ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಸೋಮವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ಘಟನೆಯಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಹಲವರಿಗೆ ಗಂಭೀರ ಗಾಯಗಳಾಗಿದ್ದು, ರಂಗಾರೆಡ್ಡಿ ಜಿಲ್ಲೆಯ ಚೇಬಳ್ಳ ತಾಲೂಕಿನ ಮಿರ್ಜಾಗೂಡ ಗ್ರಾಮದ ಬಳಿ ಈ ಘಟನೆ ನಡೆದಿದೆ. ಸರ್ಕಾರಿ ಬಸ್ ಮೇಲೆ ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್ ಲಾರಿಯೊಂದು ಮಗುಚಿಬಿದ್ದ ಪರಿಣಾಮ ಅಪಘಾತ ಸಂಭವಿಸಿದೆ.
ಈ ಬಸ್‌ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರು ಇದ್ದರು. ಬಸ್ ಮೇಲೆಗೆ ಜಲ್ಲಿಕಲ್ಲುಗಳಿಂದ ತುಂಬಿದ್ದ ಟಿಪ್ಪರ್ ಬಿದ್ದು ಬಸ್‌ನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಸ್ಥಳದಲ್ಲಿಯೇ ಹಲವರು ಸಾವನ್ನಪ್ಪಿದ್ದರೆ, ಮತ್ತಷ್ಟು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಬುಲ್ಡೋಜರ್ ಮತ್ತು ಕ್ರೇನ್‌ಗಳ ಸಹಾಯದಿಂದ ಟಿಪ್ಪರ್‌ನಡಿ ಸಿಕ್ಕಿಬಿದ್ದ ಬಸ್ ಪ್ರಯಾಣಿಕರನ್ನು ಹೊರತೆಗೆದರು. ಗಾಯಾಳುಗಳನ್ನು ಹೈದರಾಬಾದ್‌ನ ಒಸ್ಮಾನಿಯಾ ಆಸ್ಪತ್ರೆ ಹಾಗೂ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
