ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ, ಗಾಯಗೊಂಡ ಹಾಗೂ ನಾಪತ್ತೆಯಾಗಿರುವ ಭಾರತೀಯ ನಾಗರಿಕರ ಕುಟುಂಬಗಳಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ವಿದೇಶಾಂಗ ಸಚಿವಾಲಯ (MEA) ತಕ್ಷಣವೇ ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಿ, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಮಾಹಿತಿ ಮತ್ತು ನೆರವು ತ್ವರಿತವಾಗಿ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಯುದ್ಧದಲ್ಲಿ ಸಿಲುಕಿರುವ ಭಾರತೀಯರ ಕುಟುಂಬಗಳು ಮಾಹಿತಿ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಅವರಿಗೆ ಸ್ಥಳೀಯ ಭಾಷೆಯಲ್ಲಿಯೇ ಸಂಪೂರ್ಣ ಮಾಹಿತಿ ನೀಡಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಯುದ್ಧದಲ್ಲಿ ಮೃತಪಟ್ಟ ಭಾರತೀಯರ ಗುರುತು ಪತ್ತೆ ಮಾಡಲು ಅಗತ್ಯವಿದ್ದಲ್ಲಿ ಕುಟುಂಬಸ್ಥರ ಡಿಎನ್‌ಎ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕು. ಮೃತದೇಹಗಳನ್ನು ಭಾರತಕ್ಕೆ ತರಿಸುವುದು ಅಥವಾ ವಿದೇಶದಲ್ಲಿಯೇ ಅಂತ್ಯಕ್ರಿಯೆ ನಡೆಸುವ ಪ್ರಕ್ರಿಯೆಯಲ್ಲಿ ಯಾವುದೇ ಹಣಕಾಸಿನ ಅಥವಾ ಆಡಳಿತಾತ್ಮಕ ವಿಳಂಬ ಉಂಟಾಗಬಾರದು ಎಂದು ಕೋರ್ಟ್ ಸೂಚಿಸಿದೆ. ಪರಿಹಾರ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕುಟುಂಬಗಳನ್ನು ಕಾಯಿಸುವಂತಿಲ್ಲ ಎಂದು ನ್ಯಾಯಪೀಠ ಒತ್ತಿ ಹೇಳಿದೆ.
ಇದೇ ವೇಳೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು ಸಂತ್ರಸ್ತ ಕುಟುಂಬಗಳಿಗೆ ಉಚಿತ ಕಾನೂನು ನೆರವು ಒದಗಿಸಬೇಕು. ರಷ್ಯಾ ಸರ್ಕಾರ ಅಥವಾ ಸೇನೆಯಿಂದ ದೊರೆಯುವ ಪರಿಹಾರ ಪಡೆಯಲು ಬೇಕಾದ ದಾಖಲೆಗಳ ಸಿದ್ಧತೆ ಮತ್ತು ಅರ್ಜಿ ಸಲ್ಲಿಕೆಯಲ್ಲಿ ಸಹಾಯ ಮಾಡುವ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ.
ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಕ ಪರಿಹಾರ ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ‘ಏಕೀಕೃತ ಮಾರ್ಗದರ್ಶಿ ಡಾಕೆಟ್’ ಸಿದ್ಧಪಡಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಸೂಚಿಸಲಾಗಿದೆ. ಅಲ್ಲದೆ, ರಷ್ಯನ್ ಭಾಷೆಯಲ್ಲಿ ಬರುವ ಅಧಿಕೃತ ದಾಖಲೆಗಳನ್ನು ಹಿಂದಿ ಮತ್ತು ಸಂಬಂಧಿತ ರಾಜ್ಯಗಳ ಸ್ಥಳೀಯ ಭಾಷೆಗಳಿಗೆ ಅನುವಾದಿಸಿ ಕುಟುಂಬಗಳಿಗೆ ತಲುಪಿಸುವ ಜವಾಬ್ದಾರಿಯನ್ನೂ ಎಂಇಎಗೆ ನೀಡಲಾಗಿದೆ.
2024 ಮತ್ತು 2025ರ ಅವಧಿಯಲ್ಲಿ ಉದ್ಯೋಗದ ಭರವಸೆ ನೀಡಿ ಹಲವಾರು ಭಾರತೀಯ ಯುವಕರನ್ನು ರಷ್ಯಾಕ್ಕೆ ಕರೆದೊಯ್ಯಲಾಗಿತ್ತು. ಭದ್ರತಾ ಸಿಬ್ಬಂದಿ, ನಿರ್ಮಾಣ ಹಾಗೂ ಸೇವಾ ವಲಯಗಳಲ್ಲಿ ಕೆಲಸ ಸಿಗಲಿದೆ ಎಂದು ನಂಬಿಸಿದ್ದ ಖಾಸಗಿ ಏಜೆಂಟ್‌ಗಳು, ರಷ್ಯಾ ತಲುಪಿದ ಬಳಿಕ ಅವರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡು, ಬಲವಂತವಾಗಿ ರಷ್ಯಾ ಸೇನೆಗೆ ಸೇರಿಸಿ ಯುದ್ಧಭೂಮಿಗೆ ಕಳುಹಿಸಿದ್ದರೆಂಬ ಆರೋಪ ಕೇಳಿಬಂದಿತ್ತು.
ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಚರ್ಚಿಸಿದ್ದ ಪರಿಣಾಮ ಅನೇಕ ಭಾರತೀಯರನ್ನು ವಾಪಸ್ ಕರೆತರಲಾಗಿತ್ತು. ಆದಾಗ್ಯೂ, ಇನ್ನೂ ಕೆಲವರು ನಾಪತ್ತೆಯಾಗಿದ್ದು, ಕೆಲವರು ಯುದ್ಧದಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರ ಕುಟುಂಬಗಳಿಗೆ ನ್ಯಾಯ ಹಾಗೂ ನೆರವು ದೊರಕಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈ ಮಹತ್ವದ ನಿರ್ದೇಶನಗಳನ್ನು ನೀಡಿದೆ.
