ತಿರುಪತಿ ಲಡ್ಡು ವಿವಾದ: ಕಲಬೆರಕೆ ತುಪ್ಪದಿಂದ ಸುಮಾರು 20 ಕೋಟಿ ಲಡ್ಡು ವಿತರಣೆ..!

Untitled design (47)

ಅಮರಾವತಿ: ತಿರುಮಲ ತಿರುಪತಿ ದೇವಸ್ಥಾನಕ್ಕೆ (TTD) ಭಕ್ತರು ತಲುಪಿಸಿದ ಹುಂಡಿಯಲ್ಲಿರುವ ಹಣದಿಂದಲೇ ತಯಾರಾದ ಪ್ರಸಿದ್ಧ ಶ್ರೀವಾರಿ ಲಡ್ಡುಗಳಲ್ಲಿ ಕಲಬೆರಕೆ ತುಪ್ಪ ಬಳಕೆಯಾಗಿದ್ದ ವಿಚಾರ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. 2019–2024ರ ಅವಧಿಯಲ್ಲಿ ಒಟ್ಟು 48.76 ಕೋಟಿ ಲಡ್ಡುಗಳು ಭಕ್ತರಿಗೆ ವಿತರಣೆಯಾಗಿದ್ದು, ಇದರಲ್ಲಿ ಸುಮಾರು 20 ಕೋಟಿ ಲಡ್ಡುಗಳು ಕಲಬೆರಕೆ ತುಪ್ಪದಿಂದ ತಯಾರಾಗಿದ್ದವು ಎಂಬ ಅಂದಾಜು TTD ಟ್ರಸ್ಟ್ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಬಹಿರಂಗಪಡಿಸಿದ್ದಾರೆ.

ಈ ಐದು ವರ್ಷಗಳಲ್ಲಿ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ ಸುಮಾರು 11 ಕೋಟಿ. ಪ್ರಸಾದದ ಪ್ಯಾಕೆಟ್‌ಗಳ ಮೇಲೆ ತಯಾರಿಕಾ ದಿನಾಂಕ ಅಥವಾ ಬ್ಯಾಚ್ ಸಂಖ್ಯೆ ಇರುತ್ತಿರಲಿಲ್ಲ. ಹೀಗಾಗಿ ಯಾವ ಭಕ್ತರಿಗೆ ಕಲಬೆರಕೆ ತುಪ್ಪದ ಲಡ್ಡು ಸಿಕ್ಕಿತು, ಯಾರಿಗೆ ಶುದ್ಧ ತುಪ್ಪದ ಲಡ್ಡು ಸಿಕ್ಕಿತು ಎಂಬುದನ್ನು ಗುರುತಿಸುವುದೇ ಅಸಾಧ್ಯವಾಗಿದೆ ಎಂದು TTD ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.

ಕಲಬೆರಕೆಯ ವ್ಯಾಪ್ತಿ

ಕಳೆದ ವರ್ಷ ಈ ವಿಚಾರ ಬೆಳಕಿಗೆ ಬಂದ ನಂತರ ಆಂಧ್ರಪ್ರದೇಶ ಸರ್ಕಾರ ಕೇಂದ್ರ ತನಿಖಾ ದಳದ (CBI) ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ಆರಂಭಿಸಿದೆ. ಈಗಾಗಲೇ ಭೋಲೆ ಬಾಬಾ ಡೈರಿಯ ಮಾಲೀಕ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ತುಪ್ಪ ಪೂರೈಕೆದಾರರ ಜೊತೆಗೆ TTDಯ ಕೆಲವು ಅಧಿಕಾರಿಗಳೂ ತನಿಖೆಯ ವ್ಯಾಪ್ತಿಗೆ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಿರುಪತಿ ಲಡ್ಡು ಭಾರತದಾದ್ಯಂತ ಭಕ್ತಿಯ ಸಂಕೇತವಾಗಿದ್ದು, ಇದಕ್ಕೆ ಕಲಬೆರಕೆ ಮಾಡಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇ ದೇಶಾದ್ಯಂತ ಭಕ್ತರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದು ಭಕ್ತರ ಭಾವನೆಗೆ ದಕ್ಕೆಯಾಗಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ತ್ತುಪ್ಪ ಖರೀದಿ ನಡೆದಿದ್ದರಿಂದ ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ.

TTD ಅಧ್ಯಕ್ಷ ಬಿ.ಆರ್. ನಾಯ್ಡು, ಈಗಿನ ಟ್ರಸ್ಟ್ ಮಂಡಳಿ ಅಧಿಕಾರಕ್ಕೆ ಬಂದ ತಕ್ಷಣ ಗುಣಮಟ್ಟದ ತಪಾಸಣೆ ಆರಂಭಿಸಿ ಕಲಬೆರಕೆ ಪತ್ತೆ ಮಾಡಿದೆ. ಈಗ 100% ಶುದ್ಧ ನಂದಿನಿ ತುಪ್ಪ ಬಳಸಲಾಗುತ್ತಿದೆ. ಭವಿಷ್ಯದಲ್ಲಿ ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Exit mobile version