ್ತು. ಏಕನಾಥ್ ಶಿಂಧೆ ನೇತೃತ್ವದಲ್ಲಿ ಹಲವು ಶಾಸಕರು ಬಂಡಾಯ ಎದ್ದು ಅಂದಿನ ಸರ್ಕಾರವನ್ನು ಪತನಗೊಳಿಸಿದ್ದರು. ನಂತರ ಶಿಂಧೆ ಬಣವು ಬಿಜೆಪಿ ಜೊತೆಗೂಡಿ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚಿಸಿತ್ತು.
ಇದೀಗ ಅದೇ ರೀತಿಯ ಬೆಳವಣಿಗೆ ಮತ್ತೊಮ್ಮೆ ನಡೆಯುವ ಸಾಧ್ಯತೆ ಇದೆ ಎಂಬ ವದಂತಿಗಳು ಹರಿದಾಡುತ್ತಿವೆ. ಶಿವಸೇನೆಯ ಹಿರಿಯ ನಾಯಕ ನಿತಿನ್ ತಿವಾರಿ ಸೇರಿದಂತೆ 14 ರಿಂದ 16 ಶಾಸಕರು ಹಾಗೂ 7 ಸಂಸದರು ಉದ್ಧವ್ ಠಾಕ್ರೆ ಬಣ ತೊರೆಯಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಈ ಬೆಳವಣಿಗೆಯನ್ನು ಕೆಲವರು ‘ಆಪರೇಷನ್ ಟೈಗರ್’ ಎಂದು ಕರೆಯುತ್ತಿದ್ದಾರೆ.
ಮೂಲಗಳ ಪ್ರಕಾರ, ಮುಂದಿನ ಕೆಲ ದಿನಗಳಲ್ಲಿ ಮಹತ್ವದ ರಾಜಕೀಯ ಬದಲಾವಣೆ ಸಂಭವಿಸಬಹುದು ಎನ್ನಲಾಗುತ್ತಿದೆ. ಪಕ್ಷ ತೊರೆಯುವ ನಾಯಕರು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣದತ್ತ ಸಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ವದಂತಿಗಳ ಬೆನ್ನಲ್ಲೇ ಉದ್ಧವ್ ಠಾಕ್ರೆ ಎಚ್ಚೆತ್ತುಕೊಂಡಿದ್ದು, ತಮ್ಮ ನಿವಾಸ ‘ಮಾತೋಶ್ರೀ’ಯಲ್ಲಿ ತುರ್ತು ಸಭೆ ಕರೆದಿದ್ದಾರೆ. ಯುಬಿಟಿ ಬಣದ 9 ಲೋಕಸಭಾ ಸಂಸದರು ಸೇರಿದಂತೆ ಪ್ರಮುಖ ನಾಯಕರೊಂದಿಗೆ ಠಾಕ್ರೆ ಚರ್ಚೆ ನಡೆಸಿದ್ದಾರೆ. ಪಕ್ಷದ ಬಲ ಹಾಗೂ ಮುಂದಿನ ರಾಜಕೀಯ ತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದೆ.
ಇದರ ನಡುವೆ ಶಿಂಧೆ ಬಣದ ನಾಯಕರು ಕೂಡ ಸ್ಪಷ್ಟನೆ ನೀಡಿದ್ದು, ಕೆಲವು ನಾಯಕರ ಭೇಟಿಗಳು ಸಾಮಾನ್ಯ ರಾಜಕೀಯ ಸಂಪರ್ಕದ ಭಾಗವಾಗಿರಬಹುದು. ಭೇಟಿಯಾದ ಮಾತ್ರಕ್ಕೆ ಪಕ್ಷ ಬದಲಾವಣೆ ಎಂದರ್ಥವಲ್ಲ ಎಂದು ತಿಳಿಸಿದ್ದಾರೆ.
ಆದರೆ ಠಾಕ್ರೆ ಕುಟುಂಬ ಮತ್ತು ಪಕ್ಷದ ಪ್ರಮುಖ ನಾಯಕತ್ವದ ಬಗ್ಗೆ ಕೆಲ ಸಂಸದರು ಹಾಗೂ ಶಾಸಕರಲ್ಲಿ ಅಸಮಾಧಾನ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಅಸಮಾಧಾನ ಮುಂದಿನ ದಿನಗಳಲ್ಲಿ ದೊಡ್ಡ ಬಂಡಾಯಕ್ಕೆ ಕಾರಣವಾಗುತ್ತದೆಯೇ ಎಂಬುದು ಮಹಾರಾಷ್ಟ್ರ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಮುಂಗಾರು ಅಧಿವೇಶನಕ್ಕೂ ಮುನ್ನ ಶಿವಸೇನೆಯೊಳಗಿನ ಈ ಬೆಳವಣಿಗೆಗಳು ಯಾವ ತಿರುವು ಪಡೆಯುತ್ತವೆ ಎಂಬುದನ್ನು ರಾಜಕೀಯ ವೀಕ್ಷಕರು ಗಮನಿಸುತ್ತಿದ್ದಾರೆ.
