ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ಬಿ.ಆರ್.ಗವಾಯಿ ಮೇಲೆ ಶೂ ಎಸೆತ: ವಕೀಲನ ಕೃತ್ಯಕ್ಕೆ ಮೋದಿ ಖಂಡನೆ

Untitled design 2025 10 06t231055.080

ನವದೆಹಲಿ, ಅಕ್ಟೋಬರ್ 06: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಖಂಡಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಸಿಜೆಐ ಗವಾಯಿ ಅವರಿಗೆ ದೂರವಾಣಿ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಮೋದಿ, ಸುಪ್ರೀಂ ಕೋರ್ಟ್‌ನಲ್ಲಿ ಇಂದು ನಡೆದ ಘಟನೆ ಎಲ್ಲ ಭಾರತೀಯರನ್ನು ಕೆರಳಿಸಿದೆ. ನಮ್ಮ ಸಮಾಜದಲ್ಲಿ ಇಂತಹ ಖಂಡನೀಯ ಕೃತ್ಯಗಳಿಗೆ ಯಾವುದೇ ಸ್ಥಾನವಿಲ್ಲ. ಈ ಸಂದರ್ಭದಲ್ಲಿ ಸಿಜೆಐ ಗವಾಯಿ ತೋರಿದ ಶಾಂತತೆ ಮತ್ತು ಸಂಯಮವು ನ್ಯಾಯದ ಮೌಲ್ಯಗಳಿಗೆ ಅವರ ನಿಷ್ಠೆಯನ್ನ ತೋರಿಸುತ್ತದೆ.

ಇಂದು ಬೆಳಿಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಎಂದಿನಂತೆ ವಿಚಾರಣೆ ಆರಂಭವಾಗಿತ್ತು. ಕೆಲವು ಕಲಾಪಗಳು ನಡೆಯುತ್ತಿದ್ದಾಗ, 71 ವರ್ಷದ ವಕೀಲ ರಾಕೇಶ್ ಕಿಶೋರ್ ಎಂಬಾತ “ಸನಾತನ ಧರ್ಮಕ್ಕೆ ಅಪಮಾನವಾದರೆ ಸಹಿಸಲ್ಲ” ಎಂದು ಘೋಷಣೆ ಕೂಗಿ, ಸಿಜೆಐ ಬಿ.ಆರ್. ಗವಾಯಿ ಅವರ ಪೀಠದ ಕಡೆಗೆ ಶೂ ಎಸೆದಿದ್ದಾನೆ. ಆದರೆ, ಶೂ ಗವಾಯಿ ಅವರಿಗೆ ತಾಗದೆ, ಪೀಠದಿಂದ ಕೆಲವು ಅಡಿ ದೂರದಲ್ಲಿ ಬಿದ್ದಿದೆ. ಈ ಘಟನೆಯಿಂದ ಸಿಜೆಐ ಗವಾಯಿ ವಿಚಲಿತರಾಗದೆ, ಇಂತಹ ಕೃತ್ಯಗಳಿಂದ ನಾನು ವಿಚಲಿತನಾಗುವುದಿಲ್ಲ. ಇವು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶಾಂತವಾಗಿ ಹೇಳಿದರು. ಅಲ್ಲದೆ, ಉಳಿದ ವಕೀಲರಿಗೆ ತಮ್ಮ ವಾದ ಮಂಡನೆಯನ್ನು ಮುಂದುವರಿಸುವಂತೆ ಸೂಚಿಸಿದರು. ಗವಾಯಿ ಅವರ ಈ ಸಂಯಮದ ಕ್ರಮವನ್ನು ಪ್ರಧಾನಮಂತ್ರಿ ಮೋದಿ ಸೇರಿದಂತೆ ಹಲವರು ಶ್ಲಾಘಿಸಿದ್ದಾರೆ.

Exit mobile version