ರಾಮಮಂದಿರ ದೇಣಿಗೆ ಹಣ ವಂಚನೆ ಪ್ರಕರಣ: ಇಂದು ಮಹತ್ವದ ಸಭೆ

Web Photo Editor (96)

ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ಮತ್ತು ಲೂಟಿ ಆರೋಪ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮಹತ್ವದ ಸಭೆ ಸೋಮವಾರ ನಡೆಯಲಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ದೇಣಿಗೆ ಹಾಗೂ ಕಾಣಿಕೆಗಳ ದುರ್ಬಳಕೆ ಆರೋಪದ ಹಿನ್ನೆಲೆ, ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ಭವಿಷ್ಯ ಈ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ.

ಟ್ರಸ್ಟ್‌ನ ಕಾಯಂ ಸದಸ್ಯರು ಹಾಗೂ ಪದನಿಮಿತ್ತ ಸದಸ್ಯರು ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸುವಂತೆ ಸೂಚಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಮತ್ತು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ಟ್ರಸ್ಟಿ ಕೆ. ಪರಾಶರನ್ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಸಭೆಯಲ್ಲಿ ಮುಖ್ಯವಾಗಿ ವಿಶೇಷ ತನಿಖಾ ತಂಡ (SIT) ನೀಡಿರುವ ಮಧ್ಯಂತರ ವರದಿಯ ಅಂಶಗಳ ಬಗ್ಗೆ ಚರ್ಚೆ ನಡೆಯಲಿದೆ. ದೇಣಿಗೆ ಹಾಗೂ ಕಾಣಿಕೆಗಳ ನಿರ್ವಹಣೆಯಲ್ಲಿ ಉಂಟಾಗಿರುವ ಅವ್ಯವಹಾರಗಳ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಟ್ರಸ್ಟ್, ಆಡಳಿತಾತ್ಮಕ ಬದಲಾವಣೆಗಳಿಗೂ ಮುಂದಾಗುವ ಸಾಧ್ಯತೆ ಇದೆ. ಟ್ರಸ್ಟ್‌ನ ಆಡಳಿತ ನಿರ್ವಹಣೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇಮಕ, ದೇವಾಲಯದ ದೈನಂದಿನ ವ್ಯವಸ್ಥಾಪನೆಗೆ ಹೊಸ ಆಡಳಿತಾತ್ಮಕ ರಚನೆ ರೂಪಿಸುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಯುವ ನಿರೀಕ್ಷೆಯಿದೆ.

ಇದರ ಜೊತೆಗೆ 2025-26ನೇ ಹಣಕಾಸು ವರ್ಷದ ಲೆಕ್ಕಪರಿಶೋಧನೆ ಆಗದ ಆದಾಯ-ವೆಚ್ಚದ ಹೇಳಿಕೆ, ಆಯವ್ಯಯ ಪಟ್ಟಿ ಹಾಗೂ ಇತರೆ ಹಣಕಾಸು ದಾಖಲೆಗಳನ್ನು ಅನುಮೋದನೆಗಾಗಿ ಸಭೆಯಲ್ಲಿ ಮಂಡಿಸಲಾಗುವುದು ಎನ್ನಲಾಗಿದೆ. ಈ ನಡುವೆ ಎಸ್‌ಐಟಿ ತನಿಖೆಯಲ್ಲಿ ಕೆಲವು ಅಚ್ಚರಿಯ ಸಂಗತಿಗಳೂ ಹೊರಬಿದ್ದಿವೆ. ಬಂಧಿತರಲ್ಲಿ ಒಬ್ಬರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರೆ, ಮತ್ತೊಬ್ಬರು ಕಾರು ಮೆಕ್ಯಾನಿಕ್ ಮತ್ತು ಇನ್ನೊಬ್ಬರು ಬ್ಯಾಂಕ್‌ನ ನಿವೃತ್ತ ನೌಕರರಾಗಿದ್ದಾರೆ. ಇವರು ಭಕ್ತರು ನೀಡಿದ ದೇಣಿಗೆ ಮತ್ತು ಕಾಣಿಕೆಗಳನ್ನು ನಿರ್ವಹಿಸುವ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ.

ಪ್ರಕರಣಕ್ಕೆ ಹೊಸ ತಿರುವು ನೀಡುವಂತೆ, ರಾಮ ಮಂದಿರಕ್ಕೆ ಕಾಣಿಕೆಯಾಗಿ ನೀಡಲಾಗಿದ್ದ 5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಲೇಪಿತ ‘ರಾಮಚರಿತ ಮಾನಸ’ ಕೃತಿ ನಾಪತ್ತೆಯಾಗಿರುವ ಶಂಕೆಯೂ ವ್ಯಕ್ತವಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಎಸ್. ಲಕ್ಷ್ಮಿನಾರಾಯಣ ಅವರು, ತಮ್ಮ ಕುಟುಂಬದಿಂದ ಟ್ರಸ್ಟ್‌ಗೆ ಕಾಣಿಕೆಯಾಗಿ ನೀಡಲಾಗಿದ್ದ ಆ ಕೃತಿ ದೇವಾಲಯದಿಂದ ಹೊರಗೆ ಸಾಗಿಸಲಾಗಿದೆ ಎಂದು ಆರೋಪಿಸಿದ್ದಾರೆ. ಶಿವಸೇನೆ ನಾಯಕ ಉದ್ಧವ್ ಠಾಕ್ರೆ ನೀಡಿದ್ದ 4 ಕೆ.ಜಿ. ತೂಕದ ಬೆಳ್ಳಿ ಇಟ್ಟಿಗೆ ಸೇರಿ ಸುಮಾರು 200 ಕೆ.ಜಿ. ಬೆಳ್ಳಿಗಟ್ಟಿ ಕಳವಾಗಿರುವ ಅನುಮಾನವೂ ಕೇಳಿಬಂದಿದೆ.

ಇನ್ನೊಂದೆಡೆ, ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿ ಅವರು ದೇಣಿಗೆ ಮತ್ತು ಕಾಣಿಕೆ ಕಳವು ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಭಕ್ತರ ಭಾವನೆಗಳಿಗೆ ಧಕ್ಕೆಯಾದ ಈ ಘಟನೆ ಬೇಸರದ ಸಂಗತಿ ಎಂದು ಪ್ರತಿಕ್ರಿಯಿಸಿದ್ದಾರೆ. ರಾಮ ಮಂದಿರ ದೇಣಿಗೆ ಅಕ್ರಮ ಪ್ರಕರಣ ಇದೀಗ ಭಾರೀ ಸಂಚಲನ ಮೂಡಿಸಿದ್ದು, ಟ್ರಸ್ಟ್ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳತ್ತ ದೇಶದ ಗಮನ ಕೇಂದ್ರೀಕೃತವಾಗಿದೆ.

Exit mobile version