‘ಟೆಂಡರ್‌ಗಳಲ್ಲಿ ಕಮಿಷನ್‌ ಕೇಳ್ತಿದ್ದಾರೆ’: ಸಿಎಂ ವಿಜಯ್ ಸರ್ಕಾರದ ವಿರುದ್ಧ ಅಣ್ಣಾಮಲೈ ಭ್ರಷ್ಟಾಚಾರ ಬಾಂಬ್‌!

Untitled design (89)
ತಮಿಳುನಾಡು ರಾಜಕಾರಣದಲ್ಲಿ ನಟ ಹಾಗೂ ರಾಜಕಾರಣಿ ಸಿ. ಜೋಸೆಫ್ ವಿಜಯ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಭ್ರಷ್ಟಾಚಾರದ ದೊಡ್ಡ ಆರೋಪವನ್ನು ಎದುರಿಸುವಂತಾಗಿದೆ. ಮುಖ್ಯಮಂತ್ರಿ ವಿಜಯ್ ಅವರು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಪದೇ ಪದೇ ಘೋಷಿಸುತ್ತಿದ್ದರೂ, ಅವರ ಸಂಪುಟದ ಸಚಿವರುಗಳೇ ಕಮಿಷನ್ ದಂಧೆಗೆ ಇಳಿದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರು ವಿಜಯ್ ಸರ್ಕಾರದ ಸಚಿವರ ವಿರುದ್ಧವೇ ನೇರ ವಾಗ್ದಾಳಿ ನಡೆಸುವ ಮೂಲಕ ತಮಿಳುನಾಡು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದ್ದಾರೆ.
ಚೆನ್ನೈನಲ್ಲಿ ʻವೀ ದಿ ಲೀಡರ್ಸ್ʼ ಸಂಘಟನೆ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ. ಅಣ್ಣಾಮಲೈ, ಹೊಸ ಸರ್ಕಾರದ ಸಚಿವರುಗಳ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. “ಮುಖ್ಯಮಂತ್ರಿ ವಿಜಯ್ ಅವರು ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು ಹೊಂದಿದ್ದಾರೆ ಮತ್ತು ಪ್ರಾಮಾಣಿಕ ಆಡಳಿತ ನೀಡಲು ಬಯಸುತ್ತಿದ್ದಾರೆ ಎಂಬುದು ಸತ್ಯ. ಈ ಹಿಂದೆ ಟೆಂಡರ್‌ಗಳಲ್ಲಿ ಕಿಕ್‌ಬ್ಯಾಕ್‌ ಪಡೆಯುವ ಪದ್ಧತಿ ಇರಲಿಲ್ಲ. ಆದರೆ, ಈಗ ವಿಜಯ್ ಅವರ ಸಂಪುಟದಲ್ಲಿರುವ ಕೆಲವು ಸಚಿವರು ಸರ್ಕಾರಿ ಟೆಂಡರ್‌ಗಳನ್ನು ಮಂಜೂರು ಮಾಡಲು ಗುತ್ತಿಗೆದಾರರಿಂದ ಶೇಕಡಾ 2%, 3% ಮತ್ತು 4% ರಷ್ಟು ಕಮಿಷನ್‌ ಕೇಳಲು ಆರಂಭಿಸಿದ್ದಾರೆ,” ಎಂದು ಅಣ್ಣಾಮಲೈ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಆರೋಪ ಕೇವಲ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸವಲ್ಲ ಎಂದು ಸ್ಪಷ್ಟಪಡಿಸಿದ ಅಣ್ಣಾಮಲೈ, ಕಮಿಷನ್ ಕೇಳುತ್ತಿರುವ ಸಚಿವರ ವಿರುದ್ಧ ತಮ್ಮ ಬಳಿ ಆಡಿಯೋ ರೆಕಾರ್ಡಿಂಗ್ ಸಾಕ್ಷ್ಯವಿದೆ ಎಂದು ಹೇಳಿದ್ದಾರೆ. ಸಚಿವರು ಗುತ್ತಿಗೆದಾರರ ಬಳಿ, “ನಾವು ಚುನಾವಣೆಯಲ್ಲಿ ಮತಗಳಿಗಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಗೆದ್ದು ಬಂದಿದ್ದೇವೆ. ಹಾಗಾಗಿ ನಮಗೆ ಇಷ್ಟು ಪರ್ಸಂಟೇಜ್ ಕಮಿಷನ್‌ ಕೊಡಲೇಬೇಕು” ಎಂದು ಬೇಡಿಕೆ ಇಡುತ್ತಿರುವುದು ಆಡಿಯೋದಲ್ಲಿ ದಾಖಲಾಗಿದೆ ಎಂದಿದ್ದಾರೆ. ಆದರೆ ರಾಜತಾಂತ್ರಿಕ ನಡೆ ಇಟ್ಟ ಅವರು, ಸದ್ಯಕ್ಕೆ ಸಚಿವರ ಹೆಸರುಗಳನ್ನಾಗಲಿ ಅಥವಾ ಆಡಿಯೋ ಕ್ಲಿಪ್ ಅನ್ನಾಗಲಿ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ.
ಇತ್ತೀಚಿನ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮುಖ್ಯಮಂತ್ರಿ ವಿಜಯ್ ಅವರು, ʻನಮ್ಮ ಜೀವಿತಾವಧಿಯಲ್ಲೇ ತಮಿಳುನಾಡಿನಿಂದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದುʼ ಎಂದು ಭರವಸೆ ನೀಡಿದ್ದರು. ಇದನ್ನು ನೆನಪಿಸಿದ ಅಣ್ಣಾಮಲೈ, “ಮುಖ್ಯಮಂತ್ರಿಗಳು ಕೇವಲ ಭಾಷಣ ಮಾಡಿದರೆ ಸಾಲದು, ತಮ್ಮ ಸಚಿವರು ಮತ್ತು ಅಧಿಕಾರಿಗಳ ಮೇಲೆ ತಕ್ಷಣವೇ ನಿಯಂತ್ರಣ ಬಿಗಿಗೊಳಿಸಬೇಕು. ಸಚಿವರು ಮತ್ತು ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ಮುಖ್ಯಮಂತ್ರಿಗಳು ಪ್ರತಿ ವಾರಾಂತ್ಯದಲ್ಲಿ ನಿಯಮಿತ ಸಭೆಗಳನ್ನು ನಡೆಸಬೇಕು” ಎಂದು ಸಲಹೆ ನೀಡಿದ್ದಾರೆ.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರವನ್ನು ತಕ್ಷಣವೇ ಅಸ್ಥಿರಗೊಳಿಸುವ ಅಥವಾ ಮುಜುಗರಕ್ಕೀಡುಮಾಡುವ ಉದ್ದೇಶ ತಮಗಿಲ್ಲ ಎಂದು ಅಣ್ಣಾಮಲೈ ತಿಳಿಸಿದ್ದಾರೆ. ಹೊಸ ಸರ್ಕಾರಕ್ಕೆ ಕೆಲಸ ಮಾಡಲು ಸೂಕ್ತ ಸಮಯ ನೀಡಬೇಕು ಎಂಬುದು ವಿರೋಧ ಪಕ್ಷಗಳ ಆಶಯವಾಗಿದೆ. ಆದರೆ ಆರಂಭದಲ್ಲೇ ನಿಯಂತ್ರಣ ಸಡಿಲವಾದರೆ ಇಡೀ ಆಡಳಿತ ವ್ಯವಸ್ಥೆ ದಿಕ್ಕುತಪ್ಪುತ್ತದೆ. ಹೀಗಾಗಿ ಮುಖ್ಯಮಂತ್ರಿ ವಿಜಯ್ ಅವರು ಈ ಕಮಿಷನ್ ದಂಧೆಗೆ ಆರಂಭದಲ್ಲೇ ಬ್ರೇಕ್ ಹಾಕುತ್ತಾರಾ ಅಥವಾ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
Exit mobile version