ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು 2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 25 ಲಕ್ಷ ಮತಗಳು ಕಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಈ ಆರೋಪಗಳನ್ನು ದಾಖಲೆಗಳೊಂದಿಗೆ ಮಂಡಿಸಿದರು.
ಹರಿಯಾಣ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ರಾಹುಲ್ ಹೇಳಿದರು. ಬಿಜೆಪಿ ಗೆದ್ದಿರುವುದು ನಕಲಿ ಮತಗಳಿಂದಲೇ ಸಾಧ್ಯವಾಗಿದೆ ಎಂಬುದು ಖಚಿತವಾಗಿದೆ. ಮಹಾದೇವಪುರ ಮತ್ತು ಆಳಂದ್‌ನಂತಹ ಘಟನೆಗಳ ನಂತರ ಇದು ಕೆಲವು ಕ್ಷೇತ್ರಗಳಿಗೆ ಮಾತ್ರ ಸೀಮಿತವಲ್ಲ. ಇದು ಇಡೀ ರಾಜ್ಯ ಮತ್ತು ದೇಶವನ್ನೇ ಆವರಿಸಿಕೊಂಡಿದೆ. ಹರಿಯಾಣದ ಜೊತೆಗೆ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲೂ ಇದೇ ರೀತಿಯ ದೂರುಗಳು ಬಂದಿವೆ. ಆದರೆ ಈಗ ನಾವು ಹರಿಯಾಣವನ್ನೇ ಕೇಂದ್ರೀಕರಿಸಿ ಪ್ರಕರಣವನ್ನು ಪರಿಶೀಲಿಸುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಚುನಾವಣೆಗೂ ಮುನ್ನ ನಡೆದ ಎಲ್ಲಾ ಸಮೀಕ್ಷೆಯಲ್ಲಿ ಕಾಂಗ್ರೆಸ್ 52ರಿಂದ 62 ಸ್ಥಾನಗಳವರೆಗೆ ಗೆಲ್ಲಲಿದೆ ಎಂದು ನಿರೀಕ್ಷಿಸಲಾಗಿತ್ತು. ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಸ್ವೀಪ್ ಮಾಡಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಫಲಿತಾಂಶಗಳು ಸಂಪೂರ್ಣ ವಿರುದ್ಧವಾಗಿ ಬಂದವು. ಆದರೆ ಬಿಜೆಪಿ ಬಹುಮತ ಪಡೆದು ಸರ್ಕಾರ ರಚಿಸಿತು. ಇದರ ಹಿಂದೆ ಏನಿದೆ ಎಂಬ ಪ್ರಶ್ನೆಗೆ ರಾಹುಲ್ ಉತ್ತರ ನೀಡಿದರು. ಹರಿಯಾಣದಲ್ಲಿ ಮೊದಲ ಬಾರಿಗೆ ಅಂಚೆ ಮತಗಳು ಮತ್ತು ಸಾಮಾನ್ಯ ಮತಗಳ ನಡುವೆ ದೊಡ್ಡ ವ್ಯತ್ಯಾಸ ಕಂಡುಬಂದಿದೆ ಎಂದರು.
ಕಾಂಗ್ರೆಸ್ ಕೇವಲ 22,779 ಮತಗಳ ಅಂತರದಿಂದ ಸೋತಿದೆ ಎಂದು ಹೇಳಲಾಗುತ್ತಿದೆ. ಆದರೆ ಒಟ್ಟಾರೆಯಾಗಿ 1.18 ಲಕ್ಷ ಮತಗಳ ವ್ಯತ್ಯಾಸ ಇದೆ. ಇದಕ್ಕಿಂತ ಹೆಚ್ಚಾಗಿ, ಹರಿಯಾಣದಲ್ಲಿ 25 ಲಕ್ಷ ಮತಗಳ ಕಳ್ಳತನ ನಡೆದಿದೆ ಎಂಬುದು ದಾಖಲೆಗಳಿಂದ ಸಾಬೀತಾಗಿದೆ. ಶೇಕಡಾ 12.5ರಷ್ಟು ನಕಲಿ ಮತಗಳು ಚುನಾವಣೆಯಲ್ಲಿ ಬಳಕೆಯಾಗಿವೆ. ಇದಲ್ಲದೆ, 93,000ಕ್ಕೂ ಹೆಚ್ಚು ವಿಳಾಸಗಳು ಅಮಾನ್ಯವಾದವುಗಳು ಎಂದು ರಾಹುಲ್ ದಾಖಲೆಗಳನ್ನು ತೋರಿಸಿ ವಿವರಿಸಿದರು.
ಹರಿಯಾಣದಲ್ಲಿ ಬ್ರೆಜಿಲ್ ಮಾಡೆಲ್ 22 ಬಾರಿ ಮತ ಚಲಾಯಿಸಿದ್ದಾರೆ: ರಾಹುಲ್ ಗಾಂಧಿ
ನವದೆಹಲಿ (ನ.5): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹರಿಯಾಣ ಚುನಾವಣೆಯ ಮತದಾರರ ಪಟ್ಟಿಯಲ್ಲಿ “ಮತಗಳ್ಳತನ” ನಡೆದಿವೆ ಎಂದು ಆರೋಪಿಸಿದ್ದಾರೆ. ಬುಧವಾರ ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಒಬ್ಬ ಬ್ರೆಜಿಲ್ ಮೂಲದ ಮಾಡೆಲ್ ಹರಿಯಾಣದ 10 ಮತಗಟ್ಟೆಗಳಲ್ಲಿ 22 ಬಾರಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾಳೆ” ಎಂದು ಆರೋಪ ಮಾಡಿದರು.
“ಈ ಮಹಿಳೆ ಯಾರು? ಆಕೆಯ ಹೆಸರೇನು? ಆಕೆ ಬ್ರೆಜಿಲ್‌ನವಳು, ಆದರೆ ಹರಿಯಾಣದಲ್ಲಿ ಸೀಮಾ, ಸ್ವೀಟಿ, ಸರಸ್ವತಿ, ರಶ್ಮಿ, ವಿಲ್ಮಾ ಎಂಬ ಹಲವು ಹೆಸರಿನಲ್ಲಿ ಮತದಾರಳಾಗಿ ದಾಖಲಾಗಿದ್ದಾಳೆ. ಒಂದೇ ವ್ಯಕ್ತಿ 10 ಬೂತ್‌ಗಳಲ್ಲಿ 22 ಬಾರಿ ನೋಂದಾಯಿಸಿಕೊಂಡಿರುವುದು ಹೇಗೆ ಸಾಧ್ಯ?” ಎಂದು ರಾಹುಲ್ ಪ್ರಶ್ನಿಸಿದರು.
“ನಕಲಿ ಮತಗಳು ಮತ್ತು ಅಂಚೆ ಮತಪತ್ರಗಳ ದುರ್ಬಳಕೆ ಮೂಲಕ ಬಿಜೆಪಿ ತನ್ನ ಗೆಲುವು ಖಚಿತಪಡಿಸಿಕೊಂಡಿದೆ. ಇದು ಭಾರತದ ಚುನಾವಣಾ ವ್ಯವಸ್ಥೆಯ ನಂಬಿಕೆಯನ್ನು ಹಾಳು ಮಾಡುವಂತಹ ಮಹಾ ಪಿತೂರಿ,” ಎಂದು ಗಾಂಧಿ ಹೇಳಿದರು.
25 ಲಕ್ಷ ಮತಗಳ ಕಳ್ಳತನದ ಆರೋಪ
ರಾಹುಲ್ ಗಾಂಧಿಯವರ ಪ್ರಕಾರ, ಹರಿಯಾಣದಲ್ಲಿ ನಡೆದ 2024ರ ಚುನಾವಣೆಯಲ್ಲಿ ಸುಮಾರು 25 ಲಕ್ಷ ಮತಗಳು ಕಳುವಾಗಿವೆ.
ಅಂಕಿ-ಅಂಶಗಳ ಪ್ರಕಾರ
-
5.21 ಲಕ್ಷ ನಕಲಿ ಮತದಾರರು
-
93,174 ಅಮಾನ್ಯ ಮತದಾರರು
-
19.26 ಲಕ್ಷ ಬಲ್ಕ್ ವೋಟರ್ಸ್ (ಒಟ್ಟಾಗಿ ಮತ ಹಾಕಿದವರು)
“ಹರಿಯಾಣದ ಮತದಾರರ ಪಟ್ಟಿಯಲ್ಲಿ ಎಂಟು ಜನರಲ್ಲಿ ಒಬ್ಬರು ನಕಲಿ ಮತದಾರರಾಗಿದ್ದಾರೆ. ಈ ಅಂಕಿ-ಅಂಶಗಳು ಕೇವಲ ಒಂದು ಜಿಲ್ಲೆ ಅಥವಾ ಕ್ಷೇತ್ರದ ವಿಷಯವಲ್ಲ, ಇಡೀ ರಾಜ್ಯದ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಯಂತ್ರದ ಭಾಗವಾಗಿದೆ” ಎಂದು ರಾಹುಲ್ ಆರೋಪಿಸಿದರು.
ಅವರು, ಈ ವಿಷಯಕ್ಕೆ “ಎಚ್ ಫೈಲ್ಸ್ (H-Files)” ಎಂಬ ಹೆಸರನ್ನು ನೀಡಿದ್ದು, “ಈ ಫೈಲ್‌ನಲ್ಲಿ ಮತದಾರರ ಪಟ್ಟಿಯ ಹಗರಣದ ಸಂಪೂರ್ಣ ಪುರಾವೆಗಳಿವೆ. ಇದು ಕೇವಲ ಹರಿಯಾಣದಲ್ಲಲ್ಲ, ರಾಷ್ಟ್ರಮಟ್ಟದಲ್ಲಿಯೂ ನಡೆಯುತ್ತಿವೆ ಎಂದರು.
“ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವನ್ನು ಸೋಲಾಗಿ ಪರಿವರ್ತಿಸಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಿತೂರಿ ನಡೆಸುತ್ತಿವೆ,” ಎಂದು ರಾಹುಲ್ ಗಾಂಧಿ ಆರೋಪಿಸಿದರು. “ಈ ಹಗರಣ ಭಾರತದ ಯುವಜನತೆ, ವಿಶೇಷವಾಗಿ ಜೆನ್‌ಜೀ ಪೀಳಿಗೆ, ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಾದ ವಿಷಯ. ಇದು ನಿಮ್ಮ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ನೇರವಾಗಿ ಸಂಬಂಧಪಟ್ಟಿದೆ,” ಎಂದು ಅವರು ಎಚ್ಚರಿಸಿದರು.
“ನಾನು ಚುನಾವಣಾ ಆಯೋಗವನ್ನು ನೇರವಾಗಿ ಪ್ರಶ್ನಿಸುತ್ತಿದ್ದೇನೆ. ನಾವು 100% ಪುರಾವೆಗಳೊಂದಿಗೆ ಮಾತನಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಗೆಲುವನ್ನು ಸೋಲಾಗಿ ತಿರುಗಿಸಲು ಯೋಜಿತ ಕೃತ್ಯ ನಡೆದಿದೆ,” ಎಂದು ಸ್ಪಷ್ಟವಾಗಿ ಹೇಳಿದರು.





