ದೆಹಲಿ, ನ.7: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒಂದು ದೊಡ್ಡ ಬಾಂಬ್ ಸಿಡಿಸಿದರು. “ಹರಿಯಾಣದ ಮತದಾರರ ಪಟ್ಟಿಯಲ್ಲಿ ಬ್ರೆಜಿಲ್‌ನ ಸುಂದರಿ ಮಾಡೆಲ್‌ನ ಫೋಟೋ ೨೨ ಬಾರಿ ಕಾಣಿಸಿಕೊಂಡಿದೆ. ಇದು ವೋಟ್ ಚೋರಿ!” ಎಂದು ಆರೋಪಿಸಿದರು. ಆದರೆ ಆ ಫೋಟೋದ ಹಿಂದಿನ ನಿಜವಾದ ಮಹಿಳೆ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.
ಮತದಾರೆಯಾದ ಪಿಂಕಿ ಜುಗಿಂದರ್ ಕೌಶಿಕ್ ಎಂದು ಹೇಳಲಾಗಿದ್ದು, ಅವರೇ ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ. ಅವರು ಯಾವುದೇ ಮತ ಕಳ್ಳತನ ಅಥವಾ ವೋಟ್ ಚೋರಿ ನಡೆದಿಲ್ಲವೆಂದು ಹೇಳಿದ್ದಾರೆ. “ನನಗೆ ಮತದಾನ ಮಾಡಲು ಯಾವುದೇ ತೊಂದರೆ ಆಗಿಲ್ಲ. ನಾನು ಸ್ವತಃ ಮತದಾನ ಮಾಡಿದ್ದೇನೆ,” ಎಂದು ಪಿಂಕಿ ಹೇಳಿದ್ದಾರೆ.
“ನನ್ನ ಹೆಸರು, ವಿಳಾಸ ಎಲ್ಲವೂ ಮತದಾರರ ಪಟ್ಟಿಯಲ್ಲಿ ಸರಿಯಾಗಿವೆ. ಆದರೆ ನನ್ನ ಫೋಟೋ ತಪ್ಪಾಗಿದೆ. ನಾನು ವೋಟರ್ ಐಡಿಗೆ ಅರ್ಜಿ ಸಲ್ಲಿಸಿದಾಗ ನನಗೆ ಬಂದ ಕಾರ್ಡ್‌ನಲ್ಲಿ ತಪ್ಪು ಫೋಟೋ ಮುದ್ರಿತವಾಗಿತ್ತು. ಅದನ್ನು ಸರಿಪಡಿಸಲು ನಾನು ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಆದರೆ ಇಂದಿಗೂ ಸರಿಯಾದ ಫೋಟೋ ಹೊಂದಿರುವ ವೋಟರ್ ಐಡಿ ನನಗೆ ಸಿಕ್ಕಿಲ್ಲ. ಆದರೂ ನಾನು ನನ್ನ ವೋಟರ್ ಸ್ಲಿಪ್ ಮತ್ತು ಗುರುತಿನ ಚೀಟಿಯ ಮೂಲಕ ಮತ ಚಲಾಯಿಸಿದ್ದೇನೆ” ಎಂದು ಪಿಂಕಿ ಹೇಳಿದ್ದಾರೆ.
ಪಿಂಕಿ ಹೇಳುವಂತೆ, ತಪ್ಪು ಮುದ್ರಣ ನಡೆದಿದ್ದರೂ ಮತದಾನದಲ್ಲಿ ತಡೆ ಇರಲಿಲ್ಲ. “ಯಾರು ಫೋಟೋ ತಪ್ಪಾಗಿ ಹಾಕಿದ್ದಾರೆ ಗೊತ್ತಿಲ್ಲ. ಆದರೆ ಅದು ನನ್ನ ತಪ್ಪಲ್ಲ. ನಾನು 2024ರ ಲೋಕಸಭಾ ಚುನಾವಣೆಯಲ್ಲೂ ಮತ ಚಲಾಯಿಸಿದ್ದೇನೆ,” ಎಂದು ಅವರು ಹೇಳಿದ್ದಾರೆ.





